Asianet Suvarna News Asianet Suvarna News

ಉದ್ಯೋಗದಲ್ಲಿ ಏಳ್ಗೆ: ಬಿಲ್ ಗೇಟ್ಸ್ ಹೇಳಿದ್ದು ಕೇಳಿ...

ಉದ್ಯೋಗ ಸಂಬಂಧ ಫ್ಲೆಕ್ಸಿಬಲ್ ಆರೇಂಜ್‌ಮೆಂಟ್ ಇಲ್ಲವೆಂದರೆ ಅಂಥಲ್ಲಿ ಯಾವ ಉದ್ಯೋಗಿಯೂ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಅದರಲ್ಲೂ ಬೇರೆ ಕಂಪನಿಗಳು ಹೆಚ್ಚು ಆಕರ್ಷಕ ವರ್ಕ್ ಟೈಂ ಹಾಗೂ ಪ್ಲೇಸ್ ಫ್ಲೆಕ್ಸಿಬಲಿಟಿ ನೀಡುತ್ತಿರುವಾಗ, ಇನ್ನೂ ಹಳೆಯ ಕಾಲದಂತೆ ಜನರನ್ನು ಕೋಣೆಯೊಳಗೆ ಕೂಡಿ ಹಾಕಿ ಗಡಿಯಾರ ನೋಡಿ ಕೆಲಸ ಮಾಡಿರೆಂದು ದುಡಿಸಿಕೊಳ್ಳುವ ಕಂಪನಿಗಳು ಹೆಚ್ಚು ಕಾಲ ಗೆಲ್ಲಲು ಸಾಧ್ಯವಿಲ್ಲ. 

Bill Gates offers the best advice to employers and everyone can relate to this
Author
Bengaluru, First Published Oct 16, 2019, 5:38 PM IST

ಇಂದು ಕೆಲಸ ಹಿಡಿಯುವುದು ಎಷ್ಟು ಸವಾಲಿನ ಕೆಲಸವೋ, ಪ್ರತಿಭಾವಂತರನ್ನು ಹುಡುಕಿ ಕೆಲಸಕ್ಕೆ ತೆಗೆದುಕೊಳ್ಳುವುದು ಕೂಡಾ ಉದ್ಯೋಗದಾತರಿಗೆ ಅಷ್ಟೇ ಸವಾಲಿನ ಕೆಲಸ. ಅದರಲ್ಲೂ ಇಂಥ ಬೆಸ್ಟ್ ಎಂಪ್ಲಾಯಿ‌ಗಳನ್ನು ಹೆಚ್ಚು ಕಾಲ ಕಂಪನಿಯಲ್ಲಿ ಉಳಿಸಿಕೊಳ್ಳುವುದು ಮತ್ತೂ ಕಷ್ಟದ ಕೆಲಸ. ಕೇವಲ ಉತ್ತಮ ಸಂಬಳವೊಂದೇ ಅವರನ್ನು ಕಂಪನಿಯಲ್ಲಿ ಉಳಿಸಿಕೊಳ್ಳಲಾಗದು. ಅತ್ಯುತ್ತಮ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅವರು ಉದ್ಯೋಗ- ವೈಯಕ್ತಿಕ ಜೀವನ ಸರಿತೂಗಿಸಲು ಸುಲಭವಾಗುವಂಥ ಉದ್ಯೋಗಗಳನ್ನು ಅರಸುತ್ತಲೇ ಇರುತ್ತಾರೆ. ಇತರೆ ಕಂಪನಿಗಳೂ ಅಷ್ಟೇ, ಅತ್ಯುತ್ತಮ ಉದ್ಯೋಗಿಗಳನ್ನು ಸೆಳೆಯಲು ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತವೆ. ಈ ಸ್ಪರ್ಧೆಯ ಬಗ್ಗೆ ಮೈಕ್ರೋಸಾಫ್ಟ್ ಕಾರ್ಪೋರೇಶನ್‌ನ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ಚೆನ್ನಾಗಿಯೇ ಅರಿವಿದೆ. ''ಅತ್ಯುತ್ತಮ ಉದ್ಯೋಗಿಗಳನ್ನು ಸೇರಿಸಿಕೊಳ್ಳುವ ಸ್ಪರ್ಧೆ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚುತ್ತದೆ. ಹೀಗಾಗಿ, ಕಂಪನಿಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹೆಚ್ಚಿನ ಫ್ಲೆಕ್ಸಿಬಲಿಟಿ ಅಳವಡಿಸಿಕೊಳ್ಳಬೇಕು'' ಎನ್ನುತ್ತಾರೆ ಅವರು.  ಇಂಥ ಫ್ಲೆಕ್ಸಿಬಲ್ ವರ್ಕಿಂಗ್ ಮಾಡೆಲ್ ಹೇಗಿರಬೇಕು ಗೊತ್ತಾ?

ಫ್ಲೆಕ್ಸಿಬಲ್ ಟೈಂ
ಬಹಳಷ್ಟು ಅಧ್ಯಯನಗಳ ಪ್ರಕಾರ, ಇಂದಿನ ಉದ್ಯೋಗಿಗಳು ಕೇವಲ ಆರ್ಥಿಕ ಭದ್ರತೆಯನ್ನಷ್ಟೇ ಅಲ್ಲ, ಕೆಲಸ ಹಾಗೂ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುವಂಥ ಸಮಯ ಹೊಂದಿರುವ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಈ ಕುರಿತು ಫ್ಲೆಕ್ಸ್‌ಜಾಬ್ಸ್ ಎಂಬ ಜಾಬ್ ಸರ್ಚ್ ಸೈಟ್ ನಡೆಸಿದ ಅಧ್ಯಯನದಲ್ಲಿ ಪಾಲ್ಗೊಂಡ ಶೇ.84ರಷ್ಟು ಉದ್ಯೋಗಿಗಳು ತಮಗೆ ವರ್ಕ್-ಲೈಫ್ ಬ್ಯಾಲೆನ್ಸ್ ಅಗತ್ಯ ಎಂದು ತಿಳಿಸಿದ್ದಾರೆ. ಇನ್ನು ಶೇ.54ರಷ್ಟು ಉದ್ಯೋಗಿಗಳು ತಾವು ಫ್ಲೆಕ್ಸಿಬಲ್ ಶೆಡ್ಯೂಲ್ ಹೊಂದಿರುವ ಕಚೇರಿಯಲ್ಲಿ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ. ಗ್ಲೋಬಲ್ ವರ್ಕ್‌ಪ್ಲೇಸ್ ಅನಲಿಟಿಕ್ಸ್ ನಡೆಸಿದ ಮತ್ತೊಂದು ಅಧ್ಯಯನದಂತೆ ಶೇ.90ರಷ್ಟು ಉದ್ಯೋಗಿಗಳು ಟೆಲಿವರ್ಕ್ ಆಯ್ಕೆ ಇರಬೇಕೆಂದು ಬಯಸಿದ್ದಾರೆ. ಅಂದರೆ ವರ್ಕ್ ಫ್ರಂ ಹೋಂ ಆಪ್ಶನ್ ಇರಬೇಕೆಂದು ಬಯಸುತ್ತಾರೆ.
ಇಂಥ ಫ್ಲೆಕ್ಸಿಬಲ್ ವರ್ಕಿಂಗ್ ಶೆಡ್ಯೂಲ್ ಇದ್ದಷ್ಟೂ ಅಂಥ ಕೆಲಸಗಳಲ್ಲಿ ಜನರು ಹೆಚ್ಚು ಕಾಲ ಇರುತ್ತಾರೆ. ಅಷ್ಟೇ ಅಲ್ಲ, ಕೆಲಸಕ್ಕೆ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಎಂಬುದನ್ನು ಡಿಲಾಯ್ಟ್ ಗ್ಲೋಬಲ್ ಮಿಲೇನಿಯಲ್ ಸರ್ವೆ ಕಂಡುಕೊಂಡಿದೆ. ಕಂಪನಿಯು ಉದ್ಯೋಗ ಮಾಡುವ ಸಮಯ ಹಾಗೂ ಸ್ಥಳದ ವಿಷಯದಲ್ಲಿ ಹೆಚ್ಚು ಫ್ಲೆಕ್ಸಿಬಲಿಟಿ ಹೊಂದಿದ್ದರೆ ತಾವದರಲ್ಲಿ ಐದು ವರ್ಷಕ್ಕೂ ಹೆಚ್ಚು ಕಾಲ ಇರಬಯಸುವುದಾಗಿ ಇಂದಿನ ತಲೆಮಾರಿನ ಉದ್ಯೋಗಿಗಳು ಹೇಳಿದ್ದಾರೆ. 

ಜಾಬ್ ಸ್ಯಾಟಿಸ್‌ಫ್ಯಾಕ್ಷನ್
ಹೀಗೆ ಫ್ಲೆಕ್ಸಿಬಲ್ ವರ್ಕ್ ಆರೇಂಜ್‌ಮೆಂಟ್ ಇದ್ದರೆ- ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು, ಯಾವ ಸಮಯದಲ್ಲಿ ಬೇಕಾದರೂ ಕೆಲಸ ಮಾಡಬಹುದು ಎಂಬುದಿದ್ದರೆ ಅಂಥ ಉದ್ಯೋಗಿಗಳಲ್ಲಿ ಹೆಚ್ಚು ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಇರುತ್ತದೆ. ಸ್ಟೇಪಲ್ಸ್ ಎಂಬ ಕಂಪನಿ ನಡೆಸಿದ ಸರ್ವೆಯಲ್ಲಿ ಶೇ.90ರಷ್ಟು ಉದ್ಯೋಗಿಗಳು ಈ ಫ್ಲೆಕ್ಸಿಬಲ್ ವರ್ಕಿಂಗ್‌ನಿಂದಾಗಿ ತಮಗೆ ಉದ್ಯೋಗದ ತೃಪ್ತಿಯಷ್ಟೇ ಅಲ್ಲ, ಕಂಪನಿ ಕುರಿತ ನೈತಿಕತೆಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಅಂದರೆ, ಕಂಪನಿಯು ಉದ್ಯೋಗಿಸ್ನೇಹಿ ಪಾಲಿಸಿಗಳನ್ನು ತಂದಷ್ಟೂ ಉದ್ಯೋಗಿಗಳು ಕಂಪನಿಗೆ ಹೆಚ್ಚು ಪ್ರಾಮಾಣಿಕವಾಗಿ ದುಡಿಯಲು ಬಯಸುತ್ತಾರೆ.

ಇವರೆಲ್ಲ ಯಶಸ್ವಿಯಾಗಿದ್ದು ಈ ಗುಣಗಳಿಂದ

ಹೆಚ್ಚುವ ಉತ್ಪಾದಕತೆ
ಈ ಫ್ಲೆಕ್ಸಿಬಲ್ ವರ್ಕಿಂಗ್‌ನಿಂದಾಗಿ ಕೇವಲ ಜಾಬ್ ಸ್ಯಾಟಿ‌ಸ್‌ಫ್ಯಾಕ್ಷನ್ ಹಾಗೂ ವರ್ಕ್-ಲೈಫ್ ಬ್ಯಾಲೆನ್ಸ್ ಅಷ್ಟೇ ಅಲ್ಲ, ಇಂಥ ಉದ್ಯೋಗಿಗಳಲ್ಲಿ ಉತ್ಪಾದಕತೆಯೂ ಹೆಚ್ಚು ಎಂಬುದು ಕಂಡುಬಂದಿದೆ. ಉದ್ಯೋಗಿಗಳಿಗೆ ಸ್ವಾತಂತ್ರ್ಯ ಹೆಚ್ಚಿದ್ದಷ್ಟೂ ಅವರು ಹೆಚ್ಚು ಸಂತೋಷದಿಂದ, ಆರೋಗ್ಯದಿಂದ, ಪ್ರಾಡಕ್ಟಿವ್ ಆಗಿ ಇರಬಲ್ಲರು ಎಂಬುದು 10 ವರ್ಷಗಳ ಅಧ್ಯಯನಗಳಲ್ಲಿ ಸಾಬೀತಾಗಿದೆ ಎಂದು ಸೋಷ್ಯಲ್ ಸೈಕಾಲಜಿಸ್ಟ್ ರಾನ್ ಫ್ರೀಡ್‌ಮ್ಯಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಟ್ರಾವೆಲ್ ಟೈಂ ಹಾಗೂ ಹಣ ಉಳಿತಾಯ
ಫ್ಲೆಕ್ಸಿಬಲ್ ವರ್ಕಿಂಗ್ ಆರೇಂಜ್‌ಮೆಂಟ್ ಕೇವಲ ಉದ್ಯೋಗಿಗಳಿಗಲ್ಲ, ಉದ್ಯೋಗದಾತರಿಗೂ ಒಳ್ಳೆಯದೇ ಆಗಿದೆ. ಕಟ್ಟಡದ ಬಾಡಿಗೆ, ಕರೆಂಟ್ ಬಿಲ್, ಎಸಿ ಮುಂತಾದ ಖರ್ಚುಗಳು ಉಳಿತಾಯವಾಗುತ್ತವೆ. ಇನ್ನು ಉದ್ಯೋಗಿಗಳಿಗೆ ಟ್ರಾಫಿಕ್ ತಲೆಬಿಸಿ ಇರುವುದಿಲ್ಲ. ಜೊತೆಗೆ, ಟ್ರಾವೆಲ್ ಟೈಂ ಉಳಿಸಿ ವಾಯುಮಾಲಿನ್ಯದಿಂದ ದೂರವಿರುವಂತೆ ಮಾಡುತ್ತದೆ. ರಸ್ತೆಯಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಅವರು ಈಗ ಕೆಲಸಕ್ಕಾಗಿ ಪರವೂರಲ್ಲಿ ನೆಲೆಸಬೇಕಿಲ್ಲ. ತಮಗಿಷ್ಟ ಬಂದ ಕಡೆ ಮನೆ ಮಾಡಿಕೊಂಡು ಹಾಯಾಗಿಯೇ ಕೆಲಸ ಮಾಡಿಕೊಂಡಿರಬಹುದು. ಇದರೊಂದಿಗೆ ಪೆಟ್ರೋಲ್ ಬಿಲ್ ಉಳಿವ ಜೊತೆಗೆ ಮನೆಯಡುಗೆ ಊಟ ಮಾಡಬಹುದು. ಮನೆಮಂದಿಯ ಜೊತೆ ಸಮಯ ಕಳೆಯಬಹುದು. 

ಉದ್ಯೋಗ ಸಂದರ್ಶನವೆಂದರೆ ತಮಾಷೆಯಲ್ಲ

ಇದು ರಿಯಾಲಿಟಿಯಾಗುತ್ತಿದೆ
ಐದು ವರ್ಷಗಳ ಹಿಂದಿಗೆ ಹೋಲಿಸಿದರೆ ಈಗ ಶೇ.40ರಷ್ಟು ಕಂಪನಿಗಳು ಈ ಫ್ಲೆಕ್ಸಿಬಲ್ ವರ್ಕಿಂಗ್ ಆರೇಂಜ್‌ಮೆಂಟ್ ಮಾಡಿವೆ. ಹೆಚ್ಚು ಹೆಚ್ಚು ಉದ್ಯೋಗಿ ಸ್ನೇಹಿಯಾಗುತ್ತಿವೆ. ಅಲ್ಲದೆ, ಈಗ ಆನ್‌ಲೈನ್ ವರ್ಕ್ ಫ್ರಂ ಹೋಂ ಕೆಲಸಗಳ ಸಂಖ್ಯೆಯೂ ಹೆಚ್ಚಿದ್ದು, ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಎಲ್ಲಿಯೋ ಕುಳಿತು ಮತ್ಯಾರಿಂದಲೋ ಕೆಲಸ ಮಾಡಿಸಿಕೊಳ್ಳುವುದು ಈಗ ಸುಲಭವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಏಕೆಂದರೆ ಹೆಚ್ಚು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿಕೊಂಡು ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುತ್ತಾ ಕಂಫರ್ಟ್ ಆಗಿರಲು ಬಯಸುತ್ತಿದ್ದಾರೆ. ಇದನ್ನು ಕಂಪನಿಗಳು ಕೂಡಾ ಅರ್ಥ ಮಾಡಿಕೊಳ್ಳುತ್ತಿವೆ. 

Follow Us:
Download App:
  • android
  • ios