ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಸಹಿಸಲ್ಲ ಎಂದು ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಬೆಂಗಳೂರು (ಆ.08): ಧರ್ಮಸ್ಥಳ ಭಾಗದಲ್ಲಿ ನಡೆದ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆ ಸಂಬಂಧ ವಿಶೇಷ ತನಿಖಾ ತಂಡವು(ಎಸ್‌ಐಟಿ) ಅಧಿವೇಶನ ಆರಂಭಕ್ಕೂ ಮುನ್ನ ಮಧ್ಯಂತರ ತನಿಖಾ ವರದಿ ನೀಡಬೇಕು ಎಂದು ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಸಹಿಸಲ್ಲ. ಯುಟ್ಯೂಬರ್‌ಗಳು ತನಿಖೆ ಮಾಡುತ್ತಿದ್ದಾರೆ. ಹೀಗೆ ಬಿಟ್ಟರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮುಂದುವರೆಯಲಿದೆ. ಜನರ ಆಕ್ರೋಶದ ಕಟ್ಟೆ ಒಡೆದು ರಸ್ತೆಗೆ ಬರುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಎಸ್‌ಐಟಿ ಈವರೆಗಿನ ತನಿಖೆ ಕುರಿತು ಮಧ್ಯಂತರ ವರದಿ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೂ ಧರ್ಮದ ಅವಹೇಳನ ಸಹಿಸಲ್ಲ: ಧರ್ಮಸ್ಥಳ ಭಾಗದಲ್ಲಿ ನಡೆದ ಅಸಹಜ ಸಾವುಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ತನಿಖೆಗಳ ನಡುವೆ ಧರ್ಮಕ್ಷೇತ್ರದ ಬಗ್ಗೆ ನಾನಾ ಅಪಪ್ರಚಾರ ಸರಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನೇಕರು ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ನಾವು ಮಾತನಾಡುವ ಅನಿವಾರ್ಯತೆ ಇರಲಿಲ್ಲ. ಆದರೆ, ಹಿಂದೂ ಧರ್ಮದ ಬಗ್ಗೆ ಅವಹೇಳನ ಸಹಿಸಲ್ಲ ಎಂದರು. ಎಸ್ಐಟಿ ತನಿಖೆ ಬಗ್ಗೆ ನಮ್ಮ ವಿರೋಧವಿಲ್ಲ. ಕಳೆಬರದ ಸತ್ಯಾಸತ್ಯತೆ ತನಿಖೆಯಲ್ಲಿ ಹೊರಬರಲಿದೆ. ಆದರೆ, ಹೀಗೆ ತನಿಖೆ ಮಾಡಿ ಎಂದು ಒತ್ತಾಯಿಸುವುದು ಸರಿಯಲ್ಲ. ತೀರ್ಪು ಹೀಗೆ ಬಂತು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ ಎಂದು ಹೇಳಿದರು.

ಅಪಪ್ರಚಾರ ಕುರಿತು ತನಿಖೆಗೆ ಆಗ್ರಹ: ಹಿಂದೂ ಶ್ರದ್ಧಾ ಕೇಂದ್ರದ ಮೇಲಿನ ಅಪಪ್ರಚಾರ ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಮತ್ತು ಹಿಂದೂ ಧರ್ಮದ ಅಪಪ್ರಚಾರ ಕುರಿತೂ ತನಿಖೆಯಾಗಬೇಕು. ಕಳೆದ ಹತ್ತು ದಿನಗಳಲ್ಲಿ ಕಳೇಬರ ತೆಗೆಯುವ ನಿಟ್ಟಿನಲ್ಲಿ ಅನೇಕ ಚರ್ಚೆ ಶುರುವಾಗಿದೆ. ಈ ಅಪಪ್ರಚಾರದ ಬಗ್ಗೆ ಪೊಲೀಸರು ಈವರೆಗೂ ದನಿ ಎತ್ತಿಲ್ಲ. ಧಾರ್ಮಿಕ ಅಪಪ್ರಚಾರದ ಹೆಸರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ನೂರಾರು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ, ಧರ್ಮಸ್ಥಳ ವಿಚಾರದಲ್ಲಿ ಏಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿಲ್ಲ ಎಂದು ಅದೇ ಪೊಲೀಸರನ್ನು ಪ್ರಶ್ನಿಸುತ್ತೇನೆ ಎಂದರು.

ಅಪಪ್ರಚಾರಕ್ಕೆ ಎಸ್‌ಐಟಿ ತೆರೆ ಎಳೆಯಲಿ: ಧರ್ಮದ ಹೆಸರಿನಲ್ಲಿ ಅಪಪ್ರಚಾರ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು. ಸಂಜೆ ಆಗುತ್ತಿದ್ದಂತೆ ಹೆಣ್ಣು ಮಗುವಿನ ಅಸ್ಥಿ ಪಂಜರ ಸಿಕ್ಕಿತು. ಯುವಕನ ಅಸ್ಥಿಪಂಜರ ಸಿಕ್ಕಿತು ಎನ್ನುವುದು ಸರಿಯಲ್ಲ. ಎಸ್ಐಟಿ ಈ ಎಲ್ಲಾ ಅಪಪ್ರಚಾರಕ್ಕೆ ತೆರೆ ಎಳೆಯಬೇಕು. ಅಧಿವೇಶನ ಆರಂಭಕ್ಕೂ ಮುನ್ನ ಮಧ್ಯಂತರ ತನಿಖಾ ವರದಿ ನೀಡಬೇಕು. ಇನ್ನಾದರೂ ಸರಿಯಾದ ದಾರಿಯಲ್ಲಿ ತನಿಖೆ ನಡೆಯಬೇಕು ಎಂದು ಸುನೀಲ್‌ ಕುಮಾರ್‌ ಆಗ್ರಹಿಸಿದರು.