2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಮಣಿಸಲು ವಿಪಕ್ಷಗಳು ಒಗ್ಗಟ್ಟಾಗಿದೆ. ಈಗಾಗಲೇ ಸಭೆ ನಡೆಸಿ ರಣತಂತ್ರ ರೂಪಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಕೂಟ ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಇತ್ತ ವಿಪಕ್ಷಗಳ ಮೈತ್ರಿ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು? ಈ ಕುರಿತ ಪ್ರಶ್ನೆಗೆ ಅಖಿಲೇಶ್ ಯಾದವ್ ಹೇಳಿದ್ದೇನು? 

ಲಖನೌ(ಜು.10) ಮುಂಬರುವ ಲೋಕಸಭಾ ಚುನಾವಣೆಗೆ ಭಾರಿ ಕಸರತ್ತುಗಳು ನಡೆಯುತ್ತಿದೆ. ಎನ್‌ಡಿಎ ಮತ್ತೆ ನರೇಂದ್ರ ಮೋದಿ ನಾಯಕತ್ವದಡಿ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತ ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ಮಣಿಸಲು ಸಜ್ಜಾಗಿದೆ. ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿದೆ. ಬಿಜೆಪಿ ಸೋಲಿಸಲು ರಣತಂತ್ರ ಕುರಿತು ಚರ್ಚೆ ನಡೆಸಿದೆ. ಕಾಂಗ್ರೆಸ್, ಆರ್‌ಜೆಡಿ, ಜೆಡಿಯು, ಆಮ್ ಆದ್ಮಿ, ಟಿಎಂಸಿ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದಂತೆ 16ಕ್ಕೂ ಹೆಚ್ಚು ಪಕ್ಷಗಳು ಒಂದಾಗಿ ಹೋರಾಡಲು ಸಜ್ಜಾಗಿದೆ. ಆದರೆ ವಿಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು? ಈ ಕುರಿತು ಕೇಳಿದ್ದ ಪ್ರಶ್ನೆಗೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರಿಸಿದ್ದಾರೆ. ವಿಪಕ್ಷಗಳ ಮೈತ್ರಿಯಲ್ಲಿ ಹಲವು ಪ್ರಧಾನಿ ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿ ನಿರ್ಧರಿಸಲು ಇನ್ನೂ ಸಮಯವಿದೆ ಎಂದಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅಭ್ಯರ್ಥಿ ಅನ್ನೋ ಕಾಂಗ್ರೆಸ್ ಹೋರಾಟಕ್ಕೆ ತೀವ್ರ ಹಿನ್ನಡೆಯಾಗುವ ಉತ್ತರ ನೀಡಿದ್ದಾರೆ.

ವಿಪಕ್ಷಗಳ ಮೈತ್ರಿ ಒಕ್ಕೂಟಕ್ಕೆ ಮುನ್ನುಡಿ ಹಾಡಿ ಪಾಟ್ನಾದಲ್ಲಿ ಮೊದಲ ಸಭೆ ನಡೆಸುವಲ್ಲಿ ಯಶಸ್ವಿಯಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದೆ. ಇತ್ತ ಆಮ್ ಆದ್ಮಿ ಪಾರ್ಟಿ ಹಾಗೂ ಟಿಎಂಸಿ ಕೂಡ ಪ್ರಧಾನಿ ಅಭ್ಯರ್ಥಿ ಪಟ್ಟದ ಮೇಲೆ ಕಣ್ಣಿಟ್ಟಿದೆ. ಇದೀಗ ಅಖಿಲೇಶ್ ಯಾದವ್ ನಡೆಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಕಾರಣ ರಾಹುಲ್ ಗಾಂಧಿಯನ್ನು ವಿಪಕ್ಷಗಳು ಪ್ರಧಾನಿ ಅಭ್ಯರ್ಥಿ ಅನ್ನೋದನ್ನು ಒಪ್ಪಿಕೊಂಡಿಲ್ಲ. 

ಬೆಂಗಳೂರು ಸಭೆಗೂ ಮುನ್ನ ವಿಪಕ್ಷ ಮೈತ್ರಿ ಛಿದ್ರ? ಪವಾರ್ ಬೆನ್ನಲ್ಲೇ ಬೆಜಿಪಿಯತ್ತ ಆರ್‌ಎಲ್‌ಡಿ ಪಕ್ಷ!

ಬಿಹಾರದಲ್ಲಿ ಯಶಸ್ವಿಯಾಗಿ ಸಭೆ ಆಯೋಜಿಸಿದ್ದ ವಿಪಕ್ಷ ಕೂಟ, 2ನೇ ಸಭೆಯಲ್ಲಿ ಹಿಮಾಚಲದಲ್ಲಿ ನಡೆಸಲು ತೀರ್ಮಾನಿಸಿತ್ತು. ಆದರೆ ವಿಪಕ್ಷಗಳ ನಡುವಿನ ಒಡಕು ಸೇರಿದಂತೆ ಹಲವು ಕಾರಣಗಳಿಂದ ಈ ಸಭೆ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಬೆಂಗಳೂರಿನ ಸಭೆಯನ್ನು ಮುಂದೂಡಲಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬೃಹತ್‌ ಮೈತ್ರಿಕೂಟ ರಚನೆಯ ಕಸರತ್ತು ನಡೆಸುತ್ತಿರುವ ವಿಪಕ್ಷಗಳು, ತಮ್ಮ ಮುಂದಿನ ಸಭೆಯನ್ನು ಜು.17-18ರಂದು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ.

ಈ ಮೊದಲು ಸಭೆಯನ್ನು ಜು.13, 14ರಂದು ನಡೆಸಲು ನಿರ್ಧರಿಸಲಾಗಿತ್ತಾದಾರೂ, ಕರ್ನಾಟಕದಲ್ಲಿ ವಿಧಾನಮಂಡಲ ಅಧಿವೇಶನ ನಡೆದಿರುವ ಕಾರಣ ಅದನ್ನು ಮುಂದೂಡಲಾಗಿದೆ. 13, 14ರಂದು ಸಭೆ ಏರ್ಪಾಟಾದರೆ ಅದರಲ್ಲಿ ಅಧಿವೇಶನದ ಕಾರಣ ಭಾಗವಹಿಸಲು ಕರ್ನಾಟಕ ಕಾಂಗ್ರೆಸ್‌ ನಾಯಕರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಹೀಗಾಗಿ ಮುಂದೂಡಿಕೆಗೆ ನಿರ್ಧರಿಸಲಾಗಿದೆ.

ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ

ಜೂ.23ರಂದು ಪಟನಾದಲ್ಲಿ ನಡೆದಿದ್ದ ಸಭೆಗೆ 23 ಪಕ್ಷಗಳು ಭಾಗಿಯಾಗಿದ್ದವು. ಆದರೆ ದೆಹಲಿ ಆಡಳಿತ ಮೇಲಿನ ತನ್ನ ಹಿಡಿತ ಹೆಚ್ಚಿಸಿಕೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ಸುಗೀವಾಜ್ಞೆಯನ್ನು ಕಾಂಗ್ರೆಸ್‌ ಬೆಂಬಲಿಸದೇ ಹೋದಲ್ಲಿ ತಾನು ಮುಂದಿನ ಸಭೆಗೆ ಗೈರಾಗುವುದಾಗಿ ಆಮ್‌ಆದ್ಮಿ ಪಕ್ಷ ಈಗಾಗಲೇ ಎಚ್ಚರಿಸಿದೆ.