Asianet Suvarna News Asianet Suvarna News

13,000 ಕನ್ನಡಿಗರಿಗೆ ಉದ್ಯೋಗ ನೀಡಲಿದೆ ಫಾಕ್ಸ್‌ಕಾನ್‌ ಸಂಸ್ಥೆ: 5,000 ಕೋಟಿ ರೂ. ಹೂಡಿಕೆಗೆ ಒಪ್ಪಂದ

ಕರ್ನಾಟಕದಲ್ಲಿ 5,000 ಕೋಟಿ ರೂ. ಬಂಡವಾಳ ಹೂಡುವ ಫಾಕ್ಸ್‌ಕಾನ್‌ ಸಂಸ್ಥೆ ಕರ್ನಾಟಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ರಾಜ್ಯದಲ್ಲಿ 13,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

Foxconn will provide 13000 employment to Kannadigas Agreement to invest Rs 5000 crore in Karnataka sat
Author
First Published Aug 2, 2023, 5:53 PM IST

ಬೆಂಗಳೂರು (ಆ.02): ಕರ್ನಾಟಕದಲ್ಲಿ ಬರೋಬ್ಬರಿ 5,000 ಕೋಟಿ ರೂ. ಮೊತ್ತದ ಬಂಡವಾಳ ಹೂಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಫಾಕ್ಸ್‌ಕಾನ್‌ ಸಹಿ ಮಾಡಿದೆ. ಈ ಯೋಜನೆಗಳಿಂದ ರಾಜ್ಯದ ನಿರುದ್ಯೋಗಿಗಳಿಗೆ 13,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಚೆನ್ನೈನ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಫೋನ್ ಎನ್‌ಕ್ಲೋಸರ್ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಸೆಮಿಕಾನ್ ಉಪಕರಣಗಳ ಯೋಜನೆ ಜಾರಿ ಸಂಬಂಧ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಫಾಕ್ಸ್‌ಕಾನ್ ಅಧ್ಯಕ್ಷ  ಯಂಗ್ ಲಿಯು (Foxconn president Young Liu) ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಬುಧವಾರ ಅಧಿಕೃತವಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಗೂ ತಮಿಳು ಮಾದರಿಯಲ್ಲಿ ಸ್ವಾಯತ್ತ ಸ್ಥಾನಮಾನ ಕೊಡಿ: ಸಂಸತ್ತಿನಲ್ಲಿ ಈರಣ್ಣ ಕಡಾಡಿ ಆಗ್ರಹ

ಫಾಕ್ಸ್‌ಕಾನ್  ಮತ್ತು ಕರ್ನಾಟಕ ಸರ್ಕಾರದ ನಡುವಿನ ಈ ಒಪ್ಪಂದವು ತಂತ್ರಜ್ಞಾನದ ಪ್ರಗತಿ ಮತ್ತು ರಾಜ್ಯದ ಒಟ್ಟಾರೆ ಸಾಮಾಜಿಕ- ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ತರಲಿದೆ. ಮುಖ್ಯವಾಗಿ ಸಾವಿರಾರು ನುರಿತ ಕೆಲಸಗಾರರಿಗೆ ಉದ್ಯೋಗ ದೊರೆಯುತ್ತದೆ. ರಾಜ್ಯದಲ್ಲಿ ಬಂಡವಾಳ ಹೂಡಲಿರುವ ಫಾಕ್ಸ್‌ಕಾನ್‌ಗೆ ಎಲ್ಲ ರೀತಿಯ ಬೆಂಬಲ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ತಂತ್ರಜ್ಞಾನ ಮತ್ತು ಆವಿಷ್ಕಾರ ವಲಯದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಫಾಕ್ಸ್‌ಕಾನ್‌ ಮುಂದೆ ಬಂದಿರುವುದು ಸಂತೋಷದ ವಿಷಯ. ಬಂಡವಾಳ ಆಕರ್ಷಣೆ ಮತ್ತು ಕಂಪನಿಗಳಿಗೆ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸಲು ನಮ್ಮ ನೀತಿಗಳು ಪೂರಕವಾಗಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು

ಹೈಟೆಕ್‌ ಉದ್ಯಮಕ್ಕೆ ಕರ್ನಾಟಕ ಆಕರ್ಷಕ ತಾಣ:
ಕರ್ನಾಟಕ ಸರ್ಕಾರದ ಜತೆ ಯೋಜಿತ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಮ್ಮ ಹೈಟೆಕ್ ಉದ್ಯಮಗಳಿಗೆ ರಾಜ್ಯ ಆಕರ್ಷಕ ತಾಣವಾಗಿದೆ. ಉದ್ಯಮಕ್ಕೆ ಪೂರಕವಾದ ವಾತಾವರಣವಿದ್ದು, ನುರಿತ ಕೆಲಸಗಾರರ ಲಭ್ಯತೆ ಇಲ್ಲಿನ ವಿಶೇಷ. ಈ 2 ಪ್ರಮುಖ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲಿದ್ದೇವೆ.
- ಯಂಗ್ ಲಿಯು, ಫಾಕ್ಸ್‌ಕಾನ್‌ನ ಅಧ್ಯಕ್ಷ

ಈ ಸಂದರ್ಭದಲ್ಲಿ ಚೆನ್ನೈನಲ್ಲಿ ತಮ್ಮ ಜತೆಗೆ ಐಟಿ ಬಿಟಿ, ಸಚಿವ ಪ್ರಿಯಾಂಕ್ ಖರ್ಗೆ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮತ್ತು ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು. ಸಚಿವ ಎಂ.ಬಿ. ಪಾಟೀಲ, ಈ ಎರಡೂ ಒಪ್ಪಂದಗಳು, ಈ ಮೊದಲು ಮಾಡಿಕೊಂಡಿದ್ದ 14 ಸಾವಿರ ಕೋಟಿ ಮೊತ್ತದ ಆ್ಯಪಲ್ ಫೋನ್ ತಯಾರಿಕಾ ಘಟಕ ಹೊರತಾದವು. ಇದಕ್ಕೂ ದೊಡ್ಡಬಳ್ಳಾಪುರ ಸಮೀಪ ಭೂಮಿ ನೀಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ ವರ್ಗಾವಣೆ ದಂಧೆಗೆ ಸಾಕ್ಷಿಯಾಯ್ತಾ 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆ ಆದೇಶ..!

ಯೋಜನೆಗಳ ವಿವರ:
1. ಫೋನ್ ಎನ್‌ಕ್ಲೋಸರ್‌- FII: ಐಫೋನ್‌ಗಳ ಮೆಕ್ಯಾನಿಕಲ್ ಎನ್‌ಕ್ಲೋಸರ್‌ನಂತಹ ಸ್ಮಾರ್ಟ್‌ಫೋನ್‌ನ ಉಪ ಘಟಕಗಳನ್ನು ತಯಾರಿಸುವ ಸಂಸ್ಥೆಯಾದ ಫಾಕ್ಸ್ ಕಾನ್ ಇಂಡಸ್ಟ್ರಿಯಲ್ ಇಂಟರ್ ನೆಟ್ (FII)ನ ಹೂಡಿಕೆ ಮೊತ್ತ 350 ದಶಲಕ್ಷ ಡಾಲರ್ (3,000 ಕೋಟಿ ರೂ.) ಯೋಜನೆಯಡಿ 12,000 ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಎಫ್‌ಐಐ ಉದ್ದೇಶಿಸಿದೆ.

2. ಸೆಮಿಕಾನ್ ಉಪಕರಣಗಳು- ಅಪ್ಲೈಡ್‌ ಮೆಟೀರಿಯಲ್ಸ್‌ ಸಹಯೋಗದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಉಪಕರಣಗಳ ತಯಾರಿಸುವ ಸಂಸ್ಥೆಯ ಯೋಜಿತ ಯೋಜನೆಯ  ಹೂಡಿಕೆ  ಮೊತ್ತ 250 ದಶಲಕ್ಷ ಡಾಲರ್ (2,000 ಕೋಟಿ ರೂ.). ಇದರಿಂದ 1,000 ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ - 2 ನೇ ಹಂತದಲ್ಲಿ ಈ ಯೋಜನೆಗಾಗಿ 35 ಎಕರೆ ಭೂಮಿಯನ್ನು ಅಂತಿಮಗೊಳಿಸಲಾಗಿದೆ.

Follow Us:
Download App:
  • android
  • ios