ಬೆಂಗಳೂರು (ಏ. 09): ರಾಷ್ಟ್ರೀಯ ಪಕ್ಷಗಳಲ್ಲಿ ದಿಲ್ಲಿ ಅನುಮತಿ ಇಲ್ಲದೇ ಅಸಮಾಧಾನ, ಭಿನ್ನಮತ, ಬಂಡಾಯ ಏಳುವುದು ಕಷ್ಟ. ಅದರಲ್ಲೂ ಮೋದಿ ಮತ್ತು ಶಾ ಎದುರು ದಿಲ್ಲಿಯ ನಾಯಕರೇ ಮಾತನಾಡಲು ಹಿಂಜರಿಯುವ ಕಾಲದಲ್ಲಿ ಯತ್ನಾಳ್‌ ಅಂಥವರು ಬಿಂದಾಸ್‌ ಆಗಿ ದಿನವೂ ಯಡಿಯೂರಪ್ಪ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡುವುದು ನೋಡಿದರೆ ಸೋಜಿಗ ಅನ್ನಿಸುವುದು ಸಹಜ.

ಇನ್ನೂ ವಿಚಿತ್ರ ವಿಷಯ ಎಂದರೆ ಯತ್ನಾಳ್‌ ಏನೇನೋ ಮಾತನಾಡಿ ಉಸ್ತುವಾರಿ ಅರುಣ್‌ ಸಿಂಗ್‌ ಅವರೇ ಬೇಸರ ವ್ಯಕ್ತಪಡಿಸಿದ ಮೇಲೂ ಸುಮ್ಮನೆ ಕುಳಿತಿರುವ ಹೈಕಮಾಂಡ್‌ನ ನಿಲುವು. ಇನ್ನು ಯತ್ನಾಳ್‌ ಮಾತನಾಡಿದ್ದು ಕಮ್ಮಿ ಇತ್ತೇನೋ ಎಂಬಂತೆ ಯಡಿಯೂರಪ್ಪ ಬಿಟ್ಟರೆ ಅತ್ಯಂತ ಹಿರಿಯ ನಾಯಕ ಈಶ್ವರಪ್ಪ ನೇರವಾಗಿ ರಾಜ್ಯಪಾಲರ ಬಳಿಗೆ ಹೋಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ದೂರು ಕೊಟ್ಟಿದ್ದು ಬಿಜೆಪಿ ಒಳಗಿನ ತಾಪಮಾನವನ್ನಂತೂ ಹೆಚ್ಚಿಸಿದೆ.

ಹಿರಿಯ ನಾಯಕರ ಬಹಿರಂಗ ಕಾದಾಟ ನೋಡಿಯೂ ಬಿಜೆಪಿ ಹೈಕಮಾಂಡ್‌ ಸುಮ್ಮನಿದೆ. ಇದರ ಅರ್ಥ ಸ್ಪಷ್ಟವಿದೆ; ದಿಲ್ಲಿಯಲ್ಲಿ ಹೈಕಮಾಂಡ್‌ಗೆ ಹತ್ತಿರ ಇರುವ ನಾಯಕರ ಒಲವು ನಿಲುವು ಗಮನಿಸಿಯೇ ಈಶ್ವರಪ್ಪರಂಥ ಪಳಗಿದ ನಾಯಕರು ಮೈದಾನಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ 2004 ರಲ್ಲಿ ಬಿಜೆಪಿ ಯಾವಾಗ ಅಧಿಕಾರದ ಹತ್ತಿರ ಬಂತೋ ಆವತ್ತಿನಿಂದ ಶುರುವಾದ ಆಂತರಿಕ ಘರ್ಷಣೆ, ಪತ್ರ ಸಮರ, ಟೀವಿ ಕಾದಾಟ ಆಗಾಗ ಉಲ್ಬಣಗೊಳ್ಳುತ್ತಲೇ ಬಂದಿದೆ. ಆಂತರಿಕ ಪ್ರಜಾಪ್ರಭುತ್ವ ಒಳ್ಳೆಯದು. ಆದರೆ ತೀರಾ ಇಷ್ಟರ ಮಟ್ಟಿಗೆ ಅಲ್ಲ.

ಪುನಃ ಗೆದ್ದರೆ ಮಮತಾ ಬ್ಯಾನರ್ಜಿಗೆ ರಾಜ್ಯ ಪ್ರಾಪ್ತಿ, ಸೋತರೆ ರಾಜಕೀಯ ಪತನ

ಯತ್ನಾಳ್‌ ಬಗ್ಗೆ ಮೃದುತ್ವ ಏಕೆ?

ಯತ್ನಾಳ್‌ ಕಳೆದ 6 ತಿಂಗಳಿನಿಂದ ದಿನವೂ ಯಡಿಯೂರಪ್ಪರನ್ನು ಮುಜುಗರಕ್ಕೆ ಸಿಲುಕಿಸುವ ಹೇಳಿಕೆ ಕೊಡುತಿದ್ದಾರೆ. ಆದರೆ ಅವರಿಗೆ ಶೋಕಾಸ್‌ ನೋಟಿಸ್‌ ಕೊಟ್ಟಿರುವ ಹೈಕಮಾಂಡ್‌ಗೆ ಕಠಿಣ ಕ್ರಮದ ಮನಸ್ಸಿಲ್ಲ. ಇದಕ್ಕೆ ಮುಖ್ಯ ಕಾರಣ ಪಂಚಮಸಾಲಿ ಸಮುದಾಯ. ಒಂದು ವೇಳೆ ಏನೇ ಕ್ರಮ ತೆಗೆದುಕೊಂಡರೂ ಯತ್ನಾಳ್‌ಗೆ ಪಂಚಮಸಾಲಿ ಸಮುದಾಯದ ಬೆಂಬಲ ಸಿಕ್ಕು, ಆ ಸಮುದಾಯ ನಮ್ಮಿಂದ ದೂರ ಹೋದರೆ ಏನು ಮಾಡುವುದು ಎಂಬ ಆತಂಕ ಹೈಕಮಾಂಡ್‌ನಲ್ಲಿದೆ.

ಮೊದಲೇ ಬಿಜೆಪಿಯ ಲಿಂಗಾಯತ ವೋಟ್‌ ಬ್ಯಾಂಕ್‌ನಿಂದ ಪಂಚಮಸಾಲಿಗಳನ್ನು ಬೇರ್ಪಡಿಸಲು ಕಾಂಗ್ರೆಸ್‌ನ ಒಂದು ಗುಂಪು ನಿರಂತರ ಪ್ರಯತ್ನ ಮಾಡುತ್ತಿರುವಾಗ ಯತ್ನಾಳರನ್ನು ಈಗ ಹೊರಗೆ ಹಾಕಿದರೆ ಅನಾಯಾಸವಾಗಿ ಯತ್ನಾಳ್‌ಗೆ ಜನಪ್ರಿಯತೆ, ಅನುಕಂಪ ಎರಡೂ ಸಿಗಬಹುದು. ಬರೀ ಯಡಿಯೂರಪ್ಪ ಅಷ್ಟೇ ಅಲ್ಲ, ಸ್ಥಳೀಯ ಸಂಘ ಮತ್ತು ರಾಜ್ಯ ಬಿಜೆಪಿಯ ಇತರ ನಾಯಕರಾದ ಪ್ರಹ್ಲಾದ್‌ ಜೋಶಿ, ಮುರುಗೇಶ್‌ ನಿರಾಣಿ, ಶೆಟ್ಟರ್‌, ಬೊಮ್ಮಾಯಿ ಜೊತೆಗೂ ಯತ್ನಾಳರ ಸಂಬಂಧ ಪೂರ್ತಿ ಹದಗೆಟ್ಟು ಹೋಗಿದೆ. ಆದರೆ ಯಾರ ಬೆಂಬಲ ಇಲ್ಲದೇ ಇದ್ದರೂ ಯತ್ನಾಳ್‌ಗೆ ಸದ್ಯಕ್ಕಂತೂ ಜಾತಿ ಸಮೀಕರಣ ಸಹಾಯ ಮಾಡುತ್ತಿದೆ.

ಭಿನ್ನಮತ ಮತ್ತು ಹೈಕಮಾಂಡ್‌

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಏನೇ ಭಿನ್ನಮತ, ಅಸಮಾಧಾನ, ಬಂಡಾಯ ಏಳಲಿ ಅದರಲ್ಲಿ ದಿಲ್ಲಿ ಪಾತ್ರ ಮುಖ್ಯ. ಅದು ನಿಜಲಿಂಗಪ್ಪ ವಿರುದ್ಧದ ಅಸಮಾಧಾನದಿಂದ ಹಿಡಿದು ಯಡಿಯೂರಪ್ಪನವರ ವಿರುದ್ಧದ ಅಸಮಾಧಾನದವರೆಗೆ ದಿಲ್ಲಿ ಒಪ್ಪಿಗೆ ಇಲ್ಲದೆ ಏನೂ ನಡೆಯೋದಿಲ್ಲ. ನಿಜಲಿಂಗಪ್ಪ ವಿರುದ್ಧ ಇಲ್ಲಿ ಶಾಸಕರು ಬಂಡು ಏಳಲು ಇಂದಿರಾ ಗಾಂಧಿ ಅವರ ಚಿತಾವಣೆ ಇತ್ತು. ನಂತರ ದೇವರಾಜ್‌ ಅರಸ್‌ ವಿರುದ್ಧ ಬಂಡಾಯದ ಹಿಂದೆ ಸಂಜಯ ಗಾಂಧಿ ಯೋಜನೆ ಇತ್ತು.

ಒಮ್ಮೆಯೂ ಒಡೆಯದೆ 100 ವರ್ಷ ನೆಲೆ ನಿಂತ ಏಕೈಕ ಭಾರತೀಯ ಸಂಘಟನೆ RSS, ಕಾರಣ..?

ಮಧ್ಯದಲ್ಲಿ ಹೆಗಡೆ, ಬೊಮ್ಮಾಯಿ, ದೇವೇಗೌಡರ ಜಗಳ ಸ್ಥಳೀಯ ಕಾದಾಟವೇ ಆಗಿದ್ದರೂ ಅದರಲ್ಲಿ ಚಂದ್ರಶೇಖರ್‌, ವಿ.ಪಿ.ಸಿಂಗ್‌, ಲಾಲು ಕೈಯಾಡಿಸುತ್ತಿದ್ದರು. ಇನ್ನು ವೀರೇಂದ್ರ ಪಾಟೀಲ್‌ ವಿರುದ್ಧ ರಾಜೀವ್‌ ಗಾಂಧಿ ಅವರಿಗೆ ಅಸಮಾಧಾನ ಇದ್ದರೆ, ಬಂಗಾರಪ್ಪ ವಿರುದ್ಧ ಪಿ.ವಿ.ನರಸಿಂಹ ರಾವ್‌ಗೆ ಅಸಮಾಧಾನ ಇತ್ತು. ಎಸ್‌.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಇಲ್ಲಿನ ನಾಯಕರ ಜೊತೆಗೆ ದಿಲ್ಲಿ ಹೈಕಮಾಂಡ್‌ ಸೂತ್ರಧಾರರನ್ನು ಕೈಯಲ್ಲಿಟ್ಟುಕೊಂಡಿದ್ದರಿಂದ ಭಿನ್ನಮತದ ತೊಂದರೆ ಬರಲಿಲ್ಲ.

ಇನ್ನು ಯಡಿಯೂರಪ್ಪನವರ ವಿರುದ್ಧ ಜನಾರ್ದನ್‌ ರೆಡ್ಡಿ ಮತ್ತು ಜಗದೀಶ್‌ ಶೆಟ್ಟರ್‌ ಬಂಡಾಯ ಏಳಲು ಸುಷ್ಮಾ ಸ್ವರಾಜ್‌, ಅನಂತ ಕುಮಾರ್‌ ಬೆಂಬಲ ಇತ್ತೆಂದು ಹೇಳಲಾಗುತ್ತದೆ. ನಂತರ 2011ರಲ್ಲಿ ಅಧಿಕಾರ ಬಿಡುವಾಗ ಅಡ್ವಾಣಿ ವಿರುದ್ಧ ಯಡಿಯೂರಪ್ಪ ನಡೆಸಿದ ಬಂಡಾಯಕ್ಕೆ ಅರುಣ್‌ ಜೇಟ್ಲಿ ಸಹಕಾರ ಇತ್ತು ಎಂಬ ಮಾತೂ ಇದೆ. ರಾಷ್ಟ್ರೀಯ ಪಕ್ಷಗಳಲ್ಲಿ ದಿಲ್ಲಿ ಆಶೀರ್ವಾದ ಇಲ್ಲದೇ ಯಾವುದೇ ಅಸಮಾಧಾನಕ್ಕೆ ನಿರಂತರತೆ ದೊರೆಯುವುದು ಸಾಧ್ಯ ಇಲ್ಲದ ಮಾತು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ