ಮಡಿಕೇರಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಡಿಸೆಂಬರ್ ಒಳಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದರು. ಪ್ರತಿ ಗ್ರಾಮ ಪಂಚಾಯಿತಿಗೆ 10 ಲಕ್ಷ ರೂ. ಅನುದಾನ ಹಾಗೂ 'ಭಾರತ್ ಜೋಡೋ ಯುವ ಘಟಕ'ಗಳ ಸ್ಥಾಪನೆಯ ಮೂಲಕ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಡಿಕೇರಿ: ರಾಜ್ಯದ ಜನತೆಗೆ ಹಾಗೂ ರಾಜಕೀಯ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೊಡ್ಡ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಈ ವರ್ಷದ ಡಿಸೆಂಬರ್ ಒಳಗೆ ಮುಗಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಮಡಿಕೇರಿಯ ಐತಿಹಾಸಿಕ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷದ ಬಲವರ್ಧನೆ ಕುರಿತು ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡರು. ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾತನ್ನಾಡಿ, ನಾವು ಡಿಸೆಂಬರ್ ತಿಂಗಳೊಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳನ್ನು ನಡೆಸಿ ಮುಗಿಸುತ್ತೇವೆ. ಚುನಾವಣೆ ಪ್ರಕ್ರಿಯೆ ವಿಳಂಬ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೀವೆಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಮ್ಮ ಶ್ರಮಕ್ಕೆ ತಕ್ಕಂತೆ ನಿಮಗೆ ಅಧಿಕಾರ ನೀಡಬೇಕು ಎನ್ನುವುದು ನಮ್ಮ ಆಸೆ. ಅಧಿಕಾರ ಹಂಚಿಕೆಯಾದಾಗ ಮಾತ್ರ ಎಲ್ಲಾ ಸರ್ಕಾರಿ ಕೆಲಸ ಕಾರ್ಯಗಳಿಗೆ ವೇಗ ಸಿಗಲು ಸಾಧ್ಯ ಎಂದು ಅವರು ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ 'ಭಾರತ್ ಜೋಡೋ ಯುವ ಘಟಕ'ಗಳನ್ನು ನಿರ್ಮಾಣ ಮಾಡಲಾಗುವುದು. ಆ ಮೂಲಕ ಯುವಕರನ್ನು ಸಂಘಟಿಸಿ ಪಕ್ಷದ ಸಿದ್ಧಾಂತಗಳನ್ನು ತಲುಪಿಸಲಾಗುವುದು ಎಂದರು.

10 ಲಕ್ಷ ರೂ. ವಿಶೇಷ ಅನುದಾನ

ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಪ್ರತೀ ಗ್ರಾಮ ಪಂಚಾಯಿತಿಗೆ 10 ಲಕ್ಷ ರೂಪಾಯಿಗಳ ವಿಶೇಷ ಅನುದಾನ ನೀಡಲಿದ್ದೇವೆ. ಈ ಹಣವನ್ನು ಸ್ಥಳೀಯವಾಗಿ ಅಗತ್ಯವಿರುವ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಜನಸಾಮಾನ್ಯರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲು ಈ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.