ಕೆಲವೊಮ್ಮೆ ಕಚೇರಿಯಲ್ಲಿ ಯಾವುದಕ್ಕೂ ತಲೆ ಓಡುತ್ತಲೇ ಇಲ್ಲ ಎಂದಾಗ ಈ ಬಹಳ ಯಶಸ್ಸನ್ನು ಕಂಡಂಥ ಡಾನ್ ಬ್ರೌನ್, ಮಾರ್ಕ್ ಝುಕರ್‌ಬರ್ಗ್ ಮುಂತಾದವರಿಗೆ ಹೀಗಾಗುವುದೇ ಇಲ್ಲವೇ? ಅವರು ಮನಸ್ಸನ್ನು ಸದಾ ಚಟುವಟಿಕೆಯಿಂದಿಟ್ಟುಕೊಳ್ಳಲು ಏನು ಮಾಡಬಹುದು ಎಂಬೆಲ್ಲ ಕುತೂಹಲಗಳು ಕಾಡುತ್ತವೆ. ಇಂಥವರಿಗೂ ಒತ್ತಡ, ಟೆನ್ಷನ್, ಬೋರು, ಏಕತಾನತೆ, ತಲೆ ಕೆಲಸ ಮಾಡುವುದಿಲ್ಲ ಎಲ್ಲವೂ ಆಗುತ್ತದೆ. ಆದರೆ, ಅವರು ಅದಕ್ಕಾಗಿ ಟೈಮ್ ವೇಸ್ಟ್ ಮಾಡುತ್ತಾ ಕುಳಿತುಕೊಳ್ಳುವ ಬದಲು ತಲೆ ಚುರುಕಾಗಿಸಲು, ಕೆಲಸ ಮುಂದೆ ಸಾಗಲು, ರಿಲ್ಯಾಕ್ಸ್ ಆಗಲು ಏನು ಮಾಡಬಹುದು ನೋಡುತ್ತಾರೆ. ಜಗತ್ತಿನ ಯಶಸ್ವಿ ಕಂಪನಿಗಳ ಬಾಸ್ ಎನಿಸಿಕೊಂಡವರ ಇಂಥ ಕೆಲವು ವರ್ಕ್‌ಪ್ಲೇಸ್ ಹ್ಯಾಬಿಟ್ಸ್ ಏನೇನು ನೋಡೋಣ...

ಹೊಸದಾಗಿ ಕೆಲ್ಸಕ್ಕೆ ಸೇರಿದ್ದೀರಾ?

ಮಾರ್ಕ್ ಕ್ಯೂಬನ್
ಅಮೆರಿಕದ ಹೆಸರಾಂತ ಉದ್ಯಮಿ, ಬಿಲಿಯನೇರ್ ಮಾರ್ಕ್ ಕ್ಯೂಬನ್ ಮೀಟಿಂಗ್ ಮಾಡುತ್ತಾ ಸಮಯ ಕಳೆಯುವುದಿಲ್ಲವಂತೆ. ಬಹುತೇಕ ಮೀಟಿಂಗ್‌ಗಳು ಸಮಯ ವ್ಯರ್ಥ ಮಾಡುವಂಥವೇ ಆಗಿರುತ್ತವೆ ಎನ್ನುವ ಕ್ಯೂಬನ್ ಅದು ಯಾವುದೋ ಡೀಲ್‌ನ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೀಟಿಂಗ್ ಆಗಿದ್ದರೆ ಮಾತ್ರ ಭಾಗಿಯಾಗುತ್ತಾರೆ. 

ಜಾಕ್ ಡಾರ್ಸಿ
ಟ್ವಿಟ್ಟರ್‌ನ ಸಹ ಸಂಸ್ಥಾಪಕ ಹಾಗೂ ಸ್ವ್ಕೇರ್‌ನ ಸಿಇಒ ಆಗಿರುವ ಜಾಕ್ ಡಾರ್ಸಿ ದಿನದಲ್ಲಿ ಬಹುತೇಕ ಗಂಟೆಗಳನ್ನು ಕೆಲಸ ಮಾಡುತ್ತ ಕಳೆಯುತ್ತಾರೆ. ಆದರೆ, ಆ ಸಮಯವನ್ನು ಸೂಪರ್ ಎಫೆಕ್ಟಿವ್ ಆಗಿ ಕಳೆಯುವ ವಿಧಾನವೊಂದನ್ನು ಅವರು ಕಂಡುಕೊಂಡಿದ್ದಾರೆ. ವಾರಾರಂಭದಲ್ಲಿ ಯಾವ ದಿನ ಏನು ಎಂಬುದನ್ನು ಥೀಮ್ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಸೋಮವಾರ ಮ್ಯಾನೇಜ್‌ಮೆಂಟ್ ಡೇ ಆದರೆ ಮಂಗಳವಾರ ಪ್ರಾಡಕ್ಟ್ ಡೆವೆಲಪ್‌ಮೆಂಟ್ ಡೇ... ಹೀಗೆ.. ಇದರಿಂದ ಅದಕ್ಕೆ ಸಂಬಂಧಿಸಿದ ಸಂಪೂರ್ಣ ಕೆಲಸಗಳನ್ನು ದಿನವೊಂದರಲ್ಲಿ ಮುಗಿಸಲು ಪೂರ್ಣ ಪ್ರಯತ್ನ ಹಾಕುತ್ತಾರೆ.

ಸಂದರ್ಶನದಲ್ಲಿ ನಿಮ್ಮ ಬಗ್ಗೆ ಹೇಳಿ ಎಂದಾಗ...

ವಾರೆನ್ ಬಫೆಟ್
ಬರ್ಕ್‌ಶೈರ್ ಹ್ಯಾಥ್‌ವೇಯ ಬಾಸ್, ಜಗತ್ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ತಮ್ಮ ದಿನದ ಶೇ.80ರಷ್ಟು ಭಾಗವನ್ನು ಧೀರ್ಘಾಲೋಚನೆಯಲ್ಲಿ ಅಥವಾ ಗಂಭೀರ ಓದಿನಲ್ಲಿ ಕಳೆಯುತ್ತಾರೆ. ಅವರೇ ಹೇಳಿದಂತೆ, 'ನಾನು ದಿನದ ಬಹುತೇಕ ಸಮಯವನ್ನು ಕುಳಿತು ಯೋಚಿಸಿ ಕಳೆಯಲು ಮಹತ್ವ ನೀಡುತ್ತೇನೆ. ಓದುತ್ತೇನೆ ಹಾಗೂ ನಂತರ ಯೋಚಿಸುತ್ತೇನೆ. ಹಾಗಾಗಿ, ಉಳಿದವರಂತೆ ನಾನು ಉದ್ಯಮದಲ್ಲಿ ಗಡಿಬಿಡಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಚೆನ್ನಾಗಿ ಓದಿ ತಿಳಿದುಕೊಂಡ ಮೇಲೆ ಸರಿಯಾಗಿ ಯೋಚಿಸಿಯೇ ಯಾವುದೇ ವಿಷಯಗಳ ಕುರಿತ ನಿರ್ಧಾರ ತೆಗೆದುಕೊಳ್ಳುತ್ತೇನೆ.'

ಓಪ್ರಾ ವಿನ್‌ಫ್ರೇ
ಓಪ್ರಾ ವಿನ್‌ಫ್ರೇ ಹೆಸರು ಕೇಳದವರಾರು? ಕ್ವೀನ್ ಆಫ್ ಆಲ್ ಮೀಡಿಯಾ ಎಂದೇ ಹೆಸರಾಗಿರುವ ಓಪ್ರಾಳ ಓಪ್ರಾ ವಿನ್‌ಫ್ರೇ ಶೋ 25 ವರ್ಷಗಳ ಕಾಲ ಅಮೆರಿಕ ಸೇರಿದಂತೆ ಬಹಳಷ್ಟು ದೇಶಗಳಲ್ಲಿ ಮನೆಮಾತಾಗಿತ್ತು. 20ನೇ ಶತಮಾನದ ಅತಿ ಶ್ರೀಮಂತ ಆಫ್ರಿಕನ್ ಅಮೆರಿಕನ್ ಆಗಿರುವ ಓಪ್ರಾ ಅತೀಂದ್ರಿಯ ಧ್ಯಾನದ ಶಕ್ತಿ ಮೇಲೆ ನಂಬಿಕೆ ಇರಿಸಿದ್ದಾರೆ. ಪ್ರತಿ ದಿನ ಕನಿಷ್ಠ 20 ನಿಮಿಷಗಳನ್ನು ಧ್ಯಾನದಲ್ಲಿ ಕಳೆವ ವಿನ್‌ಫ್ರೇ, ತನ್ನ ಕಂಪನಿಯ ಉದ್ಯೋಗಿಗಳಿಗೂ ಇದನ್ನು ಫಾಲೋ ಮಾಡುವಂತೆ ಪ್ರೇರೇಪಿಸುತ್ತಾರೆ. 

ಮಾರ್ಕ್ ಝುಕರ್‌ಬರ್ಗ್
ತಮ್ಮ ವರ್ಕ್‌ಪ್ಲೇಸ್‌ನ ಒಳಗೂ ಹೊರಗೂ ತಮಗೆ ತಾವೇ ಸವಾಲು ಹಾಕಿಕೊಳ್ಳುತ್ತಿರುವ ಅಭ್ಯಾಸ ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರಿಗೆ. ಅವರು ಪ್ರತಿ ವರ್ಷ ಹೊಸ ಗುರಿಯೊಂದನ್ನು ಹಾಕಿಕೊಂಡು ಅದನ್ನು ಸಾಧಿಸಲು ಇನ್ನಿಲ್ಲದ ಶ್ರಮ ಹಾಕುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಈ ಸೋಷ್ಯಲ್ ಮೀಡಿಯಾ ಬಾಸ್ ಚೈನೀಸ್ ಕಲಿಯುವುದು, ಪ್ರತಿದಿನ ಕಚೇರಿಗೆ ಟೈ ಹಾಕಿಕೊಂಡು ಹೋಗುವದು, ಪ್ರತಿ ಹದಿನೈದು ದಿನಕ್ಕೊಮ್ಮೆ ಹೊಸ ಪುಸ್ತಕ ಓದುವುದು, ಅಮೆರಿಕದ ಪ್ರತಿ ಸ್ಟೇಟ್‌ಗೆ ಭೇಟಿ ನೀಡುವುದು... ಹೀಗೆ ವರ್ಷಕ್ಕೊಂದೊಂದು ಗುರಿ ಹಾಕಿಕೊಂಡು ಅದನ್ನು ಸಾಧಿಸಿದ್ದಾರೆ ಕೂಡಾ. 

ಬ್ರೇಕ್ ಕೇ ಬಾದ್ ಉದ್ಯೋಗಕ್ಕೆ ತೆರಳಲು ಹೀಗೆ ತಯಾರಾಗಿ

ಮಾರ್ಕ್ ಪಾರ್ಕರ್
ಸ್ಪೋರ್ಟ್ಸ್‌ವೇರ್ ತಯಾರಿಕೆಯಲ್ಲಿ ಹೆಸರು ಮಾಡಿರುವ ನೈಕಿ ಕಂಪನಿಯ ಸಿಇಒ ಮಾರ್ಕ್ ಪಾರ್ಕರ್ ತಮ್ಮ ಕಚೇರಿಯ ಮೀಟಿಂಗ್ ಸಂದರ್ಭದಲ್ಲಿ ಮೆದುಳಿನ ಎಡ ಬಲ ಎರಡೂ ಭಾಗಗಳಿಗೆ ಕೆಲಸ ಕೊಡಲು ಬಯಸುತ್ತಾರೆ. ಇದು ಮೆದುಳಿಗೆ ಉತ್ತಮ ಎಕ್ಸರ್ಸೈಸ್ ಕೂಡಾ ಎಂಬುದು ಅವರ ಅಭಿಪ್ರಾಯ. ಮೀಟಿಂಗ್ ಸಮಯದಲ್ಲಿ ನೋಟ್‌ಬುಕ್ಕೊಂದನ್ನು ಇಟ್ಟುಕೊಂಡು ಎಡಗಡೆಯ ಪುಟದಲ್ಲಿ ಉದ್ಯಮ ಸಂಬಂಧಿ ನೋಟ್ಸ್ ಮಾಡಿಕೊಂಡರೆ, ಬಲಗಡೆಯ ಬದಿಯಲ್ಲಿ ಸೃಜನಾತ್ಮಕ ಡೂಡಲ್ಸ್ ಬರೆಯುತ್ತಾರೆ. 

ಡಾನ್ ಬ್ರೌನ್
ಪ್ರಸಿದ್ಧ ಡಾ ವಿನ್ಸಿ ಕೋಡ್‌ನ ಬರಹಗಾರ, ಬೆಸ್ಟ್‌ ಸೆಲ್ಲಿಂಗ್ ಪುಸ್ತಕಗಳ ಕಾದಂಬರಿಕಾರ ಡಾನ್ ಬ್ರೌನ್ ಕಾದಂಬರಿ ಬರೆಯಲು ಐಡಿಯಾಗಳನ್ನು ಹುಡುಕೋಕೆ ವಿಶಿಷ್ಟವಾದ ಅಭ್ಯಾಸವೊಂದನ್ನು ರೂಢಿಸಿಕೊಂಡಿದ್ದಾರೆ. ಅದೇನೆಂದರೆ ತಲೆಕೆಳಗಾಗಿ ನಿಲ್ಲೋದು! ಹೌದು, ಇನ್ವರ್ಶನ್ ಥೆರಪಿ ಎಂದೇ ಕರೆಯುವ ತಲೆ ಕೆಳಗಾಗಿ ನಿಲ್ಲುವ ಅಭ್ಯಾಸದಲ್ಲಿ ಬ್ರೌನ್‌ಗೆ ಅತ್ಯುತ್ತಮ ಐಡಿಯಾಗಳು ತಲೆಗೆ ಹೊಳೆಯುತ್ತವಂತೆ.