Asianet Suvarna News Asianet Suvarna News

Job Fair 2,240 ಉದ್ಯೋಗ ಭಾಗ್ಯ ಕೊಟ್ಟ ಕಲಬುರಗಿ ಉದ್ಯೋಗ ಮೇಳ

 * 2,240 ಜನರಿಗೆ ಸಿಕ್ಕಿದ ಉದ್ಯೋಗಾವಕಾಶ
* ಇದೇ ತಿಂಗಳ 12ರಂದು ಕಲಬುರಗಿಯಲ್ಲಿ ನಡೆಸಿದ ಉದ್ಯೋಗ ಮೇಳ
* ಮಾಹಿತಿ ನೀಡಿದ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

2240 peoples Gets Jobs In Kalaburagi Job Fair Says Ashwath Narayan rbj
Author
Bengaluru, First Published Feb 27, 2022, 4:18 PM IST

ಬೆಂಗಳೂರು, (ಫೆ.27): ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಇದೇ ತಿಂಗಳ 12ರಂದು ಕಲಬುರಗಿಯಲ್ಲಿ ನಡೆಸಿದ ಉದ್ಯೋಗ ಮೇಳದಲ್ಲಿ ಒಟ್ಟು 2,240 ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಭಾನುವಾರ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಒಂದು ದಿನದ ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ./ಬಿ.ಟೆಕ್. ಮತ್ತು ಎಂ.ಟೆಕ್ ವಿದ್ಯಾರ್ಹತೆ ಹೊಂದಿರುವ ಒಟ್ಟು 8,670 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು, ಸಂದರ್ಶನವನ್ನು ಎದುರಿಸಿದ್ದರು ಎಂದಿದ್ದಾರೆ.

ಮಲ್ಲೇಶ್ವರಂನಲ್ಲಿ ಉದ್ಯೋಗ ಮೇಳ: 115 ಮಂದಿಗೆ ಉದ್ಯೋಗ ಭಾಗ್ಯ, 535 ಅಭ್ಯರ್ಥಿಗಳು 2ನೇ ಹಂತಕ್ಕೆ ಆಯ್ಕೆ

ಉದ್ಯೋಗ ಮೇಳದಲ್ಲಿ ಒಟ್ಟು 83 ಕಂಪನಿಗಳು ಭಾಗವಹಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದವು. ಅಂತಿಮವಾಗಿ ಉದ್ಯೋಗ ದೊರಕಿಸಿಕೊಂಡಿರುವ ಅಭ್ಯರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯುಳ್ಳ 382, ಪಿಯುಸಿ ಮಟ್ಟದ 342, ಐಟಿಐ ವಿದ್ಯಾರ್ಹತೆಯುಳ್ಳ 520, ಡಿಪ್ಲೊಮಾ ಓದಿರುವ 343, ಪದವಿ ಓದಿರುವ 425, ಸ್ನಾತಕೋತ್ತರ ಶಿಕ್ಷಣ ಹೊಂದಿರುವ 72, ಬಿ.ಇ./ಬಿ.ಟೆಕ್ ಓದಿರುವ 133 ಮತ್ತು ಎಂ.ಟೆಕ್ ವಿದ್ಯಾಭ್ಯಾಸವುಳ್ಳ 23 ಮಂದಿ ಇದ್ದಾರೆ ಎಂದು ಅವರು ವಿವರಿಸಿದ್ದಾರೆ.

ಸಂದರ್ಶನವನ್ನು ಎದುರಿಸಿದ ಆಸಕ್ತರಲ್ಲಿ 298 ಮಂದಿಯನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆಲ್ಲ ಸೂಕ್ತ ಕೌಶಲ್ಯ ತರಬೇತಿ ನೀಡಿ, ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುವುದು. ಇದಕ್ಕೆ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮೇಳದಲ್ಲಿ ಭಾಗವಹಿಸಿದ್ದ ಕಂಪನಿಗಳಲ್ಲಿ ಸಿಂಪ್ಲಿಫೈ3ಎಕ್ಸ್, ಬಾಶ್, ಟೊಯೋಟಾ ಕಿರ್ಲೋಸ್ಕರ್, ಬೈಜೂಸ್, ಎನ್.ಟಿ.ಟಿ.ಎಫ್., ಗ್ರೀಟ್ ಟೆಕ್ನಾಲಜೀಸ್, ಟೆಕ್ ವೈಸ್ ಐಟಿ ಸೊಲ್ಯೂಶನ್ಸ್, ಸಿನಾಪ್ಟೆಕ್ಸ್, ಗ್ರಾಮ ವಿಕಾಸ ಸೊಸೈಟಿ, ಸಾಯಿ ಫಾರ್ಮಿಕಲ್ಚರ್, ಹಿಮಾಲಯ ವೆಲ್ನೆಸ್ ಕಂಪನಿ, ಪ್ರಾಣ ಹೆಲ್ತ್ ಕೇರ್, ಯೂನಿಬಿಕ್, ಅಜೀಂ ಪ್ರೇಂಜಿ ಫೌಂಡೇಶನ್, ಯೋನೆಕ್ಸ್ ಮುಂತಾದವು ಇದ್ದವು ಎಂದು ಅವರು ತಿಳಿಸಿದ್ದಾರೆ.

ಮಲ್ಲೇಶ್ವರ ಉದ್ಯೋಗ ಮೇಳ
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಉದ್ಯೋಗ ಮೇಳದಲ್ಲಿ 115 ಮಂದಿಗೆ ಉದ್ಯೋಗ ಸಿಕ್ಕಿದೆ. ಈ ಮೇಳದಲ್ಲಿ 44 ಕಂಪನಿಗಳು ಭಾಗವಹಿಸಿದ್ದು, ಒಟ್ಟು 1,085 ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.

ಮಲ್ಲೇಶ್ವರಂನಲ್ಲಿ ನಡೆದ ಉದ್ಯೋಗ ಮೇಳದಲ್ಲಿ(ಝob Fair) 115 ಮಂದಿಗೆ ಉದ್ಯೋಗ ಸಿಕ್ಕಿದ್ದು, 535 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಕವಿ ಕುವೆಂಪು ರಸ್ತೆಯಲ್ಲಿರುವ ಮರಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಶನಿವಾರ ಉದ್ಯೋಗ ಮೇಳ ನಡೆಯಿತು. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಏರ್ಪಡಿಸಿದ್ದರು.

ಈ ಮೇಳದಲ್ಲಿ 44 ಕಂಪನಿಗಳು ಭಾಗವಹಿಸಿದ್ದು, ಒಟ್ಟು 1,085 ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು  ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇವರ ಪೈಕಿ 115 ಮಂದಿಗೆ ಸಂಜೆಯ ಹೊತ್ತಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಮಂಗಳೂರಿನಲ್ಲೂ ಉದ್ಯೋಗ ಮೇಳ
ನಮ್ಮ ಕುಡ್ಲದ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ  ಮಾರ್ಚ್‌ 3 ರಂದು 'ಬೃಹತ್‌ ಉದ್ಯೋಗ ಮೇಳ' ಹಮ್ಮಿಕೊಳ್ಳಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು https://skillconnect.kaushalkar.com/app/student-jobfair ಲಿಂಕ್‌ ಬಳಸಿ ನೋಂದಾಯಿಸಿಕೊಳ್ಳಬಹುದು

Follow Us:
Download App:
  • android
  • ios