Ramanagara: ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್
ನಾನು ತಾಲೂಕಿನ ಅಭಿವೃದ್ಧಿಗಾಗಿ ಎಷ್ಟೇ ಕೆಲಸ ಮಾಡಿದರೂ ಜನ ಎರಡು ಬಾರಿ ಏಕೆ ಸೋಲಿಸಿದರು ಎಂಬುದು ನನಗರ್ಥವಾಗುತ್ತಿಲ್ಲ. ಆದರೆ ನಾನು ಮಾತ್ರ ಗೆದ್ದರೂ, ಸೋತರು, ಸತ್ತರೂ ಇಲ್ಲೇ ಇರುತ್ತೇನೆ. ಇದು ನನ್ನ ಕರ್ಮಭೂಮಿ, ಈ ಭೂಮಿ ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣ (ಮೇ.18): ನಾನು ತಾಲೂಕಿನ ಅಭಿವೃದ್ಧಿಗಾಗಿ ಎಷ್ಟೇ ಕೆಲಸ ಮಾಡಿದರೂ ಜನ ಎರಡು ಬಾರಿ ಏಕೆ ಸೋಲಿಸಿದರು ಎಂಬುದು ನನಗರ್ಥವಾಗುತ್ತಿಲ್ಲ. ಆದರೆ ನಾನು ಮಾತ್ರ ಗೆದ್ದರೂ, ಸೋತರು, ಸತ್ತರೂ ಇಲ್ಲೇ ಇರುತ್ತೇನೆ. ಇದು ನನ್ನ ಕರ್ಮಭೂಮಿ, ಈ ಭೂಮಿ ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಮುಖಂಡರು ಹಾಗೂ ಕಾರ್ಯಕರ್ತರು ಸಾಕಷ್ಟುಬೆವರು ಸುರಿಸಿ ಕೆಲಸ ಮಾಡಿದ್ದಾರೆ. ಆದರೂ ಜನ ನನ್ನ ಕೈಹಿಡಿಯಲಿಲ್ಲ ಎಂದು ಬೇಸರು ವ್ಯಕ್ತಪಡಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನಾನು ಸೋತರು 80 ಸಾವಿರದಷ್ಟುಮತಗಳು ನನಗೆ ಲಭಿಸಿವೆ. ಇದು ನನ್ನ ರಾಜಕೀಯ ಜೀವನದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಾನು ಪಡೆದ ಅತಿಹೆಚ್ಚು ಮತ. ಮೊದಲ ಚುನಾವಣೆಯಲ್ಲಿ 50 ಸಾವಿರ ಚಿಲ್ಲರೆ ಮತಗಳನ್ನು ಪಡೆದಿದ್ದೆ, ಈ ಚುನಾವಣೆಯಲ್ಲಿ 80 ಸಾವಿರದಷ್ಟು ಮತಗಳನ್ನು ಪಡೆದರೂ ನನಗೆ ಸೋಲಾಗಿದೆ ಎಂದು ವಿಷಾದಿಸಿದರು.
'ಪ್ಲಾಟಿನಂ ರೇಟಿಂಗ್' ಗರಿ ಮುಡಿಗೇರಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2!
ಬಿಜೆಪಿ ಇನ್ನಷ್ಟು ಬಲಿಷ್ಠವಾಗಬೇಕು: ಬಿಜೆಪಿಯಲ್ಲಿ ಇದು ನನ್ನ ನಾಲ್ಕನೇ ಸೋಲು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಇನ್ನಷ್ಟುಬಲಿಷ್ಠವಾಗಬೇಕಿದೆ. ನನ್ನ ಸೋಲಿನ ನಂತರ ಹಲವಾರು ಚರ್ಚೆಗಳು ನಡೆಯುತ್ತಿವೆ. ಪ್ರತಿ ದಿನ ನನ್ನ ಕೆಲವರು ಬಂದು ಭೇಟಿಯಾಗುತ್ತಿದ್ದಾರೆ. ಕೆಲವರು ನಾನು ಕಾಂಗ್ರೆಸ್‌ಗೆ ಹೋಗಿದ್ದರೆ ನಿರಾಯಾಸವಾಗಿ ಗೆಲ್ಲುತ್ತಿದ್ದೆ ಎನ್ನುತ್ತಾರೆ. ನಿಮಗಾಗಿ ಕಾಂಗ್ರೆಸ್‌ನವರು ಕಡೆಯವರೆಗೆ ಕಾದಿದ್ದರು. ನೀವು ಕಾಂಗ್ರೆಸ್‌ಗೆ ಹೋಗಬೇಕಿತ್ತು ಎಂದರು.
ಇನ್ನು ಕೆಲವರು ನೀವು ಪಕ್ಷೇತರರಾಗಿ ನಿಲ್ಲಬೇಕಿತ್ತು ಎಂದು ಹೇಳಿದರು. ಹೀಗೆ ನನ್ನ ಸೋಲಿನ ಕುರಿತು ವಿವಿಧ ರೀತಿಯ ವ್ಯಾಖ್ಯಾನಗಳು ಹರಿದುಬಂದವು. ಆದರೆ ಆಗಿದ್ದು, ಆಗಿ ಹೋಗಿದೆ, ಮುಂದಿನ ದಾರಿ ನೋಡಬೇಕಿದೆ ಎಂದರು. ನಾನು ಈ ಚುನಾವಣೆಯಲ್ಲಿ ಸೋತಿರಬಹುದು ಆದರೆ, ನನ್ನ ಮೇಲೆ ಗೆದ್ದವರು ಏನಾದರು? ಅವರಿಗೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ. ಇಲ್ಲಿಗೆ ಬಂದು ತಮ್ಮ ಹಿಂದಿನ ಕ್ಷೇತ್ರವನ್ನು ಕಳೆದುಕೊಂಡರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
19 ಸ್ಥಾನಕ್ಕೆ ಬಂದುಬಿಟ್ಟರು: ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತ ಒಬ್ಬರು, ಏನಣ್ಣ ಹಿಂಗಾಗಿ ಹೋಯಿತು ಅಂದ. ನಾನು ನಿಮಗೂ ಹಿಂಗಾಯಿತಲ್ಲಪ್ಪ ಅಂದೆ. ನಿಮ್ಮ ಸಹವಾಸಕ್ಕೆ ಬಂದ ಕುಮಾರಸ್ವಾಮಿ 19 ಸ್ಥಾನಕ್ಕೆ ಬಂದುಬಿಟ್ಟರಲ್ಲ ಅಣ್ಣ ಎಂದ. ಅವರಿಗೆ ಬೇರೆ ಕ್ಷೇತ್ರವಿತ್ತು, ಅವರಿಗೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ. ಇದು ಅವರ ಪಕ್ಷ ಯಾವ ಹಂತಕ್ಕೆ ಬಂದಿದೆ ನೋಡಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಾತಿ ಆಧಾರದಲ್ಲಿ ಮತ ಪಡೆದರು: ಮಾಜಿ ಪ್ರಧಾನಿ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಬಂದು ನನ್ನ ಮಗನಿಗೆ ಒಂದು ಅವಕಾಶ ಕೊಡಿ ಎಂದು ಕೇಳಿಕೊಂಡರು. ನನ್ನ ಮಗನನ್ನು ಸಿಎಂ ಆಗಿ ನೋಡುತ್ತೇನೆ ಎಂದು ಜನರನ್ನು ಕೇಳಿಕೊಂಡರು. ಕುಮಾರಸ್ವಾಮಿ ಸಹ ನಾನು ಸಿಎಂ ಅಗುತ್ತೇನೆ ಎಂದು ಭಾವನಾತ್ಮವಾಗಿ ಜನರನ್ನು ಕಟ್ಟಿಹಾಕಿದರು. ದೇವೇಗೌಡರ ಕುಟುಂಬದ ಮೇಲಿನ ಅಂದಾಭಿಮಾನದಿಂದ ಜನ ಅವರ ಬೆಂಬಲಕ್ಕೆ ನಿಂತರು. ಅತಂತ್ರ ಫಲಿತಾಂಶದ ನಿರೀಕ್ಷೆಯಲ್ಲಿ ಕುಮಾರಸ್ವಾಮಿ ಇದ್ದರು. ಆದರೆ ಹಾಗೆ ಆಗಲಿಲ್ಲ ಎಂದರು.
ಒಕ್ಕಲಿಗರು ಬೆಂಬಲಕ್ಕೆ ನಿಂತರೂ ಇಂದು ಅಧಿಕಾರಕ್ಕೆ ಬಂದಿಲ್ಲ. ಮುಂದೆಯೂ ಬರುವುದಿಲ್ಲ. ಸ್ತ್ರೀಶಕ್ತಿ ಸಾಲ ಸೇರಿದಂತೆ ನಮ್ಮ ಸಾಲ ಮನ್ನಾ ಆಗುತ್ತದೆ ಎಂದು ನಂಬಿ ಜನ ಮತ ನೀಡಿದರು. ನಾವು ಶ್ರಮಪಟ್ಟು ಮತ ಪಡೆದರೆ, ಅವರು ಜಾತಿ ಆಧಾರದಲ್ಲಿ ಮತ ಪಡೆದರು. ಗೆಲುವ ಸೋಲು ಸಹಜ, ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿ ಇರೋಣ. ಸೋಲೇ ಗೆಲುವಿನ ಮೆಟ್ಟಿಲು. ಭವಿಷ್ಯ ಇಲ್ಲ ಎಂದು ತಿಳಿಯುವುದು ಬೇಡ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಸಿಎಂ ಆಕ್ಷಾಂಕ್ಷಿಗಳು ನನ್ನ ಆತ್ಮೀಯರು: ಈ ಬಾರಿಯ ಚುನಾವಣೆಯಲ್ಲಿ ಭರಪೂರ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನೇನು ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ಸಿಗಲಿವೆ ಎಂದು ವ್ಯಂಗ್ಯವಾಡಿದ ಯೋಗೇಶ್ವರ್, ಕಾಂಗ್ರೆಸ್‌ನಲ್ಲಿ ಇಬ್ಬರು ಮುಖ್ಯಮಂತ್ರಿ ಆಕಾಂಕ್ಷಿಗಳು ನನಗೆ ಆತ್ಮೀಯರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ಯಾರೇ ಸಿಎಂ ಯಾರಾದರೂ ಜಿಲ್ಲೆಯ ಅಭಿವೃದ್ಧಿ ಆಗಲಿ ಎಂದು ಆಶಿಸುತ್ತೇನೆ. ನಾನು ಸೀನಿಯರ್ ಲೀಡರ್ ಆಗಿದ್ದೇನೆ. ಎಂಎಲ್‌ಸಿಯಾಗಿದ್ದೇನೆ. ಸರ್ಕಾರದಿಂದ ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇಂದು ಚನ್ನಪಟ್ಟಣ ನಗರ ಗಬ್ಬು ನಾರುತ್ತಿದೆ. ಕುಮಾರಸ್ವಾಮಿ ಈಗಲೂ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಗೊತ್ತು. ನೋವನ್ನು ಇಲ್ಲಿಗೆ ಮರೆತು, ಅಭಿವೃದ್ಧಿ ಕೆಲಸ ಮಾಡೋಣ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ, ಮುಂದಿನ ದಿನಗಳಲ್ಲಿ ಮತ್ತೆ ಹಳ್ಳಿಗಳ ಕಡೆ ಹೋಗಿ ಜನರನ್ನ ಭೇಟಿ ಆಗೋಣ. ಮುಂದೆ ತಾಪಂ, ಜಿಪಂ, ಲೋಕಸಭಾ ಚುನಾವಣೆ ಇದೆ ಅದರಲ್ಲಿ ಗೆಲ್ಲೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್‌ಗೆ ಹೆಚ್ಚು ಸೋಲು!
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೇರು ಗಟ್ಟಿಗೊಂಡಿದೆ. ಇದರಿಂದ ಜೆಡಿಎಸ್‌ಗೆ ಪೆಟ್ಟಾಗಿ ಕಾಂಗ್ರೆಸ್‌ಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಇದು ಬಿಜೆಪಿ ಬೆಳವಣಿಗೆಗೆ ಪೂರಕವಾಗಲಿದೆ. ನಮ್ಮ ಸರ್ಕಾರದಲ್ಲಿ ಐದಾರು ಸಚಿವ ಸ್ಥಾನ ಖಾಲಿ ಉಳಿಸಿಕೊಂಡಿದ್ದರು. ಅದರಲ್ಲಿ ಒಂದು ಸಚಿವ ಸ್ಥಾನ ನನಗೆ ನೀಡಿದ್ದಿದ್ದರೆ ನನಗೆ ಶಕ್ತಿ ಬಂದು ನಾನೇ ಈ ಭಾಗದಲ್ಲಿ ಬಿಜೆಪಿ ಸಂಘಟಿಸುತ್ತಿದ್ದೆ ಎಂದು ವರಿಷ್ಠರಿಗೆ ತಿಳಿಸಿದೆ. ಆದರೆ, ಈಗ ಆ ವಿಚಾರ ಅಪ್ರಸ್ತುತ.
-ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ