ಇತ್ತೀಚೆಗೆ ಬೆಳಗಾವಿಯ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಸಾಂಕ್ರಾಮಿಕ ಕಾರಣ ಹೊರತು ಸಿಬ್ಬಂದಿಯ ನಿರ್ಲಕ್ಷ್ಯವಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಸುವರ್ಣಸೌಧ (ಡಿ.09): ಇತ್ತೀಚೆಗೆ ಬೆಳಗಾವಿಯ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಸಾಂಕ್ರಾಮಿಕ ಕಾರಣ ಹೊರತು ಸಿಬ್ಬಂದಿಯ ನಿರ್ಲಕ್ಷ್ಯವಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಬಿಜೆಪಿಯ ಡಾ.ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು,‘ಕೃಷ್ಣ ಮೃಗಗಳ ಸಾವಿಗೆ ಸಾಂಕ್ರಾಮಿಕ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ (ಗಳಲೆ ರೋಗ) ಕಾರಣವೆಂದು ಪತ್ತೆಯಾಗಿದೆ. ಮೃಗಾಲಯದಲ್ಲಿದ್ದ 38 ಕೃಷ್ಣಮೃಗಗಳ ಪೈಕಿ 31 ಸಾವನ್ನಪ್ಪಿವೆ. ಉಳಿದ 7 ಕೃಷ್ಣಮೃಗಗಳನ್ನು ಸದ್ಯ ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದರು.
ಸೋಂಕು ತಗುಲಿದ ಕೃಷ್ಣ ಮೃಗಗಳಿಗೆ ಹೊರಗಿನಿಂದ ಯಾವುದೇ ರೋಗ ಲಕ್ಷಣ ಕಂಡು ಬಂದಿರಲಿಲ್ಲ. ಸೋಂಕು ತಗುಲಿದ 6-24 ಗಂಟೆಯೊಳಗೆ ಸಾವು ಸಂಭವಿಸುತ್ತದೆ. ಹೀಗಾಗಿ ಪಶು ವೈದ್ಯಾಧಿಕಾರಿಗಳಿಗೆ ಈ ರೋಗ ತಡೆ ಹಿಡಿಯಲು ಸಮಯದ ಅವಕಾಶ ಕಡಿಮೆ ಇರುತ್ತದೆ’ ಎಂದು ವಿವರಿಸಿದರು. ಪ್ರಕರಣ ತಿಳಿದ ತಕ್ಷಣ ಬೆಂಗಳೂರಿನಿಂದ ಪಶು ವೈದ್ಯಕೀಯ ತಂಡ ತಕ್ಷಣ ಮೃಗಾಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿತಾದರೂ ಬೇರೆ ಬೇರೆ ದಿನಗಳಲ್ಲಿ ಕೃಷ್ಣ ಮೃಗಗಳು ಮೃತಪಟ್ಟಿವೆ. ಕೃಷ್ಣ ಮೃಗಗಳ ಸಾವಿನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮೃಗಾಲಯಗಳ ಪಾಲಕರಿಗೆ ಜೈವಿಕ ಸುರಕ್ಷತಾ ಶಿಷ್ಟಾಚಾರ ಪಾಲಿಸಲು ಸೂಚಿಸಲಾಗಿದೆ. ಸಾಕು ಪ್ರಾಣಿಗಳಿಗೆ ಸಾಮಾನ್ಯ ಪಶು ಕಾಯಿಲೆಗಳ ಲಸಿಕೆ ಹಾಕಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದು ಸೇರಿದಂತೆ ಹಲವಾರು ಸೂಚನೆ ನೀಡಲಾಗಿದೆ’ ಎಂದರು.
ಸವಲತ್ತುಗಳ ಸದುಪಯೋಗ ಮಾಡಿಕೊಳ್ಳಿ
ತಾಲೂಕಿನಲ್ಲಿ ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಯಡಿ ಸಹಾಯಧನ ಮತ್ತು ಯಂತ್ರೋಪಕರಣಗಳನ್ನು ನೀಡಲಾಗುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ತಾಪಂ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಯಂತ್ರೋಪಕರಣ ಮತ್ತು ಮಾರುಕಟ್ಟೆ ಕಾರ್ಯಕ್ರಮದಡಿ ರೈತರಿಗೆ ಯಂತ್ರೋಪಕರಣ ವಿತರಿಸಿ ಮಾತನಾಡಿದರು.
ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಸಬ್ಸಿಡಿ ದರ ದಲ್ಲಿ ಕೃಷಿ ಕಾಯಕಕ್ಕೆ ಸಹಾಯವಾಗಲು ಟ್ರ‍್ಯಾಕ್ಟರ್ ಮತ್ತು ತಳ್ಳುವ ಗಾಡಿಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಯಂತ್ರೋಪಕರಣ ಪಡೆದ ರೈತರು ಯಾವದೇ ಕಾರಣಕ್ಕೂ ಮಾರಾಟ ಮಾಡಬಾರದು. ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ ಉಳಿದವರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಜಬನೂರ್, ವಿವಿಧ ಹೋಬಳಿಯ ಅಧಿಕಾರಿಗಳು ಹಾಜರಿದ್ದರು.

