Asianet Suvarna News Asianet Suvarna News

Mysuru; ನಿರುದ್ಯೋಗಿಗಳ ಬದುಕಿಗೆ ಆಸರೆಯಾದ ಶಿವು, ಇದು ನಿವೃತ್ತಯೋಧನ ಯಶೋಗಾಥೆ

 ಸೇನೆಯಿಂದ ನಿವೃತ್ತಿಯಾಗಿ ಊರಿಗೆ ಬಂದ ನಂತರ ತಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ರಾವಂದೂರು ಪದವಿಪೂರ್ವ ಕಾಲೇಜು ಆವರಣದಲ್ಲಿ ಸೈನಿಕ ತರಬೇತಿ ಪ್ರಾರಂಭಿಸಿ ತಾಲೂಕಿನ ವಿವಿಧ ಗ್ರಾಮಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ ನಿವೃತ್ತ ಯೋಧ

ex army Shivu who supports unemployed youths in mysuru near  Periyapatna gow
Author
Bengaluru, First Published Aug 22, 2022, 4:33 PM IST

ಮುಕುಂದ ರಾವಂದೂರು

ರಾವಂದೂರು (ಆ.22): ಪಿರಿಯಾಪಟ್ಟಣ ತಾಲೂಕು ರಾವಂದೂರಿನ ಶಿವು ಸೇನೆಯಿಂದ ನಿವೃತ್ತಿಯಾಗಿ ಬಂದ ನಂತರ ತಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ರಾವಂದೂರು ಪದವಿಪೂರ್ವ ಕಾಲೇಜು ಆವರಣದಲ್ಲಿ ಸೈನಿಕ ತರಬೇತಿ ಪ್ರಾರಂಭಿಸಿ ತಾಲೂಕಿನ ವಿವಿಧ ಗ್ರಾಮಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದನ್ನು ಗಮನಿಸಿದ ಮಾಜಿ ಸೈನಿಕರುಗಳು ತಾಲೂಕು ಮಟ್ಟದಲ್ಲಿ ಯುವ ಭಾರತ ಸೈನಿಕ, ಪೋಲೀಸ್‌ ತರಬೇತಿ ಹಾಗೂ ಸಮಾಜ ಸೇವಾ ಟ್ರಸ್ಟ್‌ (ರಿ) ಎಂಬ ಸಂಘ ಸ್ಥಾಪಿಸಿ ತಾಲೂಕಿನ ರಾವಂದೂರು, ಬೆಟ್ಟದಪುರ, ಪಿರಿಯಾಪಟ್ಟಣ, ಕೆ.ಆರ್‌. ನಗರ, ಸಾಲಿಗ್ರಾಮ, ಮುಂತಾದ ಗ್ರಾಮಗಳಲ್ಲಿ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು, ಇತ್ತೀಚೆಗೆ ಹಾಸನದಲ್ಲಿ ನಡೆದ ಅಗ್ನಿಪಥ್‌ ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ 47 ಯುವಕರು ಆಯ್ಕೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಏಕಕಾಲದಲ್ಲಿ 47ಕ್ಕೂ ಹೆಚ್ಚು ಯುವಕರು ಸೇನೆಗೆ ಸೇರಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಹಲವು ಕಡೆ ತರಬೇತಿ ಪಡೆಯಲು ಶುಲ್ಕ ಪಾವತಿಸಬೇಕು. ಆದರೆ ಗ್ರಾಮೀಣ ಯುವಕರ ಸಮಸ್ಯೆಗಳನ್ನು ಅರಿತು ಉಚಿತ ತರಬೇತಿ ನೀಡಲಾಗುತ್ತಿದ್ದು, ಈ ತರಬೇತಿಯಲ್ಲಿ ಭಾಗವಹಿಸುತ್ತಿರುವ ಯುವಕರಿಗೆ ದಾನಿಗಳಿಂದ ತರಬೇತಿಗೆ ಬೇಕಾದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದಲ್ಲಿ ನಿವೃತ್ತಿ ಹೊಂದಿದ ಸೈನಿಕರು ತಮ್ಮ ಗ್ರಾಮದ ನಿರುದ್ಯೋಗಿ ಯುವಕರಿಗೆ ಈ ರೀತಿ ತರಬೇತಿ ನೀಡುವ ಮೂಲಕ ನಿರುದ್ಯೋಗಿಗಳ ಬದುಕಿಗೆ ಬೆಳಕಾಗಬಹುದು.

ನಾನು ಸೇನೆಯಿಂದ ನಿವೃತ್ತಿಹೊಂದಿದ ಬಳಿಕೆ ಸುಮ್ಮನೆ ಮನೆಯಲ್ಲಿಯೇ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಯುವಕರಿಗೆ ತರಬೇತಿ ನೀಡಿ ಸೇನೆ ಅಥವಾ ಪೋಲೀಸ್‌ ನೇಮಕಾತಿಗೆ ಸಹಾಯ ಮಾಡಬೇಕು ಎಂಬ ಯೋಚನೆಯಿಂದ ಚಿಕ್ಕದಾಗಿ ಪ್ರಾರಂಭಿಸಿದ ತರಬೇತಿ ಈಗ ಜಿಲ್ಲಾದ್ಯಂತ ಪ್ರತಿ ದಿನವೂ ತರಬೇತಿ ನೀಡುವಂತೆ ಯುವಕರು ಪ್ರೇರೇಪಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಯುವಕರಿಗೆ ದಾರಿ ದೀಪವಾದಂತಾಗುತ್ತದೆ.

- ಶಿವು, ನಿವೃತ್ತ ಯೋಧ.

ನಾನು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದು, ಸೇನೆಗೆ ಸೇರಬೇಕು ಎಂಬ ಹಂಬಲವಿತ್ತು. ಈ ವೇಳೆ ನನಗೆ ರಾವಂದೂರಿನಲ್ಲಿ ತರಬೇತಿ ನೀಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಇಲ್ಲಿಗೆ ಬಂದು ತರಬೇತಿ ಪಡೆದು ಅಗ್ನಿಪಥ್‌ ನೇಮಕಾತಿಯಲ್ಲಿ ಆಯ್ಕೆಯಾಗಿರುವುದು ನಮ್ಮ ಕುಟುಂಬದಲ್ಲಿ ತುಂಬ ಸಂತಸವನ್ನುಂಟು ಮಾಡಿದೆ. ನನ್ನ ಬದುಕಿಗೆ ದಾರಿ ದೀಪವಾದ ಶಿವು ಅವರು ಇನ್ನು ಹಲವಾರು ನಿರುದ್ಯೋಗಿ ಯುವಕರಿಗೆ ದಾರಿ ದೀಪವಾಗುತ್ತಾರೆ ಎಂಬ ನಂಬಿಕೆ ನನಗಿದೆ.

- ಡಿ.ಪಿ. ಸೇವಗ್‌, ದೊಡ್ಡೇಗೌಡನಕೊಪ್ಪಲು.

ಗ್ರಾಮೀಣಯುವಕರ ಪ್ರತಿಭೆ ಹೊರತರುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತ ನಿವೃತ್ತಿಯೋಧ ಶಿವು ಅವರು ಉತ್ತಮ ತರಬೇತಿ ಹಾಗೂ ಕೌಶಲ ನೀಡುವ ಮೂಲಕ ಹೆಚ್ಚಿನ ಯುವಕರನ್ನು ದೇಶಸೇವೆಗೆ ಪ್ರೇರೇಪಿಸಿರುವುದು ಬಹಳ ಸಂತಸದ ಸಂಗತಿ.

- ಎಂ.ಎಂ. ಸಂದೀಪ್‌, ಎಚ್‌. ಮಠದ ಕೊಪ್ಪಲು.

Follow Us:
Download App:
  • android
  • ios