ಎಸ್‌ಐಟಿ ರಚನೆಗೆ ನಾವು ವಿರೋಧ ಮಾಡಿಲ್ಲ. ಈ ತನಿಖೆ ನೆಪದಲ್ಲಿ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಷಡ್ಯಂತ್ರ ಇದೆ ಎಂಬ ಮಾತನ್ನು ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ.
ವಿಧಾನಸಭೆ (ಆ.19): ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿ ಮುಸುಕುಧಾರಿ ಹಿಂದೆ ಹತ್ತಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಯುಟ್ಯೂಬ್ ಚರ್ಚೆಗಳು, ಹಣಕಾಸು ನೆರವು ನೀಡುತ್ತಿರುವ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ. ಪ್ರಕರಣ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದೀರ್ಘ ಉತ್ತರ ನೀಡಿದ ಬಳಿಕ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ರಚನೆಗೆ ನಾವು ವಿರೋಧ ಮಾಡಿಲ್ಲ. ಈ ತನಿಖೆ ನೆಪದಲ್ಲಿ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ.
ಇದರ ಹಿಂದೆ ಷಡ್ಯಂತ್ರ ಇದೆ ಎಂಬ ಮಾತನ್ನು ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಧರ್ಮಸ್ಥಳದ ಹೆಸರಿಗೆ ಕೆಸರು ಎರಚುವ ಹುನ್ನಾರ ನಡೆಯುತ್ತಿದೆ. ಸರ್ಕಾರದ ಉದ್ದೇಶವೂ ಅದೇ ಆಗಿದೆ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸ್ಪೀಕರ್ ಖಾದರ್ ಅವರು ಆ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದಾಗ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಸರ್ಕಾರವೇ ಕಾರಣ ಎಂದು ನೇರವಾಗಿ ಆರೋಪಿಸಿದರು. ಬಳಿಕ ಸದನದಲ್ಲಿ ಗದ್ದಲ ಏರ್ಪಟ್ಟಿತು.
ಗದ್ದಲದ ನಡುವೆಯೇ ಮಾತು ಮುಂದುವರೆಸಿದ ಸುನೀಲ್ ಕುಮಾರ್, ಸರ್ಕಾರ ಎಸ್ಐಟಿ ರಚನೆ ಮಾಡಿ ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದೆ. ಇದರ ವಿರುದ್ಧ ಜನ ರಸ್ತೆಗೆ ಬಂದಿದ್ದಕ್ಕೆ ಈಗ ಬ್ಯಾಲೆನ್ಸ್ ಮಾಡುವ ನಾಟಕ ಮಾಡುತ್ತಿದೆ. ಈ ಅಪಪ್ರಚಾರದ ಹಿಂದೆ ತಮಿಳುನಾಡು, ಕೇರಳದ ಮುಸುಕುಧಾರಿಗಳು ತುಂಬಾ ಜನ ಇದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಸರ್ಕಾರವೇ ಈ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ಮಾವುತ, ತಂಗಿ ಹತ್ಯೆ ತನಿಖೆಗೆ ಪುತ್ರ ಮನವಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಎಸ್‌ಐಟಿಗೆ ಸೋಮವಾರ ಮತ್ತೊಂದು ದೂರು ಸಲ್ಲಿಕೆಯಾಗಿದೆ. 2021ರಲ್ಲಿ ನಡೆದಿದ್ದ ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುವಂತೆ ಕೋರಿ ದೂರು ನೀಡಲಾಗಿದೆ. ಗಣೇಶ್ ಎಂಬುವರು ತನ್ನ ಸಹೋದರಿ ಭಾರತಿ ಎಂಬುವರ ಜೊತೆ ಬಂದು ಈ ಸಂಬಂಧ ದೂರು ನೀಡಿದ್ದಾರೆ. 2021ರಲ್ಲಿ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ನಾರಾಯಣ ಮತ್ತು ಯಮುನಾರ ಹತ್ಯೆ ನಡೆದಿತ್ತು. ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಇಬ್ಬರನ್ನೂ ಏಕಕಾಲದಲ್ಲಿ ಹತ್ಯೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ಆರೋಪಿಗಳ ಪತ್ತೆಯಾಗಿಲ್ಲ. ಹೀಗಾಗಿ, ಇದರ ಬಗ್ಗೆ ತನಿಖೆ ನಡೆಸಿ ಎಂದು ದೂರುದಾರರು ಮನವಿ ಮಾಡಿದ್ದಾರೆ.
