ಬೆಂಗಳೂರು, (ಮೇ.07) ಲಾಕ್‍ಡೌನ್ ಆರಂಭಗೊಂಡ ದಿನದಿಂದಲೂ ಕೆಲವರು ಟಿಕ್‍ಟಾಕ್, ಇನ್‍ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಕೆಲವರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ರೆ, ಹಲವರು ಕೆಲಸವಿಲ್ಲದೇ ಮನೆಯಲ್ಲಿ ವೆರೈಟಿ-ವೆರೈಟಿ ಫುಡ್ ತಯಾರಿಸಿಕೊಂಡು ಭರ್ಜರಿ ಬ್ಯಾಟಿಂಗ್ ಮಾಡುತ್ತಾ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.

ಹೀಗೆ ಲಾಕ್‌ಡೌನ್‌ಗೆ ಸೆಟ್ ಆಗಿರುವವರು ದಿಢೀರ್ ಕಚೇರಿಗೆ ಬನ್ನಿ ಅಂದ್ರೆ ಹೋಗ್ತಾರಾ? ಅವಾಗ ನೌಕರರ ಮನಸ್ಥಿತಿ ಹೇಗಿರುತ್ತೆ? ಎನ್ನುವ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ನೌಕರರ ಮನಸ್ಥಿತಿ ಬಹಿರಂಗ
ಲಾಕ್ ಡೌನ್ ಸಡಿಲಿಕೆಯಾಗಿ ಜನರು ತಮ್ಮ ಎಂದಿನ ಚಟುವಟಿಕೆಗಳಿಗೆ ಮರಳುತ್ತಿರುವ ಸಮಯದಲ್ಲಿ ಶೇಕಡಾ 93ರಷ್ಟು ನೌಕರರು ಕಚೇರಿಗೆ ಬರಲು ಆತಂಕಗೊಂಡಿದ್ದು, ಆರೋಗ್ಯ ವಿಚಾರದಲ್ಲಿ ಅವರಿಗೆ ತೀವ್ರ ಆತಂಕ, ಗೊಂದಲ, ಗಾಬರಿಯಾಗುತ್ತಿದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

ಶೇಕಡಾ 93ರಷ್ಟು ಮಂದಿಗೆ ಲಾಕ್ ಡೌನ್ ಮುಗಿದು ಮತ್ತೆ ಕಚೇರಿಗೆ ಬರಲು ಆತಂಕವಾಗುತ್ತಿದೆ. ಎಲ್ಲಿ ತಮ್ಮ ಆರೋಗ್ಯ ಕೆಟ್ಟು ಹೋಗಬಹುದು, ತಮಗೆ ಕೊರೋನಾ ಸೋಂಕು ತಗಲಬಹುದೇ ಎಂಬ ಆತಂಕದಲ್ಲಿ ಉದ್ಯೋಗಿಗಳಿದ್ದಾರೆ ಎಂದು ಹೆಲ್ತ್ ಟೆಕ್ ಕಮ್ಯುನಿಟಿ ಎಫ್ ವೈಐ ಮತ್ತು ಮೈಂಡ್ ಮ್ಯಾಪ್ ಅಡ್ವಾನ್ಸ್ ರಿಸರ್ಚ್ ನಡೆಸಿದ ಸಮೀಕ್ಷೆ ಹೇಳಿದೆ.

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸ್ ಬಿಲಿಟಿ(ಸಿಎಸ್‌ಆರ್) ನಂತೆ ಉದ್ಯೋಗಕ್ಕೆ ಹೋಗುವ ನೌಕರರು ಆರೋಗ್ಯ ವಿಚಾರದಲ್ಲಿ ತಮ್ಮ ಮಾಲೀಕರಿಂದ ಕಾರ್ಪೊರೇಟ್ ಆರೋಗ್ಯ ಜವಾಬ್ದಾರಿ(ಸಿಎಚ್‌ಆರ್)ನ್ನು ಕಡ್ಡಾಯಗೊಳಿಸಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಸಮೀಕ್ಷೆಯನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಸಲಾಗಿದೆ. ದೆಹಲಿ-ಎನ್ ಸಿಆರ್ ಪ್ರದೇಶ, ಮುಂಬೈ, ಬೆಂಗಳೂರುಗಳಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳ ಸುಮಾರು 560 ನೌಕರರ ಮೇಲೆ ನಡೆಸಿದ ಸಮೀಕ್ಷೆಯಿಂದ ಇದು ತಿಳಿದುಬಂದಿದೆ.

ಉದ್ಯೋಗಿಗಳು ಬಯಸುವುದೇನು..?
ಸುಮಾರು ಶೇಕಡಾ 85ರಷ್ಟು ಜನರು ತಮ್ಮ ಉದ್ಯೋಗದಾತರು ಕಚೇರಿ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಸುರಕ್ಷತಾ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸಬೇಕು ಮತ್ತು ಅವರು ಕಚೇರಿಯಲ್ಲಿದ್ದಾಗ ಅವರ ಆರೋಗ್ಯವನ್ನು ರಕ್ಷಿಸಲು ಹೊಸ ಮತ್ತು ನವೀನ ಮಾರ್ಗಗಳನ್ನು ಹುಡುಕಬೇಕೆಂದು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.

ಆಫೀಸ್ ಪಾಲಿಟಿಕ್ಸ್‌ನಿಂದ ಬೇಸತ್ತಿದ್ದೀರಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಇನ್ನು ಲಾಕ್ ಡೌನ್ ಮುಗಿದ ಮೇಲೆ ಸುಮಾರು ಶೇಕಡಾ 81ರಷ್ಟು ನೌಕರರು ಬ್ಯಾಚ್, ಬ್ಯಾಚ್ ಆಗಿ ಕೆಲಸವನ್ನು ಆರಂಭಿಸಿ ಎಂದು ಕೇಳಿಕೊಂಡರೆ, ಶೇಕಡಾ 73 ರಷ್ಟು ಉದ್ಯೋಗಸ್ಥರು ಮನೆಯಿಂದಲೇ ಕೆಲಸ (Work From Home) ಮಾಡುವ ವ್ಯವಸ್ಥೆ ಮುಂದುವರಿಸಬೇಕೆಂದು ಕೇಳುತ್ತಿದ್ದಾರೆ.

ಕೋವಿಡ್-19 ಭಾರತದ ಎಲ್ಲ ವೃತ್ತಿಪರರನ್ನು ಹಲವಾರು ವಿಷಯಗಳಲ್ಲಿ ಆತಂಕಗೊಳಿಸಿದರೆ ಶೇಕಡಾ 59ರಷ್ಟು ಮಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಶೇ.25 ರಷ್ಟು ಜನರು ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆತಂಕದಲ್ಲಿದ್ದರೆ , ಶೇಕಡಾ 16ರಷ್ಟು ಜನರು ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ಮತ್ತು ಈ ಅನಿಶ್ಚಿತತೆಯು ಹೆಚ್ಚಿನ ಆತಂಕಕ್ಕೆ ಕಾರಣವಾಗುತ್ತದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.