ಸರಿಯಾಗಿ ಕೆಲ್ಸ ಮಾಡ್ತಿಲ್ಲ, ಸೋಮಾರಿ ಎಂದು ಬಣ್ಣಿಸಿ ಉದ್ಯೋಗಿಯನ್ನು ಕೆಲ್ಸದಿಂದ ತೆಗೆದು ಹಾಕಿದ್ದ ಕಂಪನಿಗೆ ಹಿನ್ನಡೆಯಾಗಿದೆ. ಕೋರ್ಟ್‌, ಉದ್ಯೋಗಿ ಪರ ತೀರ್ಪು ನೀಡಿದೆ.

ಸರಿಯಾಗಿ ಕೆಲ್ಸ ಮಾಡೋದಿಲ್ಲ. ಆಫೀಸ್‌ ಗೆ ಬೇಗ ಬರೋದಿಲ್ಲ. ಡೆಸ್ಕ್‌ ಮೇಲೆ ನಿದ್ರೆ ಮಾಡ್ತಾರೆ, ಸೋಮಾರಿ ಅಂತ ಎಐ ಕಂಪನಿಯೊಂದು ಮಹಿಳಾ ನಿರ್ದೇಶಕಿಯನ್ನು ಕೆಲ್ಸದಿಂದ ತೆಗೆದು ಹಾಕಿತ್ತು.ಇದನ್ನು ಪ್ರಶ್ನಿಸಿ ಡೈರೆಕ್ಟರ್‌, ನ್ಯಾಯಮಂಡಳಿಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಮಂಡಳಿ, ಉದ್ಯೋಗಿ ಪರ ತೀರ್ಪು ನೀಡಿದೆ.

ಸೋಮಾರಿ ಪಟ್ಟ

ಈ ಘಟನೆ ನಡೆದಿರುವುದು ಬ್ರಿಟನ್ನಲ್ಲಿ. 46 ವರ್ಷದ ಡಾ. ಡ್ಯಾನ್ ಲುವೋ ಈ ಪ್ರಕರಣದ ಕೇಂದ್ರಬಿಂದು. ಇವರು ಈ ಹಿಂದೆ ಚೀನಾದಲ್ಲಿ ವೈದ್ಯರಾಗಿ ಕೆಲಸ ಮಾಡಿದ್ದರು. 2020ರಲ್ಲಿ ಬ್ರಿಟನ್ಗೆ ಬಂದ ಇವರು, ಅದೇ ವರ್ಷದ ಅಕ್ಟೋಬರ್ನಲ್ಲಿ ಬ್ಲೂ ಸ್ಟ್ರಾಬೆರಿ ಎಐ ಎಂಬ ಕಂಪನಿಗೆ ಸೇರಿಕೊಂಡರು. ಈ ಕಂಪನಿ ಈ ಹಿಂದೆ ಕ್ಯಾಂಟರ್ಬರಿ ಎಐ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿತ್ತು. ಮಾಧ್ಯಮ ನಿರ್ವಹಣೆ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಈ ಸಂಸ್ಥೆಯಲ್ಲಿ ಲುವೋ ಕೇವಲ ಉದ್ಯೋಗಿಯಾಗಿರಲಿಲ್ಲ. ಕಂಪನಿಯಲ್ಲಿ ದೊಡ್ಡ ಮೊತ್ತದ ಹೂಡಿಕೆಯನ್ನೂ ಮಾಡಿದ್ದರು. ಜೊತೆಗೆ ಷೇರುದಾರರು ಹಾಗೂ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಆದರೆ ಕಂಪನಿಯ ಮತ್ತೊಬ್ಬ ನಿರ್ದೇಶಕ ವೆಸ್ಲಿ ಬೇಕರ್ , 2022ರ ಫೆಬ್ರವರಿಯಲ್ಲಿ ಲುವೋ ಅವರ ಕೆಲಸದ ಬದ್ಧತೆ ಮತ್ತು ಕಾರ್ಯನಿರ್ವಹಣೆಯನ್ನು ಪ್ರಶ್ನಿಸಲು ಆರಂಭಿಸಿದರು. ಹೂಡಿಕೆ ಮಾಡಿದ್ದ ಸಂಸ್ಥೆಗೆ ಇಮೇಲ್ ಕಳುಹಿಸಿ, ಲುವೋ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಲುವೋ ಅವರನ್ನು ಅತ್ಯಂತ ಸೋಮಾರಿ ಮಹಿಳೆ ಎಂದಿದ್ದರು. ಜುಲೈ 2022ರಲ್ಲಿ ಬೇಕರ್ ಮತ್ತೊಂದು ಇಮೇಲ್ ಕಳುಹಿಸಿ ಲುವೋ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಕೆಲಸದ ಸಮಯದಲ್ಲಿ ಅವರನ್ನು ಡೆಸ್ಕ್ ಮೇಲೆಯೇ ಮಲಗಿರುವುದನ್ನು ನೋಡಿದ್ದೇನೆ. ಆಗಾಗ ಆಫೀಸ್ನಿಂದ ಬೇಗ ಹೊರಡುತ್ತಾರೆ. ಕೆಲಸ ಮುಗಿಸಲು ಅತಿಯಾದ ಸಮಯ ತೆಗೆದುಕೊಳ್ಳುತ್ತಾರೆ ಎಂದು ದೂರಿದ್ದರು. ಅಷ್ಟೇ ಅಲ್ಲ, ವೃತ್ತಿಪರ ನಿರ್ದೇಶಕರಂತೆ ನಡೆದುಕೊಳ್ಳುವಂತೆ ಎಚ್ಚರಿಕೆಯನ್ನೂ ನೀಡಿದ್ದರು. ಇದರಿಂದ ಬೇಸರಗೊಂಡ ಲುವೋ, ತಮ್ಮ ವಿರುದ್ಧ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು.

ಸೆಪ್ಟೆಂಬರ್ 2022ರಲ್ಲಿ ಲುವೋ ಅವರ ಅನುಪಸ್ಥಿತಿಯಲ್ಲಿ ಕಂಪನಿಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಅವರ ನಿರ್ದೇಶಕ ಸ್ಥಾನದಿಂದ ತೆಗೆದುಹಾಕುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕಾನೂನಿನ ಪ್ರಕಾರ ಅವರು ಇನ್ನೂ ಕಂಪನಿಯ ನಿರ್ದೇಶಕರಾಗಿಯೇ ಮುಂದುವರಿದಿದ್ದರು. 2023ರ ಏಪ್ರಿಲ್ನಲ್ಲಿ ಕಂಪನೀಸ್ ಹೌಸ್ನಲ್ಲಿ ತಮ್ಮ ನಿರ್ದೇಶಕ ಸ್ಥಾನ ಕೊನೆಗೊಂಡಿರುವ ದಾಖಲೆ ಸಲ್ಲಿಕೆಯಾಗಿರುವುದನ್ನು ಗಮನಿಸಿದ ಲುವೋ, ತಮ್ಮ ಉದ್ಯೋಗವನ್ನೂ ಅಂತ್ಯಗೊಳಿಸಲಾಗಿದೆ ಎಂದು ಭಾವಿಸಿದ್ದರು.

ಕೊನೆಗೆ ಈ ಪ್ರಕರಣ ಲಂಡನ್ ಸೌತ್ ಎಂಪ್ಲಾಯ್ಮೆಂಟ್ ಟ್ರಿಬ್ಯೂನಲ್ ತಲುಪಿತು. ವಿಚಾರಣೆ ನಡೆಸಿದ ಉದ್ಯೋಗ ನ್ಯಾಯಾಧೀಶೆ ಜೆಮ್ಮಾ ಕಾಥ್ರೆ, ಕಂಪನಿಯ ವಿರುದ್ಧ ತೀರ್ಪು ನೀಡಿದರು. ಲುವೋ ಅವರಿಗೆ ನೀಡಬೇಕಿದ್ದ ನೋಟಿಸ್ ವೇತನವನ್ನು ಪಾವತಿಸದಿರುವುದು ಮತ್ತು 4,333 ಪೌಂಡ್ ವೇತನದಲ್ಲಿ ಅನಧಿಕೃತ ಕಡಿತ ಮಾಡಿರುವುದನ್ನೂ ನ್ಯಾಯಮಂಡಳಿ ತಪ್ಪು ಎಂದು ಹೇಳಿದೆ. ಹೀಗಾಗಿ ಇದು ಅನ್ಯಾಯದ ವಜಾ ಎಂದು ತೀರ್ಪು ನೀಡಿದ್ದು, 4,333 ಪೌಂಡ್ ಪಾವತಿಸುವಂತೆ ಕಂಪನಿಗೆ ಸೂಚಿಸಿದೆ. ಹೆಚ್ಚುವರಿ ಪರಿಹಾರದ ಮೊತ್ತವನ್ನು ಇನ್ನೂ ನಿರ್ಧರಿಸಬೇಕಿದೆ.