ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಹೋರಾಟ ನ್ಯಾಯಯುತ: ನಟ ಕಿಶೋರ್ ಬೆಂಬಲ
ದೆಹಲಿ ಕುಸ್ತಿಪಟುಗಳ ಪ್ರತಿಭಟನೆ ನ್ಯಾಯಯುತವಾಗಿದ್ದು, ಅವರ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ನಟ ಕಿಶೋರ್ ಹೇಳಿದರು.
ಬೆಂಗಳೂರು (ಮೇ.24): ದೆಹಲಿ ಕುಸ್ತಿಪಟುಗಳ ಪ್ರತಿಭಟನೆ ನ್ಯಾಯಯುತವಾಗಿದ್ದು, ಅವರ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ನಟ ಕಿಶೋರ್ ಹೇಳಿದರು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ರಾಜ್ಯ ಸಮಿತಿ ನಗರದ ಯುವಿಸಿಇ ಅಲುಮಿನಿ ಅಸೋಸಿಯೇಶನ್ ಹಾಲ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ದೆಹಲಿ ಕುಸ್ತಿಪಟುಗಳ ಹೋರಾಟ ನ್ಯಾಯಬದ್ಧವಾಗಿದೆ. ವಿಶ್ವಮಟ್ಟದ ಸಾಧಕರು ನ್ಯಾಯಕ್ಕಾಗಿ ಬೀದಿಯಲ್ಲಿರುವುದು ತುಂಬಾ ನೋವಿನ ಸಂಗತಿ. ಪದಕ ಗೆದ್ದಾಗ ಅಭಿನಂದಿಸಿದ ಮೋದಿಯವರು ಇಂದು ಮೌನವಾಗಿದ್ದಾರೆ. ಅವರು ಅಲ್ಲಿ ಹೋರಾಟದಲ್ಲಿದ್ದಾಗ ಮೋದಿಯವರು ರಾಜ್ಯದಲ್ಲಿ ಮತ ಯಾಚನೆ ಮಾಡುತ್ತಿದ್ದರು. ದೇಶ ನಿಮ್ಮೊಟ್ಟಿಗಿದೆ ಎಂಬ ಮಾತುಗಳು ಇಂದು ಹುಸಿಯಾಗಿವೆ. ಯಶಸ್ವಿಯಾದ ರೈತ ಚಳವಳಿ ಹೋರಾಟದ ಮಾದರಿ ನಮ್ಮೆದುರಿದ್ದು, ಹೋರಾಟದಲ್ಲಿ ಗೆಲುವು ನಮ್ಮದಾಗಲಿದೆ ಎಂದರು.
ಅಂಡರ್‌ಪಾಸಲ್ಲಿ ನೀರು ತುಂಬಿದರೆ ಮೊಳಗಲಿದೆ ಸೈರನ್: ಬಿಬಿಎಂಪಿ ಚಿಂತನೆ
ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ರೀತ್ ಅಬ್ರಾಹಂ ಮಾತನಾಡಿ, ಕ್ರೀಡಾ ಕ್ಷೇತ್ರದ ಮೇಲಿನ ರಾಜಕಾರಣಿಗಳ ಹಿಡಿತವನ್ನು ತೊಲಗಿಸಬೇಕಿದೆ. ತಾವು ಕ್ರೀಡೆಗೆ ಕಾಲಿಟ್ಟಾಗ ಹೆಣ್ಣು ಮಕ್ಕಳ ಸಂಖ್ಯೆ ಕೈ ಬೆರಳೆಣಿಕೆಯಷ್ಟಿತ್ತು. ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಅದಕ್ಕೆ ಕಾರಣ ಕ್ರೀಡೆಯೊಳಗಿನ ರಾಜಕೀಯ. ರಾಜಕಾರಣಿಗಳು ಇಲ್ಲಿ ಅಧಿಕಾರವನ್ನು ಹಿಡಿದು ಕ್ರೀಡಾಪಟುಗಳ ಹಿಂಸೆಗೆ ಕಾರಣವಾಗಿದ್ದಾರೆ ಎಂದರು. ಕುಸ್ತಿಪಟುಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಎಲ್ಲರೂ ಒಂದಾಗಬೇಕಿದೆ ಎಂದರು. ಐಎಎಸ್ ಅಧಿಕಾರಿ ಪಲ್ಲವಿ ಆಕುರತಿ, ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷೆ ಅಪರ್ಣಾ ಬಿ. ಆರ್., ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಮಧುಲತಾ ಗೌಡರ್ ಸೇರಿ ಇತರರಿದ್ದರು.
ಮಹಿಳಾ ಕುಸ್ತಿ ಪಟುಗಳ ಹೋರಾಟಕ್ಕೆ ಬೀದರ್‌ನಲ್ಲಿ ಬೆಂಬಲ: ಲೈಂಗಿಕ ದೌರ್ಜನ್ಯದ ವಿರುದ್ದ ಮಹಿಳಾ ಕುಸ್ತಿ ಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಜನವಾದಿ ಮಹಿಳಾ ಸಂಘಟನೆ ಮತ್ತು ಇತರೆ ಸಮಾನ ಮನಸ್ಕ ಸಂಘಟನೆಗಳ ಬೆಂಬಲ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಬೀದರ್‌ನಲ್ಲಿ ಅಖಿಲ ಭಾರತ ಮಹಿಳಾ ಜನವಾದಿ ಸಂಘಟನೆ ರಾಜ್ಯ ಸಮಿತಿಯಿಂದ ಕ್ಯಾಂಡಲ್ ಮಾರ್ಚ ನಡೆಸಲಾಯಿತು.
ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ ಚರಣ ಸಿಂಗ್ ಬಂಧನಕ್ಕೆ ಆಗ್ರಹಿಸಿ ದೇಶಾದ್ಯಂತ ಮಂಗಳವಾರ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರೆ ಬೀದರ್‌ನಲ್ಲಿ ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ನೀಲಾ ಕೆ. ನೇತೃತ್ವದಲ್ಲಿ ಬೀದರ್‌ನ ಡಾ. ಅಂಬೇಡ್ಕರ್ ವೃತ್ತದಲ್ಲಿ ಮಹಿಳೆಯರಿಂದ ಪ್ರತಿಭಟನೆ ನಡೆಸಲಾಯಿತು.
ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಫುಲ್ ಚಾರ್ಜ್!
ಭಾರತದಲ್ಲಿ ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಎಂಬ ನಾಟಕವಾಗಿದ್ದು ಬ್ರಿಜ್ ಭೂಷಣ ಸಿಂಗ್ ಮತ್ತು ಕೆಲವು ಕುಸ್ತಿ ತರಬೇತುದಾರರು ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ನ್ಯಾಯ ದೊರಕಿಸಿಕೊಡಿ ಎಂದು ಕುಸ್ತಿಪಟುಗಳು ಕೇಂದ್ರದ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ದೂರು ನೀಡಿದ್ದರೂ ಸಹ ಕ್ರಮ ಜರುಗಿಸಿಲ್ಲ. ಕ್ರಿಮಿನಲ್ ಹಿನ್ನೆಲೆ ಇರುವ ಬಿಜೆಪಿಯ ಉತ್ತರ ಪ್ರದೇಶದ ಸಂಸದ ಬ್ರಿಜ್ ಭೂಷಣ ಶರಣನ್ನು ಮೋದಿ, ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ರಕ್ಷಿಸುತಿದ್ದಾರೆ ಎಂದು ದೂರಿದರು.