ಒಕ್ಕಲಿಗರಿಗಿಂತ ಮುಸ್ಲಿಮರು ಹೆಚ್ಚಿದ್ದಾರೆ, ಹಾಗಂತ ನಾನು ಸಿಎಂ ಆಗಲು ಸಾಧ್ಯವೇ?: ಜಮೀರ್‌ 

ಬೆಂಗಳೂರು(ಜು.22): ‘ಒಂದು ಸಮುದಾಯದಿಂದ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯಕ್ಕಿಂತಲೂ ನಮ್ಮ ಸಮುದಾಯ ದೊಡ್ಡದಿದೆ. ನನಗೂ ಮುಖ್ಯಮಂತ್ರಿ ಆಗುವ ಆಸೆಯಿದೆ. ಹಾಗಂತ ನಾನು ಮುಖ್ಯಮಂತ್ರಿ ಆಗಲು ಸಾಧ್ಯವೇ? ರಾಜ್ಯಕ್ಕೆ ಒಳ್ಳೆಯದಾಗಬೇಕೆಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು.’ ಇದು ‘ಮುಖ್ಯಮಂತ್ರಿ ಆಗುವ ಹಂತ ತಲುಪಿದ್ದೇನೆ ಅವಕಾಶ ಕೊಡಿ’ ಎಂದು ಒಕ್ಕಲಿಗ ಸಮುದಾಯಕ್ಕೆ ಮನವಿ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಟಾಂಗ್‌ ನೀಡಿದ ಪರಿ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇ.ಡಿ. ವಿಚಾರಣೆ ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಬಳಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‌ ಅಹಮದ್‌ಖಾನ್‌, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನಷ್ಟೇ ಅಲ್ಲ, ರಾಜ್ಯದ ಜನತೆ ಸಿದ್ದರಾಮಯ್ಯನವರ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ. ಹೀಗಾಗಿ ವೈಯಕ್ತಿಕವಾಗಿ ನಾನೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತೇನೆ’ ಎಂದು ಪುನರುಚ್ಚಾರ ಮಾಡಿದರು.

ಅಕ್ರಮ ಆಸ್ತಿ ಗಳಿಕೆ ಕೇಸ್‌: ಶಾಸಕ ಜಮೀರ್‌ಗೆ ಎಸಿಬಿಯಿಂದ ಬುಲಾವ್

ಒಂದೇ ಸಮುದಾಯದಿಂದ ಯಾರೂ ಮುಖ್ಯಮಂತ್ರಿ ಆಗಲ್ಲ. ನನಗೂ ಮುಖ್ಯಮಂತ್ರಿ ಆಗಲು ಆಸೆಯಿದೆ. ನನ್ನ ಸಮಾಜ ಕೂಡ ಒಕ್ಕಲಿಗ ಸಮಾಜಕ್ಕಿಂತ ಹೆಚ್ಚಿದೆ. ಹಾಗಂತ ನಾನು ಮುಖ್ಯಮಂತ್ರಿ ಆಗಲು ಸಾಧ್ಯನಾ? ಎಲ್ಲಾ ಸಮಾಜದವರು ಬೆಂಬಲಿಸಿದರೆ ಮಾತ್ರ ಮುಖ್ಯಮಂತ್ರಿಯಾಗುತ್ತಾರೆ. ಎಲ್ಲರಿಗೂ ತಾವು ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಿರುವುದು ಸಹಜ ಎಂದು ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ನಾನು, ಡಿಕೆಶಿ ಮಾತ್ರ ಆಸ್ತಿ ಮಾಡಿರುವುದಾ?: ಜಮೀರ್‌

ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರಿಗೆ ಇ.ಡಿ. ನೆಪದಲ್ಲಿ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ. ಮುಗಿದು ಹೋಗಿದ್ದ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ತೆಗೆದಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ನಾನು, ಡಿ.ಕೆ. ಶಿವಕುಮಾರ್‌ ಮಾತ್ರ ಆಸ್ತಿ ಮಾಡಿರುವುದಾ? ಬಿಜೆಪಿಯವರು ಯಾರೂ ಇಲ್ಲವೇ? ಎಂದು ಪ್ರಶ್ನಿಸಿದರು.