ಬೆಂಗಳೂರು, (ಜೂನ್.05): ಪೆಟ್ರೋಲ್,ಡಿಸೇಲ್  ದರ ಏರಿಕೆ ವಿರುದ್ಧ ಕಾಂಗ್ರೆಸ್​ ಯುವ ನಾಯಕ ಮೊಹಮ್ಮದ್ ನಲಪಾಡ್ ಹಾಗೂ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದರು.

ಶನಿವಾರದಂದು ಬೆಂಗಳೂರಿನ ಓಪೆರಾ ಜಂಕ್ಷನ್‌ ಬಳಿ ನಲಪಾಡ್ ಹಾಗೂ ಅವರ ಬೆಂಬಲಿಗರು ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿದರು.

ಲಾಕ್‌ಡೌನ್ ಮಧ್ಯೆ ಗಗನಕ್ಕೇರಿದ ತೈಲ ಬೆಲೆ: ಶತಕದತ್ತ ಪೆಟ್ರೋಲ್, ಡೀಸೆಲ್ ದರ!

ಈ ವೇಳೆ ಮಾತನಾಡಿದ ನಲಪಾಡ್,  ಮೋದಿಗೆ ಹೆಂಡತಿಯಿಲ್ಲ, ಹೀಗಾಗಿ ಗ್ಯಾಸ್ ಧರ ಏರಿಕೆ ಬಗ್ಗೆ ಗೊತ್ತಾಗಲ್ಲ. ವಿಮಾನದಲ್ಲಿ ಓಡಾಡೊ ಮೋದಿಗೆ ಪೆಟ್ರೋಲ್ ಬೆಲೆ ಹೆಂಗ್ ಗೊತ್ತಾಗುತ್ತೆ. ನಿಮಗೆ ಆಡಳಿತ ನಡೆಸಲು ಆಗಿಲ್ಲ ಅಂದ್ರೆ ಕಾಂಗ್ರೆಸ್‌ ಗೆ ಅಧಿಕಾರ ಬಿಟ್ಟು ಕೊಡಿ ಎಂದರು.

ನಮ್ಮಲ್ಲಿ ಡಿಕೆ ಶಿವಕುಮಾರ್ ಅಂತಹ ನಾಯಕರಿದ್ದಾರೆ. ಸರ್ಕಾರಕ್ಕೆ ಜನಸಾಮಾನ್ಯರ ‌ನೋವು ಅರ್ಥ ಆಗ್ತಿಲ್ಲ. ಹೀಗಾಗಿ ಪಿಪಿಇ ಕಿಟ್ ಧರಿಸಿ ಕ್ರಿಕೆಟ್ ಆಡಿ ಪ್ರತಿಭಟನೆ ನಡೆಸುತ್ತಿದ್ದೆವೆ. ಒಂದೇ ದಿನ ಯೂಥ್ ಕಾಂಗ್ರೆಸ್ ಎರಡು ಬಣದಿಂದ ಪ್ರತಿಭಟನೆ ವಿಚಾರಕ್ಕೆ ‌ವಿಶೇಷ ಅರ್ಥ ಬೇಡ. ಎಲ್ಲಾ ಜಿಲ್ಲೆ, ಬ್ಲಾಕ್ ಮಟ್ಟದಲ್ಲೂ‌ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಮಂಗಳೂರಿನಲ್ಲಿ ಶತಕದತ್ತ ಪೆಟ್ರೋಲ್-ಡೀಸೆಲ್ ಬೆಲೆ; ಇದು ಆತ್ಮಹತ್ಯೆ ನಿರ್ಭರ ಎಂದ ಜನ! 

ನಲಪಾಡ್ ಪೋಲಿಸ್ ವಶಕ್ಕೆ
 ಕಾಂಗ್ರೆಸ್​ ಯುವ ನಾಯಕ ಮೊಹಮ್ಮದ್ ನಲಪಾಡ್ ಲಾಕ್​ಡೌನ್​ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಅವರನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರದಂದು ಬೆಂಗಳೂರಿನ ಓಪೆರಾ ಜಂಕ್ಷನ್‌ ಬಳಿ ನಿಂತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದಾರೆ. ಈ ವೇಳೆ ಅಶೋಕ ನಗರ ಪೊಲೀಸರು ಸ್ಥಳಕ್ಕೆ ಬಂದಿದ್ದು, ನಲಪಾಡ್​ನನ್ನು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಳಿಕ ದಂಡ ಕಟ್ಟಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.