ಬೆಂಗಳೂರು, (ಮಾ.06): ರಮೇಶ್ ಜಾರಕಿಹೊಳಿ ಸೆಕ್ಸ್ ಸಿ.ಡಿ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ.

ಇದರ ಮಧ್ಯೆ ಭದ್ರಾವತಿ ಶಾಸಕ ಸಂಗಮೇಶ್ ಅವರು  ಸಿಎಂ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಸಚಿವ ಕೆ ಎಸ್ ಈಶ್ವರಪ್ಪನವರ ಎಲ್ಲಾ ಹಗರಣಗಳ ಬಗ್ಗೆ ನನಗೆ ಗೊತ್ತಿದೆ. ಮುಂದಿನ ಎಲ್ಲಾ ಹಗರಣ ಬಯಲು ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಲ್ಲೇ ಅವರ ಹಗರಣ ಬಯಲು ಮಾಡುತ್ತೇನೆ. ಹಿಂದೆ ಎಷ್ಟು ಆಸ್ತಿಯಿತ್ತು, ಈಗ ಎಷ್ಟು ಆಸ್ತಿಯಿದೆ ಎನ್ನುವುದರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಇದೆಲ್ಲಾ ನಡೆಯಲ್ಲ: ಸಿಎಂಗೆ ಶಾಸಕ ಖಡಕ್ ಎಚ್ಚರಿಕೆ

ಇನ್ನು ಈ ಸರ್ಕಾರ ಇರುವುದು ಮೂರು ತಿಂಗಳಷ್ಟೇ. ನಮ್ಮ ಶಾಸಕರಿಗೆ ಬೆಲೆಯಿಲ್ಲದಂತಾಗಿದೆ. ಹೆಣ್ಣುಮಕ್ಕಳು ಅನುಮಾನದಿಂದ ನೋಡುವಂತಾಗಿದೆ. ವಿಧಾನಸೌಧದ ಪಾವಿತ್ರ್ಯ ಹಾಳಾಗಿದೆ ಎಂದು ಆರೋಪಿಸಿದರು.

ಕೆಲವೇ ದಿನಗಳಲ್ಲಿಇವರ ಹಗರಣ ಹೊರಬರುತ್ತದೆ. ಇವರ ಸರ್ಕಾರ ಬಿದ್ದು‌ಹೋಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದ ಸಂಗಮೇಶ್, ಮುಂಗಳವಾರ ನಾವು ಎಸ್ ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಎಸ್ಪಿ ಕಚೇರಿಗೆ ಮುತ್ತಿಗೆ ಹಾಕ್ತೇವೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯವರು ಧರಣಿ ಮಾಡುತ್ತಾರೆ ಎಂದು ತಮ್ಮ ಪುತ್ರನ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಮೇಲೆ ಕೇಸ್ ಹಾಕಿದ್ದಾರೆ. ವಿಧಾನಸಭೆಯಲ್ಲಿ ಅಮಾನತು ಮಾಡಿದ್ದಾರೆ. ಭದ್ರಾವತಿಯಲ್ಲಿ‌ಚುನಾವಣೆ ಗೆದ್ದ ಇತಿಹಾಸ ಬಿಜೆಪಿಗಿಲ್ಲ. ಈ ರೀತಿ ಷಡ್ಯಂತ್ರ ಮಾಡಿ ಬಿಜೆಪಿ ಬೀಜ ಬಿತ್ತಲು ಹೊರಟಿದ್ದಾರೆ. ನಮ್ಮ‌ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರಿದ್ದಾರೆ. ನಮ್ಮ ಎಲ್ಲರಲ್ಲೂ ಸೌಹಾರ್ದತೆಯಿದೆ ಎಂದು ಹೇಳಿದರು.