ಕಾಂಗ್ರೆಸ್ಸಿಗೆ ಹೋಗಲ್ಲ ಎಂದ ಮರುದಿನವೇ ಸಿಎಂ ಜತೆ ಬಿಜೆಪಿ ಶಾಸಕ ಹೆಬ್ಬಾರ್ ಭೇಟಿ, ಕುತೂಹಲ..!
ಗುರುವಾರವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಮಾಧ್ಯಮಗಳಿಗೆ ಶಿವರಾಮ್ ಹೆಬ್ಬಾರ್ ಹೇಳಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ನಗರಕ್ಕೆ ಆಗಮಿಸಿದ ಹೆಬ್ಬಾರ್ ಅವರು ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.

ಬೆಂಗಳೂರು(ಆ.26): ಘರ್‌ವಾಪ್ಸಿ ಕೋಲಾಹಲದ ನಡುವೆಯೇ ಶುಕ್ರವಾರ ತಡರಾತ್ರಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಗುರುವಾರವಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಮಾಧ್ಯಮಗಳಿಗೆ ಶಿವರಾಮ್ ಹೆಬ್ಬಾರ್ ಹೇಳಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ನಗರಕ್ಕೆ ಆಗಮಿಸಿದ ಹೆಬ್ಬಾರ್ ಅವರು ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.
ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್, ಹೆಬ್ಬಾರ್, ಬೈರತಿ
ಹೆಬ್ಬಾರ್ ಅವರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ ಎಂದು ಅವರ ಆಪ್ತ ಬಳಗ ಹೇಳುತ್ತದೆ. ಆದರೆ, ಹೆಬ್ಬಾರ್ ಅವರು ನಡೆಸಿದ ಈ ತಡರಾತ್ರಿ ಭೇಟಿಯು ಘರ್ ವಾಪ್ಸಿಯ ಮುಂದುವರೆದ ಬೆಳವಣಿಗೆ ಎಂದೇ ಮೂಲಗಳು ಹೇಳುತ್ತವೆ.
ಕಾಂಗ್ರೆಸ್ ಘರ್ ವಾಪ್ಸಿ ಚರ್ಚೆ ತೀವ್ರಗೊಂಡಿರುವ ಈ ಹಂತದಲ್ಲಿ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ವಾರವಷ್ಟೇ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಸಿಎಂ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಇದೀಗ ಶಿವರಾಮ್ ಹೆಬ್ಬಾರ್ ಅವರು ಎಸ್.ಟಿ. ಸೋಮಶೇಖರ್ ಮಾದರಿಯಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ.