Asianet Suvarna News Asianet Suvarna News

ಓಲಾ ಝೊಮ್ಯಾಟೋದಲ್ಲಿ ದುಡಿಯುತ್ತ ಸಾಫ್ಟವೇರ್ ಇಂಜಿನಿಯರ್ ಆದ ಯುವಕ

ತರುಣನೋರ್ವ ಓಲಾದಲ್ಲಿ ಕಾರು ಚಾಲಕನಾಗಿ ಹಾಗೂ ಝೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ದುಡಿಯುತ್ತಲೇ ತನ್ನ ಶಿಕ್ಷಣವನ್ನು ಮುಂದುವರೆಸಿ ಈಗ ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಈತನ ಕತೆ ಈಗ ಇಂಟರ್‌ನೆಟ್ ಸೆನ್ಸೇಷನ್ ಆಗಿದೆ.
 

Delivery Boy Becomes A Software Engineer Who Worked at Ola & Zomato akb
Author
Bangalore, First Published May 30, 2022, 5:32 PM IST

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ. ಅದರಂತೆ ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದು ಅಡ್ಡಿಯಾಗದು. ತಮಗಿದ್ದ ಎಲ್ಲಾ ಅಡೆತಡೆಗಳನ್ನು ಮೀರಿ ಸಾಧನೆ ಮಾಡಿ ತೋರಿಸಿದ ಅನೇಕ ಸಾಧಕರು ನಮ್ಮ ಸಮಾಜದಲ್ಲಿದ್ದಾರೆ. ಅಂತಹವರ ಸಾಲಿಗೆ ಹೊಸ ಸೇರ್ಪಡೆ ಈ ಯುವಕ. ಹೌದು ಝೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಓಲಾದಲ್ಲಿ ಕ್ಯಾಬ್‌ ಡ್ರೈವರ್ ಆಗಿ ಅದರೊಂದಿಗೆ ಓದನ್ನು ಮುಂದುವರೆಸಿದ ಯುವಕನೋರ್ವ ಇಂದು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಈತನ ಸಾಹಸಗಾಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದ ನಿವಾಸಿಯಾಗಿರುವ ಶೇಕ್ ಅಬ್ದುಲ್ ಸತಾರ್  ಎಂಬ ಯುವಕನೇ ತನ್ನ ಸಾಧನೆ ಮೂಲಕ ಹಲವರಿಗೆ ಸಾಧನೆ ಮಾಡಲು ಪ್ರೇರಣೆಯಾದ ಯುವಕ. ಡೆಲಿವರಿ ಬಾಯ್‌ ಆಗಿ ಪಾರ್ಟ್‌ಟೈಮ್ ಉದ್ಯೋಗ ಮಾಡುತ್ತಾ ಸಾಫ್ಟ್‌ವೇರ್‌ ಎಂಜಿನಿಯರ್ ಆಗುವ ತನ್ನ ಕನಸನ್ನು ತಾನು ಹೇಗೆ ಈಡೇರಿಸಿಕೊಂಡೆ ಎಂಬ ಯಶಸ್ಸಿನ ಕತೆಯನ್ನು ಈ ಯುವಕ ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾದಗಿರಿ: ಅಂದು ಭಿಕ್ಷುಕಿ ಇಂದು SSLC ಫಲಿತಾಂಶದಲ್ಲಿ ಸಾಧಕಿ...!
 

ಮೂಲತಃ ಗುತ್ತಿಗೆ ಕೆಲಸಗಾರನ ಮಗನಾದ ಶೇಕ್, ಓಲಾ, ಜೊಮಾಟೊ ಮತ್ತು ಸ್ವಿಗ್ಗಿಯಂತಹ ಕಂಪನಿಗಳಿಗೆ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಈ ಮೂಲಕ ತನ್ನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರು. ಅದರ ಜೊತೆಗೆ ಸ್ನೇಹಿತನ ಸಲಹೆಯ ಮೇರೆಗೆ, ಕೋಡಿಂಗ್‌ ಮಾಡುವುದನ್ನು ಕಲಿತರು ಮತ್ತು ಸ್ವತಃ ಆ ಕೋರ್ಸ್‌ಗೆ ಸೇರಿಕೊಂಡರು. ಇದರೊಂದಿಗೆ ತಮ್ಮ ಪಾರ್ಟ್‌ ಟೈಮ್ ಜಾಬ್ ಆದ ಡೆಲಿವರಿ ಕೆಲಸವನ್ನು ಸಂಜೆ 6 ರಿಂದ ರಾತ್ರಿ 12 ಗಂಟೆವರೆಗೆ ಮಾಡುತ್ತಿದ್ದ ಅವರು ಹಗಲಿನಲ್ಲಿ ಸ್ವತಃ ತಮ್ಮ ಸ್ವಂತ ಕೌಶಲ್ಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದರು.

ಅವರು ಲಿಂಕ್ಡಿನ್‌ನಲ್ಲಿ ಬರೆದುಕೊಂಡ ಯಶಸ್ಸಿನ ಸಾಹಸಗಾಥೆಯ ಸಾರಾಂಶ ಹೀಗಿದೆ. ನಾನು ಹಲವು ಕನಸುಗಳನ್ನು ಹೊಂದಿದ್ದ ಡೆಲಿವರಿ ಬಾಯ್, ಓಲಾ(Ola), ಸ್ವಿಗ್ಗಿ(Swiggy), ಉಬರ್‌(Uber), ರಾಪಿಡೊ (Rapido), ಝೊಮ್ಯಾಟೋ(Zomato)-ನಾನು ಕಾಲೇಜಿನ ಅಂತಿಮ ವರ್ಷದಿಂದಲೂ ಎಲ್ಲೆಲ್ಲೂ ಇದ್ದೇನೆ. ನನ್ನ ತಂದೆ ಗುತ್ತಿಗೆ ಕಾರ್ಮಿಕರಾದ ಕಾರಣ ನಾನು ಸಾಧ್ಯವಾದಷ್ಟು ಬೇಗ ಆರ್ಥಿಕವಾಗಿ ಕೊಡುಗೆ ನೀಡಲು ಬಯಸಿದ್ದೆ. ಹಾಗಾಗಿ ನಮ್ಮ ಬಳಿ ಕೇವಲ ದೈನಂದಿನ ಬಳಕೆಗೆ ಸಾಕಾಗುವಷ್ಟು ಮಾತ್ರ ಹಣವಿತ್ತು. ನಾನು ಆರಂಭದಲ್ಲಿ ಅಂಜುಬುರುಕನಾಗಿದ್ದೆ, ಆದರೆ ಡೆಲಿವರಿ ಬಾಯ್ ಆದ ಬಳಿಕ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ. ಒಂದು ದಿನ, ಕೋಡಿಂಗ್ ಕಲಿಯಲು ನನಗೆ ಸಾಂದರ್ಭಿಕ ಸಲಹೆ ಸಿಕ್ಕಿತು. ನನ್ನ ಸ್ನೇಹಿತ ನನಗೆ ಒಂದು ಕೋರ್ಸ್ ಬಗ್ಗೆ ಹೇಳಿದ ಮತ್ತು ನಾನು ಅದಕ್ಕೆ ಸೇರಬೇಕೆಂದು ಒತ್ತಾಯಿಸಿದ. ನಾನು ಆತನ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡೆ ಮತ್ತು ನನ್ನ ಬೆಳಗ್ಗೆ ಕೋಡಿಂಗ್ ಕಲಿತರೆ ಸಂಜೆ 6:00 ರಿಂದ 12:00 ಗಂಟೆವರೆಗೆ ನಾನು ನನ್ನ  ಡೆಲಿವರಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. 

ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ, ಸಿಇಒ ದೀಪಿಂದರ್‌ ಘೋಷಣೆ
 

ಇಷ್ಟೇ ಅಲ್ಲದೇ ಶೇಕ್‌ ವೆಬ್ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಪ್ರಾರಂಭಿಸಿದರು ಮತ್ತು ಅವರು ಗಳಿಸಿದ ಹಣದಿಂದ ಕೆಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ತನ್ನ ಕೌಶಲ್ಯಗಳಿಗೆ ಸರಿಯಾಗಿ ನೀರೆರೆದ ನಂತರ ಅವರು ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಅಲ್ಲದೇ ತಾನು ಡೆಲಿವರಿ ಬಾಯ್  ಕೆಲಸದ ಮೂಲಕ ಉತ್ತಮ ಸಂವಹನ ಕೌಶಲ್ಯಗಳನ್ನು ಕಲಿತಿರುವುದಾಗಿ ಅವರು ಹೇಳಿದರು. ಇದಾಗಿ ಶೀಘ್ರದಲ್ಲೇ, ಅವರು ಪ್ರೋಬ್ ಇನ್ಫರ್ಮೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

ಶೀಘ್ರದಲ್ಲೇ, ನಾನು ಪ್ರೋಬ್ ಇನ್ಫರ್ಮೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (Probe42) ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಗಳಿಸಿದ್ದೇನೆ. ಖರ್ಚು ಮಾಡುವ ಪ್ರತಿ ರೂಪಾಯಿಯ ಬಗ್ಗೆಯೂ ಯೋಚಿಸುವಂತಿದ್ದ ಸಂದರ್ಭದಿಂದ ಬಂದ ನಾನು ಈಗ ನನ್ನ ಕೆಲವು ತಿಂಗಳ ಸಂಬಳದಲ್ಲಿ ನನ್ನ ಹೆತ್ತವರ ಸಾಲವನ್ನು ತೀರಿಸುವ ಹಂತಕ್ಕೆ ಬಂದಿದ್ದೇನೆ ಎಂದು ಅವರು ಬರೆದಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದೆ, ಮತ್ತು ಜನರು ಅವರ ಸಾಧನೆಗೆ ಶಹಭಾಷ್ ಅಂದಿದ್ದಾರೆ.

Follow Us:
Download App:
  • android
  • ios