ಮುಂಬೈ[ನ.25]: ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನೆ ಮತ್ತು ಬಿಜೆಪಿ ಪಕ್ಷಗಳ ನಡುವೆ ಮಹಾರಾಷ್ಟ್ರ ಸರ್ಕಾರ ರಚನೆಗೆ ಹಗ್ಗಜಗ್ಗಾಟ ಮುಂದುವರಿದಿರುವ ಬೆನ್ನಲ್ಲೇ, ಸರ್ಕಾರ ರಚನೆಗೆ ನಿರ್ಣಾಯಕ ಪಾತ್ರ ವಹಿಸಲಿರುವ ಸಣ್ಣ ಪಕ್ಷಗಳ 16 ಶಾಸಕರು ಮತ್ತು 13 ಪಕ್ಷೇತರ ಶಾಸಕರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ವಿಚಾರ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಾರೆ 288 ಸಂಖ್ಯಾಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲಲು 145 ಶಾಸಕರ ಬೆಂಬಲ ಅಗತ್ಯವಿದ್ದು, 13 ಪಕ್ಷೇತರರು ಮತ್ತು ಸಣ್ಣ ಪಕ್ಷಗಳ 16 ಶಾಸಕರ ಪಾತ್ರ ನಿರ್ಣಾಯಕವಾಗಿದೆ.

NCPಯಲ್ಲೇ ಇದ್ದೇನೆ, ಶರದ್‌ ನಮ್ಮ ನಾಯಕ: ಅಜಿತ್‌ ಪವಾರ್‌ ಸ್ಫೋಟಕ ಹೇಳಿಕೆ!

ಕಾಂಗ್ರೆಸ್‌-ಎನ್‌ಸಿಪಿ ಜೊತೆ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿರುವ ಶಿವಸೇನೆ, ತನ್ನ 56 ಶಾಸಕರ ಜೊತೆಗೆ ಇತರ 7 ಶಾಸಕರ ಬೆಂಬಲ ತಮಗೇ ಇದೆ ಎಂದು ಘೋಷಿಸಿಕೊಂಡಿದೆ. ಅಲ್ಲದೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 105 ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ತನಗೆ ಇತರ 14 ಶಾಸಕರ ಬೆಂಬಲವಿದೆ ಎಂದು ಹೇಳಿದೆ. ಆದರೆ, ಮುಖ್ಯಮಂತ್ರಿ ಫಡ್ನವೀಸ್‌ ಸರ್ಕಾರದಲ್ಲಿ ಡಿಸಿಎಂ ಆಗಿ ಪದಗ್ರಹಣ ಮಾಡಿದ ಅಜಿತ್‌ ಪವಾರ್‌ ಅವರಿಗೆ ಪಕ್ಷೇತರ ಶಾಸಕರ ಬೆಂಬಲವಿದೆಯೇ ಎಂಬುದು ಖಚಿತವಾಗಿಲ್ಲ. ಹೀಗಾಗಿ, ಮುಖ್ಯಮಂತ್ರಿ ಫಡ್ನವೀಸ್‌ ವಿಶ್ವಾಸ ಮತ ಗೆಲ್ಲಲು ಇನ್ನೂ 26 ಶಾಸಕರ ಕೊರತೆಯಿದ್ದು, ಸರ್ಕಾರದ ಭವಿಷ್ಯ ಎನ್‌ಸಿಪಿ ಮತ್ತು ಇತರ ಪಕ್ಷೇತರ ಶಾಸಕರ ಮೇಲೆ ನಿಂತಿದೆ.

2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!

ಅಕ್ಟೋಬರ್‌ 24ರಂದು ಘೋಷಣೆಯಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 105 ಸ್ಥಾನ, ಶಿವಸೇನೆ 56, ಎನ್‌ಸಿಪಿ 54 ಮತ್ತು ಕಾಂಗ್ರೆಸ್‌ 44 ಸ್ಥಾನಗಳನ್ನು ಗೆದ್ದಿದೆ. ಉಳಿದ 29 ಕ್ಷೇತ್ರಗಳಲ್ಲಿ ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಜಯಭೇರಿಯಾಗಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು