Asianet Suvarna News Asianet Suvarna News

ಪುನಃ ಗೆದ್ದರೆ ಮಮತಾ ಬ್ಯಾನರ್ಜಿಗೆ ರಾಜ್ಯ ಪ್ರಾಪ್ತಿ, ಸೋತರೆ ವೀರ ರಾಜಕೀಯ ಪತನ

2016ರ ಚುನಾವಣೆವರೆಗೆ ಭಾರೀ ಜನಪ್ರಿಯತೆ ಹೊಂದಿದ್ದ ಮಮತಾ ಮತ್ತು ಟಿಎಂಸಿ ತಮ್ಮ ಇಮೇಜ್‌ ಕಳೆದುಕೊಂಡಿದ್ದು 2018ರ ಪಂಚಾಯತ್‌ ಚುನಾವಣೆಯಲ್ಲಿ ನಡೆಸಿದ ಗೂಂಡಾಗಿರಿಯಿಂದ.

West Bengal Elections 2021 Mamata Banerjee faced with tough Challenge hls
Author
Bengaluru, First Published Apr 2, 2021, 3:24 PM IST

ನವದೆಹಲಿ (ಏ. 02): ಸ್ವಕ್ಷೇತ್ರ ಭವಾನಿಪುರವನ್ನು ಬಿಟ್ಟು ನಂದಿಗ್ರಾಮಕ್ಕೆ ಮಮತಾ ಬ್ಯಾನರ್ಜಿ ಅವರು ಹೋಗಿದ್ದೇಕೆ? ಇದು ಪಶ್ಚಿಮ ಬಂಗಾಳ ಚುನಾವಣೆಯ ಮಿಲಿಯನ್‌ ಡಾಲರ್‌ ಪ್ರಶ್ನೆ. ಇದಕ್ಕೆ ಉತ್ತರ ಸಿಕ್ಕರೆ ಸಾಕು ಬಂಗಾಳವನ್ನು ಯಾರು ಗೆಲ್ಲಬಹುದು ಎಂಬ ಉತ್ತರದ ಹತ್ತಿರ ಹತ್ತಿರ ತಲುಪಬಹುದು. ರಾಜಕಾರಣಿಗಳು ಅದರಲ್ಲೂ ಮುಖ್ಯಮಂತ್ರಿ ಆದವರು ರಿಸ್ಕ್‌ ತೆಗೆದುಕೊಳ್ಳೋದು ಕಡಿಮೆ. ಆದರೆ ಸದಾ ರಣೋತ್ಸಾಹಿ ದೀದಿ ಯಾರೊಂದಿಗೆ ಬೇಕಾದರೂ ಕುಸ್ತಿಗೆ ಬೀಳಲು ತಯಾರು.

ಸಂಸತ್ತಿನಲ್ಲಿ ಮೋದಿಯಿಂದ ಹಿಡಿದು ನಂದಿಗ್ರಾಮದಲ್ಲಿ ತನ್ನ ದಶಕಗಳ ಶಿಷ್ಯ ಸುವೇಂದು ಅಧಿಕಾರಿವರೆಗೆ ಯಾರ ಜೊತೆ ಬೇಕಾದರೂ ರಾಜಕೀಯದ ಜಂಗೀ ಕುಸ್ತಿಗೆ ಮಮತಾ ಹಿಂಜರಿಯುವವರಲ್ಲ. ಸದಾ ಬೀದಿಯಲ್ಲಿ ನಿಂತು ಹೋರಾಡುವ ದೀದಿಯದ್ದು ಅದೇ ಸಾಮರ್ಥ್ಯ ಮತ್ತು ದೌರ್ಬಲ್ಯ ಕೂಡ ಹೌದು. ಯಾರು ಏನೇ ಹೇಳಲಿ ನರೇಂದ್ರ ಮೋದಿ ವಾರಾಣಸಿಯಲ್ಲಿ, ರಾಹುಲ್ ಗಾಂಧಿ ವಯನಾಡಿನಲ್ಲಿ, ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಂತಿದ್ದು ರಾಜಕೀಯ ಪಂಡಿತರ ಸರ್ವೇಗಳು ಸೇಫ್‌ ಸೀಟ್‌ ಎಂದು ಹೇಳಿದ ನಂತರ. ಆದರೆ ನಂದಿಗ್ರಾಮ ಸೇಫ್‌ ಅಲ್ಲ ಎಂದು ಎಲ್ಲರೂ ಹೇಳುತ್ತಿದ್ದರೂ ಮಮತಾ ಅಲ್ಲೇ ಹೋಗಿ ನೀರಿನಲ್ಲಿ ಧುಮುಕಿದ್ದಾರೆ.

ಒಮ್ಮೆಯೂ ಒಡೆಯದೆ 100 ವರ್ಷ ನೆಲೆ ನಿಂತ ಏಕೈಕ ಭಾರತೀಯ ಸಂಘಟನೆ RSS, ಕಾರಣ..?

ಇದಕ್ಕೆ ಕಾರಣ ಮೋದಿ ಮತ್ತು ಶಾ, ಅಂದರೆ ಹೊರಗಿನವರು, ತನ್ನ ಪಕ್ಕಾ ಶಿಷ್ಯ ಸುವೇಂದುವನ್ನು ಸೆಳೆದುಕೊಂಡು ಸಾಮ, ದಾನ, ದಂಡ, ಭೇದದಿಂದ ತನ್ನನ್ನು ಅಂದರೆ ಬಂಗಾಳದ ಪುತ್ರಿಯನ್ನು ಕೆಡವಲು ತಂತ್ರ ರೂಪಿಸುತ್ತಿದ್ದಾರೆ ಎಂದು 294 ಕ್ಷೇತ್ರಗಳಲ್ಲಿ ಅನುಕಂಪ ಗಳಿಸಲು ಪ್ರಯತ್ನಿಸುವುದು. ಒಂದು ರೀತಿಯಲ್ಲಿ 2015ರಲ್ಲಿ ಲಾಲು ಮಾಡಿದಂತೆ ಬಿಹಾರಿ ವರ್ಸಸ್‌ ಬಾಹರಿಯ ಪ್ರಯತ್ನ. ಮೋದಿ ಜೊತೆಗಿನ ಮತದಾರರ ಗ್ರಹಿಕೆಯ ಆಟದಲ್ಲಿ ತಾನು ಬಹಳ ಹಿಂದಿದ್ದೇನೆ ಎಂದು ಮಮತಾಗೆ ಗೊತ್ತಿದೆ. ಇದಕ್ಕಾಗಿಯೇ ನಂದಿಗ್ರಾಮದಲ್ಲಿ ನೀರಿಗೆ ಧುಮುಕಿದ್ದಾರೆ. ಗೆದ್ದರೆ ರಾಜ್ಯ ಪ್ರಾಪ್ತಿ, ಸೋತರೆ ವೀರ ರಾಜಕೀಯ ಪತನ.

ದಲಿತ-ಮುಸ್ಲಿಂ ರಾಜಕೀಯ

ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್‌ಗಳಂಥ ರಾಜ್ಯಗಳಲ್ಲಿ ಪ್ರಭಾವಿ ಜಮೀನುದಾರ, ಹಣವಂತ, ಮೇಲ್ಜಾತಿ ಸಮುದಾಯಗಳು ಮುಸ್ಲಿಂ ತುಷ್ಟೀಕರಣದ ವಿರುದ್ಧ ಮತ ಹಾಕುವ ಟ್ರೆಂಡ್‌ ನೋಡಿದ್ದೇವೆ. ಆದರೆ ಬಂಗಾಳದಲ್ಲಿ ಮಾತ್ರ ದಲಿತರು ಮತ್ತು ಮುಸ್ಲಿಮರ ಮಧ್ಯೆ ನೇರ ಸ್ಪರ್ಧೆಯಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 70 ಪ್ರತಿಶತ ಮುಸ್ಲಿಮರು ಮಮತಾ ದೀದಿಗೆ ವೋಟು ಹಾಕಿದ್ದರೆ, 60 ಪ್ರತಿಶತ ದಲಿತರು ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದ್ದರು.

ಈಗಲೂ ಬಂಗಾಳದಲ್ಲಿ ಆ ದಲಿತ ಮತ್ತು ಮುಸ್ಲಿಮರ ನಡುವೆ ಸ್ಪರ್ಧಾತ್ಮಕ ರಾಜಕಾರಣ ಕಾಣುತ್ತಿದೆ. ಮುಖ್ಯವಾಗಿ ನಾಮಶೂದ್ರರು ಮತ್ತು ರಾಜಬಂಶಿ ಸಮುದಾಯಗಳು ಬಾಂಗ್ಲಾ ಗಡಿಯಲ್ಲಿದ್ದು, ತಮ್ಮ ಅನುದಾನ ಸೌಕರ್ಯ ಸೌಲಭ್ಯಗಳಲ್ಲಿ ಪಾಲು ಕೇಳುವ ಬಾಂಗ್ಲಾ ನಿರಾಶ್ರಿತ ಮುಸ್ಲಿಂ ಸಮುದಾಯಗಳ ವಿರುದ್ಧ ಎನ್ನುವ ಕಾರಣಕ್ಕೆ ಬಿಜೆಪಿ ಜೊತೆ ಕಾಣಿಸಿಕೊಂಡಿವೆ.

ಎಡ ಪಕ್ಷಗಳು ಅಧಿಕಾರದಲ್ಲಿದ್ದಾಗ ದಲಿತರು, ಮುಸ್ಲಿಮರು ಇಬ್ಬರನ್ನೂ ಜೊತೆಯಲ್ಲಿ ಇಟ್ಟುಕೊಂಡಿದ್ದ ಮಮತಾ ನಿಧಾನವಾಗಿ ವೋಟ್‌ ಬ್ಯಾಂಕ್‌ಗಾಗಿ ಮುಸ್ಲಿಂ ಓಲೈಕೆಯಲ್ಲಿ ಅತಿಯಾಗಿ ತೊಡಗಿದ್ದರಿಂದ ದಲಿತರು ಬಿಜೆಪಿಯತ್ತ ವಾಲಿದ್ದಾರೆ. ಮೋದಿಯನ್ನು ಸೋಲಿಸಬೇಕಾದರೆ ದಲಿತರು, ಮುಸ್ಲಿಮರು ಒಟ್ಟಿಗೇ ಬರಬೇಕು ಎಂಬ ಮಾತು ಆಗಾಗ ಚರ್ಚೆ ಆಗುತ್ತಿರುತ್ತದೆ. ಆದರೆ ಬಂಗಾಳದಲ್ಲಂತೂ ಆ ಥಿಯರಿಯ ವಿರುದ್ಧದ ವಾತಾವರಣವಿದೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮೇ ನಲ್ಲಿ ಒಡೆಯುತ್ತಾ ರಾಷ್ಟ್ರೀಯ ಕಾಂಗ್ರೆಸ್.?

ದೀದಿ-ದಾದಾ ಲೆಕ್ಕಾಚಾರಗಳು

2016ರ ಚುನಾವಣೆವರೆಗೆ ಭಾರೀ ಜನಪ್ರಿಯತೆ ಹೊಂದಿದ್ದ ಮಮತಾ ಮತ್ತು ಟಿಎಂಸಿ ತಮ್ಮ ಇಮೇಜ್‌ ಕಳೆದುಕೊಂಡಿದ್ದು 2018ರ ಪಂಚಾಯತ್‌ ಚುನಾವಣೆಯಲ್ಲಿ ನಡೆಸಿದ ಗೂಂಡಾಗಿರಿಯಿಂದ. ಪಕ್ಷದ 34 ಪ್ರತಿಶತ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಏನೆಲ್ಲಾ ದಾಂಧಲೆ ಮಾಡಬೇಕೋ ಅದನ್ನು ಮಾಡಿದ ದೀದಿಯ ಸೇನಾಪತಿಗಳ ವಿರುದ್ಧ ಹಿಂದುಳಿದ ಮತ್ತು ದಲಿತ ಸಮುದಾಯಗಳ ಆಕ್ರೋಶ ಮಡುಗಟ್ಟತೊಡಗಿತ್ತು. ಇದು ಏಕ್‌ದಂ ಲಾಭ ತಂದಿದ್ದು 2019ರಲ್ಲಿ ಮೋದಿ ಹೆಸರು ಹೇಳಿ ಬಂದ ಬಿಜೆಪಿಗೆ.

ತೃಣಮೂಲದವರ ಲೆಕ್ಕಾಚಾರದ ಪ್ರಕಾರ ಆ ಸಾಮಾನ್ಯ ಜನರ ಆಕ್ರೋಶ, ಸಿಟ್ಟು ಒಮ್ಮೆ 2019ರಲ್ಲಿ ತೋರಿಸಿ ಆಗಿದೆ. ಈಗ ತೋರಿಸಲಿಕ್ಕಿಲ್ಲ ಮತ್ತು ಲೋಕಸಭೆ ಬೇರೆ, ವಿಧಾನಸಭೆ ಬೇರೆ ಎಂದು. ಅಲ್ಲಿ ಮೋದಿ ಪ್ರಧಾನಿ ಆಗಬೇಕಿತ್ತು, ಈಗೇನೂ ಹಾಗೆ ಆಗೋದಿಲ್ಲ ಎಂದು. ಆದರೆ ತಳಮಟ್ಟದಲ್ಲಿ ಬಿಜೆಪಿಯ ಸಂಘಟನೆ ಗಟ್ಟಿಇರದೇ ಇದ್ದರೂ ರೈತಾಪಿಗಳು, ಹಿಂದುಳಿದ ದಲಿತ ಸಮುದಾಯಗಳಲ್ಲಿ ಮಮತಾ ಸಾಕು, ಮೋದಿಗೆ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಮಾತು ಮುಕ್ತವಾಗಿ ಕೇಳಿಬರುತ್ತಿದೆ.

ಲೋಕಲ್‌ ಪತ್ರಕರ್ತರು ಹೇಳುವ ಪ್ರಕಾರ, ಮಮತಾಗಿಂತ ಹೆಚ್ಚಾಗಿ ಮಮತಾ ಹೆಸರಲ್ಲಿ ನಡೆಯುವ ಸಿಂಡಿಕೇಟ್‌ ಮಾಫಿಯಾಗಳ ಬಗ್ಗೆ ಭಾರೀ ಜನಾಕ್ರೋಶವಿದೆ. ಮಮತಾ ಪರವಾಗಿ ಮುಸ್ಲಿಂ ಧ್ರುವೀಕರಣ ನೋಡಲು ಸಿಗುತ್ತಿದ್ದು, ಇದಕ್ಕೆ ಪ್ರತಿಯಾಗಿ ಬಾಂಗ್ಲಾ ಗಡಿಯಲ್ಲಿ ಆದಂತೆ ಕೋಲ್ಕತಾ ಅಕ್ಕ-ಪಕ್ಕದಲ್ಲೂ ಹಿಂದೂ ಧ್ರುವೀಕರಣ ಆದರೆ ಬಿಜೆಪಿಯನ್ನು ತಡೆಯುವುದು ಕಷ್ಟ.

ದೀದಿ ಮಾಡಿದ ತಪ್ಪೇನು?

ನೀವು ಎಷ್ಟೇ ಎಡ-ಬಲ, ಹಿಂದುತ್ವವಾದಿ, ಜಾತ್ಯತೀತ ಸಿದ್ಧಾಂತಗಳನ್ನು ಹೇಳುತ್ತಾ ಹೋದರೂ ಕಣ್ಣಿಗೆ ಕಾಣುವ ಯಾವುದೇ ಅಭಿವೃದ್ಧಿ ಮಾಡದೆ ಬರೀ ಮಾತಿನಿಂದ ಮುಕ್ತ ಮಾರುಕಟ್ಟೆಯ ಮುಕ್ತ ತಂತ್ರಜ್ಞಾನದ ದಿನಗಳಲ್ಲಿ ಸುದೀರ್ಘ ಅವಧಿಗೆ ಅಧಿಕಾರ ಹಿಡಿದಿಡುವುದು ಕಷ್ಟ. 1977ರಿಂದ 2011ರ ವರೆಗೆ 34 ವರ್ಷ ಎಡ ಪಕ್ಷಗಳು ಅಧಿಕಾರ ಹಿಡಿದದ್ದು ಅಭಿವೃದ್ಧಿಯಿಂದಲ್ಲ, ಸಂಘಟನೆ ಮತ್ತು ಕಾರ್ಯಕರ್ತರನ್ನು ಉಪಯೋಗಿಸಿ ಸ್ಥಳೀಯ ಅಧಿಕಾರವನ್ನು ನಾಲ್ಕು ಕಡೆಯಿಂದ ಗಟ್ಟಿಯಾಗಿ ಹಿಡಿದಿದ್ದರಿಂದ. ಉದಾಹರಣೆಗೆ ಹೇಳಬೇಕೆಂದರೆ; ಶಾಲಾ ಆಡಳಿತ ಮಂಡಳಿಯಲ್ಲಿ ತಮ್ಮ ಪಕ್ಷದವರು ಇರಬೇಕು ಎಂದಾದರೆ ಸರಿ ಅರ್ಥ ಮಾಡಿಕೊಳ್ಳಬಹುದು. ಆದರೆ ನೇಮಕವಾಗುವ ಶಿಕ್ಷಕರು, ಅಧಿಕಾರಿಗಳು, ಕೊನೆಗೆ ಚಪರಾಸಿಗಳು ಕೂಡ ಪಕ್ಷದ ಕಾರ್ಯಕರ್ತರೇ ಇರಬೇಕು ಎಂದರೆ ಹೇಗೆ? ಮಮತಾ ಕೂಡ ಹೀಗೆಯೇ ಪೂರ್ತಿ ಆಡಳಿತವನ್ನು ಕಪಿಮುಷ್ಟಿಯಲ್ಲಿ ತೆಗೆದುಕೊಳ್ಳಲು ಹೋಗಿಯೇ ಬಿಜೆಪಿಯನ್ನು ಒಳಕ್ಕೆ ಬಿಟ್ಟುಕೊಂಡಿರುವುದು.

ಮಮತಾ 10 ವರ್ಷದಲ್ಲಿ ಒಂದು ಕಾರ್ಖಾನೆ ತರಲಿಲ್ಲ, ಉದ್ಯೋಗ ಸೃಷ್ಟಿಮಾಡಲಿಲ್ಲ. ಹೋಗಲಿ ಜನರನ್ನು ಸಿಂಡಿಕೇಟ್‌ ಮಾಫಿಯಾಗಳಿಂದ ಕೂಡ ರಕ್ಷಿಸಲಿಲ್ಲ. ಆಗಿರುವ ಪರಿವರ್ತನೆ ಅಂದರೆ ಎಡ ಪಕ್ಷಗಳ ಸಿಂಡಿಕೇಟ್‌ಗಳು ಬೋರ್ಡ್‌ ಬದಲಾಯಿಸಿ ತೃಣಮೂಲ ಕಾಂಗ್ರೆಸ್‌ ಬೋರ್ಡ್‌ ಹಾಕಿಕೊಂಡವು ಅಷ್ಟೆ. 1911ರ ಮೊದಲು ಬ್ರಿಟಿಷರ ರಾಜಧಾನಿ ಆಗಿತ್ತು ಎನ್ನುವ ಕಾರಣಕ್ಕೆ ಕೋಲ್ಕತಾ ಎಂಬ ನಗರ ಮತ್ತು ಗಡಿ ಭಾಗದಲ್ಲಿ ಸೇನೆ ಬೇಸ್‌ ಇದೆ ಎನ್ನುವ ಕಾರಣಕ್ಕೆ ಸಿಲಿಗುರಿ ಎಂಬ ಎರಡು ನಗರಗಳನ್ನು ಬಿಟ್ಟರೆ ಪಶ್ಚಿಮ ಬಂಗಾಳದಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳೇ ಇಲ್ಲ. ಪಂಜಾಬ್‌, ಮಹಾರಾಷ್ಟ್ರದಂತೆ ಕೃಷಿ ಕ್ಷೇತ್ರ ಕೂಡ ಆಕರ್ಷಕ ಅಲ್ಲ.

ಉದ್ಯೋಗದ ಅವಕಾಶ ಇಲ್ಲದೇ ಇರುವ ಕಾರಣಕ್ಕೆ ಬಂಗಾಳಿ ಹುಡುಗರು ಬೆಂಗಳೂರು, ಅಷ್ಟೇಕೆ ಯಲ್ಲಾಪುರ, ಸಕಲೇಶಪುರದಂಥ ಸಣ್ಣ ಸಣ್ಣ ಊರಿಗೆ ಬಂದು ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದಾರೆ. ವೋಟ್‌ಬ್ಯಾಂಕ್‌ ರಾಜಕಾರಣದ ಕೆಟ್ಟಪರಿಣಾಮ ಚಿಕ್ಕ ಚಿಕ್ಕ ಹಳ್ಳಿಗಳು ಬಾಂಗ್ಲಾ ಮುಸ್ಲಿಂ ವಲಸಿಗ ಕುಟುಂಬಗಳಿಂದ ತುಂಬಿಹೋಗಿವೆ. ವಲಸಿಗರ ಬಗ್ಗೆ ತೋರಿಸುವ ಕಾಳಜಿಯನ್ನು ಸ್ಥಳೀಯ ಬಂಗಾಳಿ ಯುವಕರ ಬಗ್ಗೆ ಕೂಡ ಸಮನಾಗಿ ತೋರಿಸಿದ್ದರೆ ಬಂಗಾಳದಲ್ಲಿ ಮೋದಿ ಪ್ರವೇಶದ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.

ಬಂಗಾಳದಲ್ಲಿ 5 ವರ್ಷದ ಹಿಂದೆ ಬರೀ 3 ಸೀಟು ಗೆದ್ದಿದ್ದ 'ಕಮಲ' ಈಗ ಅರಳುತ್ತಿರುವುದು ಹೇಗೆ?

ಬದ್ರುದ್ದೀನ್‌ ಯಾರು?

ಇದೇ ಪ್ರಶ್ನೆಯನ್ನು ಸರಿಯಾಗಿ ಹತ್ತು ವರ್ಷದ ಹಿಂದೆ ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಕೇಳುತ್ತಿದ್ದರು. ಅದರ ಅರ್ಥ ತರುಣ್‌ ಗೊಗೋಯ್‌ ಅವರಿಗೆ ಬಾಂಗ್ಲಾದೇಶಿ ಮುಸ್ಲಿಮರ ನಾಯಕ ಬದ್ರುದ್ದೀನ್‌ ಅಜ್ಮಲ್‌ ಪರಿಚಯ ಇರಲಿಲ್ಲ ಅಂತಲ್ಲ. ಆದರೆ ತನಗೆ ಮಾವಿನ ಹಣ್ಣು, ಅತ್ತರ್‌ ಡಬ್ಬಿಗಳು, ಬೆಚ್ಚಗಿನ ಚಾದರಗಳನ್ನು ತಂದುಕೊಡುತ್ತಿದ್ದ ಮುಂಬೈನ ಉದ್ಯಮಿ ಈಗ ತನಗೇ ಸಡ್ಡು ಹೊಡೆಯುತ್ತಾನೆ ಎಂಬ ಸಿಟ್ಟು ಅವರಲ್ಲಿತ್ತು. ಆಗ ಅಹ್ಮದ್‌ ಪಟೇಲ್, ಗುಲಾಂ ನಬಿ ಎಷ್ಟೇ ಅಜ್ಮf ಜೊತೆ ಮೈತ್ರಿ ಮಾಡಿಕೊಳ್ಳೋಣ ಅಂದರೂ ಗೊಗೋಯ್‌ ಕೇಳಿರಲಿಲ್ಲ.

ಒಮ್ಮೆಯಂತೂ ಗೊಯೋಯ್‌ ಮೈತ್ರಿಯ ಕಾಗದವನ್ನು ಸೋನಿಯಾ ಎದುರೇ ಹರಿದುಹಾಕಿದ್ದರು. ಆದರೆ ಈಗ ಗೊಗೋಯ್‌ ನಿಧನದ ನಂತರ ಅಸ್ಸಾಂನಲ್ಲಿ ಬದ್ರುದ್ದೀನ್‌ ಅಜ್ಮಲ್ ಜೊತೆ ಕಾಂಗ್ರೆಸ್‌ ಪಕ್ಷ ಮೈತ್ರಿ ಮಾಡಿಕೊಂಡಿದೆ. ಕೇರಳದಲ್ಲಿ ಮುಸ್ಲಿಂ ಲೀಗ್‌, ಬಂಗಾಳದಲ್ಲಿ ಅಬ್ಬಾಸ್‌ ಸಿದ್ಧಿಕಿ, ಅಸ್ಸಾಂನಲ್ಲಿ ಬದ್ರುದ್ದೀನ್‌ ಅಜ್ಮಲ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಮುಂದೊಂದು ದಿನ ಈಗ ಬೈಯುವ ಅಸಾದುದ್ದೀನ್‌ ಓವೈಸಿ ಜೊತೆ ಕೂಡ ಮೈತ್ರಿ ಮಾಡಿಕೊಂಡರೂ ಆಶ್ಚರ್ಯವಿಲ್ಲ.

ಪವಾರ್‌ ಮತ್ತು ಪವರ್‌

ದೇವೇಗೌಡರು ಹಾಗೂ ಶರದ್‌ ಪವಾರ್‌ ಅವರ ದೀರ್ಘ ರಾಜಕೀಯಕ್ಕೆ ಬಹಳ ಸಾಮ್ಯತೆಯಿದೆ. ಆದರೆ ಗೌಡರು ದಾಳ ಉರುಳಿಸಿದಾಗ ಅಧಿಕಾರ ಕಳೆದುಕೊಂಡಿದ್ದು ಜಾಸ್ತಿ. ಪವಾರ್‌ ದಾಳ ಮತ್ತು ಗಾಳ ಹಾಕಿ ಅಧಿಕಾರ ಹಿಡಿದದ್ದೇ ಜಾಸ್ತಿ. 99ರಲ್ಲಿ ಶರದ್‌ ಪವಾರ್‌ ಅವರು ಸೋನಿಯಾ ಗಾಂಧಿ ವಿರುದ್ಧ ಮುನಿಸಿಕೊಂಡು ನಾಗರಿಕ ಪ್ರಶ್ನೆ ಎತ್ತಿ ಸ್ವತಂತ್ರವಾಗಿ ಸ್ಪರ್ಧಿಸಿದರು. ವಾಜಪೇಯಿ ಮತ್ತು ಬಾಳಾಠಾಕ್ರೆಯವರು ಪವಾರ್‌ ನಮ್ಮ ಜೊತೆ ಬರುತ್ತಾರೆ ಎಂದು ಕಾದುಕೊಂಡಿದ್ದರು.

ಆದರೆ, ಶರದ್‌ ಪವಾರ್‌ ಮತ್ತೆ ಸೋನಿಯಾ ಮನೆಗೆ ಹೋಗಿ ಮೈತ್ರಿ ಮಾಡಿಕೊಂಡು ಬಂದು 15 ವರ್ಷ ಅಧಿಕಾರ ನಡೆಸಿದರು. 2019ರಲ್ಲಿ ಕೂಡ ಬಿಜೆಪಿ ಕಾದುಕೊಂಡಿತ್ತು. ಪವಾರ್‌ ಶಿವಸೇನೆಗೆ ಗಾಳ ಹಾಕಿ ಅಧಿಕಾರ ಹಿಡಿದರು. ಈಗ ತಮ್ಮ ಪಕ್ಷದ ಗೃಹಮಂತ್ರಿ ಅನಿಲ್‌ ದೇಶಮುಖ್‌ ಮೇಲೆ ಪೊಲೀಸ್‌ ಆಯುಕ್ತರೇ 100 ಕೋಟಿ ಲಂಚದ ಆರೋಪ ಹೊರಿಸಿರುವಾಗ ಪವಾರ್‌ ಸಾಹೇಬರು ಬೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಏನೇ ಆಗಲಿ ಪವಾರ್‌ ಕೈಯಿಂದ ಪವರ್‌ ಕಸಿದುಕೊಳ್ಳೋದು ಬಿಜೆಪಿಗೆ ಕಷ್ಟದ ವಿಷಯ ಬಿಡಿ. ಅದಕ್ಕಾಗಿ ಬಿಜೆಪಿ ಒಂದೋ 356ನೇ ವಿಧಿ ಪ್ರಯೋಗಿಸಿ ರಾಷ್ಟ್ರಪತಿ ಶಾಸನ ತರಬೇಕು, ಇಲ್ಲವೇ ಪವಾರ್‌ ಜೊತೆಯೇ ಮೈತ್ರಿ ಮಾಡಿಕೊಳ್ಳಬೇಕು ಅಷ್ಟೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios