ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್, ಹೆಬ್ಬಾರ್, ಬೈರತಿ
ಕಾಂಗ್ರೆಸ್‌ಗೆ ವಾಪಸ್ ಹೋಗುತ್ತಾರೆ ಎಂಬ ವದಂತಿ ಹಬ್ಬಿದ್ದ ಬಿಜೆಪಿಯ ಮೂವರು ಶಾಸಕರು ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಬೆಂಗಳೂರು (ಆ.25): ಕಾಂಗ್ರೆಸ್‌ಗೆ ವಾಪಸ್ ಹೋಗುತ್ತಾರೆ ಎಂಬ ವದಂತಿ ಹಬ್ಬಿದ್ದ ಬಿಜೆಪಿಯ ಮೂವರು ಶಾಸಕರು ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಗುರುವಾರ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಮತ್ತು ಬೈರತಿ ಬಸವರಾಜು ಅವರು ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆಗಳನ್ನು ನಿರಾಕರಿಸಿದರು.
ಎಸ್.ಟಿ.ಸೋಮಶೇಖರ್ ಮಾತನಾಡಿ, ಸದ್ಯ ನಾನು ಬಿಜೆಪಿಯ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಕೆಲವರು ಶಾಸಕರಾಗಬೇಕು ಎಂಬ ಆಸೆ ಇರಿಸಿಕೊಂಡಿದ್ದಾರೆ. ಹೀಗಾಗಿ ಚುನಾವಣೆ ಪೂರ್ವದಲ್ಲೂ ಸೋಮಶೇಖರ್ ಬಿಜೆಪಿ ಬಿಡುತ್ತಾನೆ ಎಂದು ಹೇಳಿದ್ದರು. ಈಗ ಅದೇ ವ್ಯಕ್ತಿಗಳು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು. ಆದರೆ, ಅದು ಆಗುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್
ಶಿವರಾಂ ಹೆಬ್ಬಾರ್ ಮಾತನಾಡಿ, ನಾವು ಕಾಂಗ್ರೆಸ್‌ಗೆ ಹೋಗುತ್ತೇವೆ ಎಂಬ ವಿಚಾರ ಏಕೆ ಚರ್ಚೆಗೆ ಬಂದಿತೋ ಗೊತ್ತಿಲ್ಲ. ನಾನು ಬಿಜೆಪಿಯಲ್ಲಿ ಇದ್ದೇನೆ. ಆಹ್ವಾನ, ಅಪೇಕ್ಷೆ ಸಾಮಾನ್ಯ. ಬೆಂಬಲಿಗರು ಅವರದ್ದೇ ಆದ ರೀತಿಯಲ್ಲಿ ಮಾತನಾಡುತ್ತಾರೆ. ಯಾವಾಗ ಹೇಗೆ ಹೇಳಬೇಕೋ ಆಗ ಹೇಳುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಇನ್ನು ಬೈರತಿ ಬಸವರಾಜು ಮಾತನಾಡಿ, ನಾನು ಬಿಜೆಪಿ ಬಿಡುವುದಿಲ್ಲ, ಒಂದು ವೇಳೆ ಅಂತಹ ಸಂದರ್ಭ ಬಂದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು.
ನಾನು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಯಾರೋ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಪಕ್ಷ ಬಿಡುವುದಿಲ್ಲ, ಇಲ್ಲಿಯೇ ಇರುತ್ತೇನೆ. ಒಂದು ವೇಳೆ ಪಕ್ಷ ಬಿಡುವ ಸಂದರ್ಭ ಬಂದರೆ ನಿವೃತ್ತಿಯಾಗುತ್ತೇನೆ. ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ. ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನೂ ಸಹ ಯಾರನ್ನು ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ-ಮಾನ, ಗೌರವ ಎಲ್ಲವೂ ಸಿಕ್ಕಿದೆ. ಹೀಗಿರುವಾಗ ಪಕ್ಷ ಬಿಡುವ ಪ್ರಮೇಯ ಬರುವುದಿಲ್ಲ ಎಂದರು.
‘ನಮ್ನೀರು, ನಮ್ಹಕ್ಕು’ ಎಂದವರು ತ.ನಾಡಿಗೆ ಬಿಟ್ಟಿದ್ದೇಕೆ?: ಎಚ್.ಡಿ.ಕುಮಾರಸ್ವಾಮಿ
‘ಲೋಕಸಭೆಗೆ ಸ್ಪರ್ಧೆ ಇಲ್ಲ, ರಾಜಕೀಯಕ್ಕೆ ಮಗ ಬರೋದಿಲ್ಲ’: ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮಗನನ್ನು ರಾಜಕೀಯಕ್ಕೆ ಕರೆತರುವ ಇಚ್ಛೆಯೂ ಇಲ್ಲ. ದೆಹಲಿಗೆ ಬರುವಂತೆ ವರಿಷ್ಠರು ಸೂಚಿಸಿದ ತಕ್ಷಣ ತೆರಳುತ್ತೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.