ನವದೆಹಲಿ (ಆ. 28): 1999 ರಲ್ಲಿ ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಬಗ್ಗೆ ಶರದ್‌ ಪವಾರ್‌ ಪ್ರಶ್ನೆಗಳನ್ನು ಕೇಳಿದ 21 ವರ್ಷಗಳ ಬಳಿಕ ಕುಟುಂಬದ ಅತ್ಯಂತ ನಂಬಿಕಸ್ಥ ಆಸ್ಥಾನಿಕರು ರಾಹುಲ್‌ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅವರು ಬರೆದ 5 ಪುಟಗಳ ಪತ್ರದಲ್ಲಿ ಅನೇಕ ವಿಷಯಗಳಿವೆ.

ಆದರೂ ಮುಖ್ಯವಾಗಿ ನರೇಂದ್ರ ಮೋದಿ ಎದುರು ರಾಹುಲ್‌ ಗಾಂಧಿ ನೇತೃತ್ವ ಸಾಕಾಗುತ್ತಿಲ್ಲ ಎಂಬುದೇ ಗುಲಾಂ ನಬಿ ಆಜಾದ್‌ ಮಿತ್ರ ಮಂಡಳಿ ಎತ್ತುತ್ತಿರುವ ಮೂಲ ಆತಂಕ. ಆದರೆ ಇದಕ್ಕೆ ಉತ್ತರ ಹುಡುಕುವ ಬದಲು ಸದ್ಯಕ್ಕೆ 6 ತಿಂಗಳು ರಾಹುಲ್‌ ಬೇಡ, ಸೋನಿಯಾ ಇರಲಿ ಎಂದು ತೀರ್ಮಾನಿಸಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಕೈತೊಳೆದುಕೊಂಡಿದೆ. ಆಂತರಿಕ ಪ್ರಜಾಪ್ರಭುತ್ವ ಮತ್ತು ಚುನಾವಣೆ ಎಂದೆಲ್ಲಾ ಮಾತನಾಡುತ್ತಿದ್ದ ರಾಹುಲ್‌ ಗಾಂಧಿ ‘ನಾನು ಮೋದಿಗೆ ಪ್ರಶ್ನೆ ಕೇಳುತ್ತೇನೆ. ಆದರೆ ನನಗೆ ಯಾರೂ ಪ್ರಶ್ನೆ ಕೇಳುವಂತಿಲ್ಲ. ಕೇಳಿದರೆ ನೀವೆಲ್ಲ ಬಿಜೆಪಿಯವರು’ ಎಂಬ ವಿಚಿತ್ರ ತರ್ಕ ಕೊಟ್ಟು ಸುಮ್ಮನಾಗಿಸಿದ್ದಾರೆ. ಈ ಮೂಲಕ ಹೊಸ ತಲೆಮಾರಿನ ಜೊತೆ ತಾಳಮೇಳ ಕೂಡಿಸುವ ಅವಕಾಶವನ್ನು ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬ ಕೆಳಗೆ ಚೆಲ್ಲಿದೆ.

ಆರ್ಥಿಕ ತಜ್ಞರಾದ ರಾಹುಲ್ ಗಾಂಧಿ ಕೇಂದ್ರಕ್ಕೆ ಕೊಟ್ಟ ಅದ್ಭುತ ಸಲಹೆ

ಪತ್ರ ಬರೆದವರ ಕತೆ ಅಯೋಮಯ?

6 ವರ್ಷಗಳಿಂದ ಬೆಳೆಯುತ್ತಲೇ ಇರುವ ಮೋದಿ ಮತ್ತು ಬಿಜೆಪಿಯನ್ನು ನಿಲ್ಲಿಸಬಲ್ಲ ಒಬ್ಬ ನಾಯಕ ಮತ್ತು ಒಂದು ಪಕ್ಷ ಬೇಕು ಎಂದು ಎಲ್ಲರಿಗೂ ಅನ್ನಿಸುತ್ತಿದೆ. ಹಾಗಿರುವಾಗ ತಮ್ಮ ರಾಜಕೀಯ ಜೀವನದ ಅಂತ್ಯ ನೋಡುತ್ತಿರುವ ಆಸ್ಥಾನಿಕರಿಗೂ ಈ ಚಿಂತೆ ಸ್ವಾಭಾವಿಕ. ಹೀಗಾಗಿ ಶಶಿ ತರೂರ್‌ ಮನೆಯಲ್ಲಿ ಊಟಕ್ಕೆ ಸೇರಿದ್ದ ಸಮಾನ ಮನಸ್ಕರು ಮೇಡಂ ಗಾಂಧಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ. ಪತ್ರದ ಕರಡನ್ನು ಬರೆಯಲು ವೀರಪ್ಪ ಮೊಯ್ಲಿ, ಶಶಿ ತರೂರ್‌, ಮುಕುಲ್ ವಾಸ್ನಿಕ್‌, ಮನೀಶ್‌ ತಿವಾರಿ ಅವರಿಗೆ ಹೇಳಲಾಗಿತ್ತು. ಚಿದಂಬರಂ, ಅಭಿಷೇಕ್‌ ಸಿಂಘ್ವಿ ಕೂಡ ಸಭೆಗೆ ಹೋಗಿದ್ದರಾದರೂ ಸಹಿ ಮಾಡಲು ಒಪ್ಪಿರಲಿಲ್ಲ.

ಪತ್ರದ ಗೌಪ್ಯತೆ ಕಾಯ್ದುಕೊಳ್ಳುವುದಾಗಿ ಸಹಿ ಹಾಕಿದವರಿಗೆ ಹೇಳಲಾಗಿತ್ತಾದರೂ ಕಾರ್ಯಕಾರಿ ಸಭೆಯ 48 ಗಂಟೆ ಮೊದಲು ಪತ್ರ ಮಾಧ್ಯಮಗಳ ಕೈಸೇರಿತು. ಗುಲಾಂ ನಬಿ ಬಣ ಹೇಳುವ ಪ್ರಕಾರ ರಾಹುಲ್‌ ಆಪ್ತರೇ ಯಾರೋ ಪತ್ರ ಲೀಕ್‌ ಮಾಡಿ 23 ನಾಯಕರು ಪಕ್ಷದಲ್ಲೇ ಬದಿಗೆ ಸರಿಯುವಂತೆ ಮಾಡಿದ್ದಾರೆ. ಗುಲಾಂ ನಬಿ, ಶಶಿ ತರೂರ್‌, ಮೊಯ್ಲಿ, ಹೂಡಾರಂಥ ಹಿರಿತಲೆಗಳು ನಂಬಿಕಸ್ಥರಲ್ಲ, ಅವರು ಪಕ್ಷಕ್ಕೆ ನಿಷ್ಠರಲ್ಲ ಎಂದು ಸೋನಿಯಾ ಮುಂದೆ ಬಿಂಬಿಸಲು ರಾಹುಲ… ಬಣ ಯಶಸ್ವಿ ಆಗಿದೆ. ಕಾಂಗ್ರೆಸ್‌ನ ಭವಿಷ್ಯ ಮುಂದೆ ಹೇಗಿದೆಯೋ ಗೊತ್ತಿಲ್ಲ. ಆದರೆ ಪತ್ರ ಬರೆದ 23 ನಾಯಕರ ರಾಜಕೀಯ ಜೀವನ ಕಾಂಗ್ರೆಸ್‌ನಲ್ಲಿ ಮುಕ್ತಾಯ ಆಗುವಂತೆ ಕಾಣುತ್ತಿದೆ.

ಕಾಂಗ್ರೆಸ್‌ನಲ್ಲಿ ಚುನಾವಣೆಗಳು

1993ರಲ್ಲಿ ಪಿ.ವಿ.ನರಸಿಂಹ ರಾವ್‌ ಕಾಲದಲ್ಲಿ ತಿರುಪತಿಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಿತ್ತು. ಆಗ ಆಯ್ಕೆಗೊಂಡ ಸಮಿತಿಯನ್ನೇ ರಾವ್‌ ರದ್ದುಗೊಳಿಸಿದ್ದರು. ಆಮೇಲೆ ಸೀತಾರಾಮ… ಕೇಸರಿ ಕಾಲದಲ್ಲಿ ಒಮ್ಮೆ ಚುನಾವಣೆ ನಡೆದಿತ್ತು. ನಂತರ ಅಧ್ಯಕ್ಷ ಸ್ಥಾನಕ್ಕೆ ಒಮ್ಮೆ ಜಿತಿನ್‌ ಪ್ರಸಾದ್‌ ಸೋನಿಯಾ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 10 ವರ್ಷ ಅಧಿಕಾರ ಇದ್ದಾಗ ಯಾರಿಗೂ ಚುನಾವಣೆ ಬೇಕಾಗಿರಲಿಲ್ಲ. ಈಗ ಇಷ್ಟೆಲ್ಲ ರಾದ್ಧಾಂತ ಆದ ನಂತರ ಇನ್ನೊಮ್ಮೆ ಚುನಾವಣೆ ನಡೆಸಿ ರಾಹುಲ…ರನ್ನು ಆರಿಸಿಕೊಂಡು ಬರುವುದು ಕಾಂಗ್ರೆಸ್‌ಗೆ ಅನಿವಾರ್ಯ ಆಗಬಹುದು.

'ಹುದ್ದೆಯ ಪ್ರಶ್ನೆ ಅಲ್ಲ, ಇದು ದೇಶದ ಪ್ರಶ್ನೆ' ದಿನದ ನಂತರ ಕಪಿಲ್ ನಿಗೂಢ ಮಾತು

ದರ್ಬಾರಿಗಳ ಆತಂಕ ಏನು?

77ರಲ್ಲಿ ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಸೋತರೂ ಜನತಾ ಪಾರ್ಟಿಯ ಒಳಜಗಳದಿಂದ 3 ವರ್ಷದಲ್ಲಿ ವಾಪಸ್‌ ಬಂದರು. 89ರಲ್ಲಿ ರಾಜೀವ್‌ ಸೋತ ನಂತರ 91ರಲ್ಲಿ ಗಾಂಧಿ ಪರಿವಾರದವರು ಹೊರಗೆ ಇದ್ದರೂ ಕಾಂಗ್ರೆಸ್ಸಿಗರಿಗೆ ಅಧಿಕಾರ ಸಿಕ್ಕಿತು. 98ರಲ್ಲಿ ಅಧಿಕಾರ ಹೋದರೂ 6 ವರ್ಷದಲ್ಲೇ ಸೋನಿಯಾ ವಾಪಸ್‌ ತಂದುಕೊಟ್ಟರು.

ಆದರೆ 2014ರಲ್ಲಿ ಅಧಿಕಾರ ಹೋದ ನಂತರ 2024ರ ವರೆಗೆ ಅಧಿಕಾರ ಬರೋದಿಲ್ಲ. ಅದರ ಮುಂದೆಯೂ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಕಾಂಗ್ರೆಸ್‌ ಪಕ್ಷ ಕಮ್ಯುನಿಸ್ಟರ ತರಹ ತುಂಬಾ ದಿನ ಅಧಿಕಾರದಿಂದ ದೂರ ಉಳಿದು ಬದುಕಬಲ್ಲ ವಿಚಾರಾಧಾರಿತ ಸಂಘಟನೆ ಅಲ್ಲ. ಅದು ಅಧಿಕಾರ ರಾಜಕಾರಣ ಮಾಡುವ ಗುಂಪು. ಅದಕ್ಕೆ ಗಾಂಧಿಗಳ ಮೂಲಕ ಅಥವಾ ಗಾಂಧಿಗಳು ಇಲ್ಲದೆಯೇ ಅಧಿಕಾರ ಬೇಕು ಅಷ್ಟೇ. ಅದೇ ಕಾಂಗ್ರೆಸ್‌ನ ಸಾಮರ್ಥ್ಯ ಹಾಗೂ ದೌರ್ಬಲ್ಯವೂ ಹೌದು.

ರಾಹುಲ್ ಗಾಂಧಿ ಆರೋಪದಿಂದ ನೋವಾಯ್ತು ಎಂದ ಕರ್ನಾಟಕದ ಹಿರಿಯ ನಾಯಕ

ಗಾಂಧಿ ಕುಟಂಬ ನಿಷ್ಠೆಯ ಕೌತುಕ

ಅಧಿಕಾರದಿಂದ ಕೆಳಗಿಳಿದ ತಮ್ಮ ನಾಯಕರನ್ನೇ ಮರೆತು ಬಿಡುವುದು ರಾಜಕಾರಣಿಗಳಲ್ಲಿ ಸಾಮಾನ್ಯ. ಆದರೆ ಬಿಜೆಪಿಗರು ಆರ್‌ಎಸ್‌ಎಸ್‌ಗೆ, ಕಾಂಗ್ರೆಸ್ಸಿಗರು ಗಾಂಧಿ ಪರಿವಾರಕ್ಕೆ ತೋರಿಸುವ ನಿಷ್ಠೆ ಮತ್ತು ಮರ್ಯಾದೆ ಕೌತುಕದ್ದು. ಈ ನಿಷ್ಠೆಗೆ ಕಾರಣವೇ ಸಂಘ ಮತ್ತು ಗಾಂಧಿ ಪರಿವಾರಕ್ಕೆ ವಿಭಿನ್ನ ಜನರನ್ನು ಏಕಸೂತ್ರದಲ್ಲಿ ಜೋಡಿಸಿ ಅಧಿಕಾರವನ್ನು ಮರಳಿ ಮರಳಿ ತಂದುಕೊಡಬಲ್ಲ ಶಕ್ತಿ-ಸಾಮರ್ಥ್ಯ ಇದೆ ಎಂಬುದು. ಸಮಾಜವಾದಿಗಳು, ಜನತಾ ಪರಿವಾರ ಇಂಥ ಫೆವಿಕಲ… ಇಲ್ಲದೆ ಹರಿದು ತುಂಡಾದರೆ, ಶಿವಸೇನೆ, ಡಿಎಂಕೆ, ಎಸ್‌ಪಿ, ಆರ್‌ಜೆಡಿಗಳು ಒಂದು ಕುಟುಂಬದ ಪಕ್ಷಗಳಾಗಿವೆ.

ಒಂದು ಕಾಲದಲ್ಲಿ ಗಾಂಧಿ ಕುಟುಂಬದ ಹೆಸರು ಹೇಳಿದರೆ ಸಾಕು ಯಾರೂ ಕೂಡ ಗೆಲ್ಲಬಹುದಿತ್ತು. ಇವತ್ತು ಆ ಜಾಗಕ್ಕೆ ಮೋದಿ ಬಂದು ಕುಳಿತಾಗ ಗಾಂಧಿಗಳು ಆ ಶಕ್ತಿ ಕಳೆದುಕೊಂಡಿದ್ದಾರೆ. ಒಂದು ರಾಜಮನೆತನ ಯುದ್ಧವನ್ನು ಗೆದ್ದು ಕೊಡುವ ಸಾಮರ್ಥ್ಯ ಕಳೆದುಕೊಂಡರೆ ಮೊದಲು ಬಂಡಾಯ ಏಳುವುದು ನಿಷ್ಠ ದರ್ಬಾರಿಗಳು. ನೀವು ಆಗ ನನ್ನ ಅಜ್ಜ ಗೆದ್ದಿದ್ದ, ಅಪ್ಪ ಗೆದ್ದಿದ್ದರು ಎಂದು ಹೇಳುತ್ತಾ ಕೂತರೆ ಅಧಿಕಾರ ಬೇಕು ಎಂದೇ ಕುಳಿತಿರುವ ರಾಜಕಾರಣಿಗಳಿಗೆ ಅದು ಹಿಡಿಸದು.

ಪಂಡಿತ್‌ ನೆಹರು ಟು ಸೋನಿಯಾ

ಸ್ವಾತಂತ್ರ್ಯ ಸಿಕ್ಕ ನಂತರ ರಾಜಕೀಯದಲ್ಲಿದ್ದೂ ಸಂತನಾಗಿ ಉಳಿದ ಮಹಾತ್ಮಾ ಗಾಂಧೀಜಿ ಅವರೇ ತಮ್ಮ ಉತ್ತರಾಧಿಕಾರಿಯನ್ನಾಗಿ ಪಂಡಿತ್‌ ನೆಹರು ಅವರನ್ನು ಆಯ್ಕೆ ಮಾಡಿದ್ದರು. ಹೀಗಾಗಿ ಅವರಿಗೊಂದು ತೂಕ ಪ್ರಾಪ್ತವಾಗಿತ್ತು. ಮೇಲಾಗಿ ಪಂಡಿತ್‌ ನೆಹರುಗೆ ಒಂದು ಪಾಂಡಿತ್ಯ ಇತ್ತು. ಪ್ರಖರ ವೈಚಾರಿಕ ಶಕ್ತಿ ಇತ್ತು. ಎಲ್ಲಕ್ಕೂ ಮುಖ್ಯವಾಗಿ ಸ್ವಾತಂತ್ರ್ಯ ಕೊಡಿಸಿದ ಪುಣ್ಯ ಇತ್ತು. ನಂತರ ಬಂದ ಇಂದಿರಾಗೆ ನಾಯಕತ್ವದ ಜೊತೆಗೆ ರಾಜಕಾರಣ ಗೊತ್ತಿತ್ತು. ಬ್ಯಾಂಕ್‌ ರಾಷ್ಟ್ರೀಕರಣದಿಂದ ಹಿಡಿದು ಬ್ಲೂಸ್ಟಾರ್‌ ಆಪರೇಷನ್‌ ನಡೆಸುವ ಧೈರ್ಯ ಇತ್ತು.

ರಾಜೀವ್‌ ಗಾಂಧಿಗೆ ಅನುಭವ ಇರಲಿಲ್ಲ; ಆದರೆ ಏನೋ ಒಂದು ಸೆಳೆತ, ಹೊಸತನ ಇತ್ತು. ಇನ್ನು ಸೋನಿಯಾಗೆ ನಾಯಕತ್ವ ವೈಚಾರಿಕತೆ ಇರಲಿಲ್ಲ. ಆದರೆ ತಾಳ್ಮೆ ಮತ್ತು ಎಲ್ಲರನ್ನು ಒಟ್ಟುಗೂಡಿಸುವ ಸ್ವಭಾವದಿಂದ 10 ವರ್ಷ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಆದರೆ ರಾಹುಲ್‌ ಗಾಂಧಿ ಸಂಸದನಾಗಿ 16 ವರ್ಷವಾಯಿತು. ಇದುವರೆಗೆ ಸಾಮರ್ಥ್ಯ ತೋರಿಸಲು ಆಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನರೇಂದ್ರ ಮೋದಿಗೆ ಸಡ್ಡು ಹೊಡೆಯಬಹುದು ಎಂದು ಅನಿಸುತ್ತಿಲ್ಲ. ಕೈಯಲ್ಲಿ ಅಧಿಕಾರ ಇದ್ದಾಗ ಕೆಲಸ ಮಾಡಿ ತೋರಿಸದೆ ಇದ್ದದ್ದು ರಾಹುಲ… ಮಾಡಿದ ಬಹು ದೊಡ್ಡ ತಪ್ಪು. ಕುದುರೆ ಕೊಟ್ಟಾಗ ಹತ್ತದೇ ಈಗ ನನ್ನನ್ನು ಹತ್ತಿಸಿ, ಹತ್ತಿಸಿ ಎಂದರೆ ಹೇಗೆ?

ನಾಯಕತ್ವ ಬದಲಾವಣೆ: ಸೋನಿಯಾಗೆ ಪತ್ರ ಬರೆದ ಗುಂಪಿನಲ್ಲಿ ಕರ್ನಾಟಕ ನಾಯಕ

ರಾಹುಲ್‌ ಇಟ್ಟತಪ್ಪು ಹೆಜ್ಜೆಗಳು

2014ರ ಮೊದಲು ರಾಹುಲ…ರನ್ನು ಒಮ್ಮೆ ಒಂದು ಗಂಟೆ ಭೇಟಿ ಆಗಿದ್ದೆ. ಆಗ ಅಡ್ಡಿ ಇಲ್ಲ, ತುಂಬಾ ಉಮೇದಿ ಇದೆ ಅನ್ನಿಸಿತ್ತು. ಆದರೆ ಅಮೇಥಿಗೆ ಹೋಗಿ ನೋಡಿದಾಗÜ ಅಯ್ಯೋ ಬರೀ ಮಾತು, ಇಚ್ಛಾ ಶಕ್ತಿ ಇಲ್ಲ ಎನಿಸಿತ್ತು. ತನ್ನ ಕ್ಷೇತ್ರದ ಅಭಿವೃದ್ಧಿ ಮಾಡದ ವ್ಯಕ್ತಿ ದೇಶಕ್ಕೇನು ಕೊಡಬಲ್ಲ ಎಂದು ಅನಿಸಿತ್ತು. 71ರ ಯುದ್ಧಕ್ಕೆ ನೇತೃತ್ವ ಕೊಟ್ಟಇಂದಿರಮ್ಮನ ಮೊಮ್ಮಗ ಕೆಲ ಹುಡುಗಾಟಿಕೆಯ ಹುಡುಗರಿಗಾಗಿ ಜೆಎನ್‌ಯುಗೆ ಹೋಗಿ ನಿಂತಿದ್ದು ನೋಡಿದಾಗ ಇವರಿಗೆ ಉಜ್ವಲ ಭವಿಷ್ಯ ಇದೆಯಾ ಎಂಬ ಪ್ರಶ್ನೆ ಮೂಡಿತ್ತು.

ಬಾಟ್ಲಾ ಎನ್‌ಕೌಂಟರ್‌ ಮೇಲೆ ಪ್ರಶ್ನೆ ಎತ್ತಿ, ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದಾಗ ಸುಮ್ಮನೆ ಕುಳಿತು, ಉರಿ, ಪಠಾಣ್‌ಕೋಟ್‌ ದಾಳಿ ನಡೆದಾಗ ಮಾತ್ರ ಮಾತನಾಡಿದರೆ ಜನ ಹೇಗೆ ಸ್ವೀಕರಿಸಿಯಾರು? ಸಾಮಾಜಿಕ ನ್ಯಾಯಕ್ಕೆ ಕೊಡುಗೆ ಕೊಟ್ಟಕಾಂಗ್ರೆಸ್‌ನಲ್ಲಿದ್ದುಕೊಂಡು ವೋಟಿನ ಆಸೆಗೆ ನಾನು ಜನಿವಾರಧಾರಿ ಬ್ರಾಹ್ಮಣ ಎಂದು ಹೇಳಿದರೆ ಅದು ಪ್ರಬುದ್ಧತೆ ಎನ್ನಲಾದೀತೆ? ಕಾಂಗ್ರೆಸ್‌ ಪಕ್ಷಕ್ಕೆ ಸಂಕಟ ಸೇನೆಯದ್ದಲ್ಲ, ಅದು ಕೇವಲ ಮತ್ತು ಕೇವಲ ಸೇನಾಪತಿಯದ್ದು!

ಕಾಂಗ್ರೆಸ್‌ ಮಾಡಿದ ತಪ್ಪೇನು?

ಸರಿಯೋ ತಪ್ಪೋ ಮೋದಿ ಹಿಂದುತ್ವದ ಜೊತೆ ಕಣ್ಣಿಗೆ ಕಾಣುವ ಅಭಿವೃದ್ಧಿಯ ಕೆಲಸಗಳನ್ನು ತೋರಿಸಿ ಯಶಸ್ವಿ ಆಗಿದ್ದಾರೆ. ಆದರೆ ರಾಹುಲ… ಮತ್ತು ಸೋನಿಯಾರ ಕಾಂಗ್ರೆಸ್‌ಗೆ ಒಂದು ನಿರ್ದಿಷ್ಟಸಿದ್ಧಾಂತ ಎಂಬುದಿಲ್ಲ. ಮಧ್ಯಮ ಪಂಥದಲ್ಲಿ ನಿಲ್ಲದೇ ಎಡಕ್ಕೆ ವಾಲಿದ್ದು ಕಾಂಗ್ರೆಸ್‌ ಮಾಡಿದ ದೊಡ್ಡ ತಪ್ಪು. ಆರ್ಥಿಕ ವಿಚಾರದಲ್ಲಿ ಬಡವರಿಗೆ ಸಹಾಯ ಮಾಡಲು ಎಡ ಪಂಥ ಸರಿ. ಆದರೆ ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿಯ ವಿಚಾರದಲ್ಲಿ ಗಟ್ಟಿಗೆರೆ ಎಳೆದು ಮಧ್ಯದಲ್ಲಿ ನಿಂತುಕೊಂಡಿದ್ದರೆ ಕಾಂಗ್ರೆಸ್‌ ಇಷ್ಟೊಂದು ಸಂಕಟ ಎದುರಿಸುತ್ತಿರಲಿಲ್ಲ. ಹಿಟ್ಲರ್‌ ತರಹದ ಯುರೋಪಿಯನ್‌ ರಾಷ್ಟ್ರೀಯತೆ ಒಳ್ಳೆಯದಲ್ಲ ಸರಿ. ಆದರೆ ಮಹಾತ್ಮಾ ಗಾಂಧಿ, ಪಟೇಲ…, ಸುಭಾಷ್‌ ಚಂದ್ರ ಬೋಸ್‌, ಇಂದಿರಾ ಗಾಂಧಿ ತರಹದ ರಾಷ್ಟ್ರೀಯತೆಗೆ ಅಡ್ಡಿ ಏನು? ಸೆಕ್ಯುಲರ್‌ ಎಂದರೆ ಸರ್ವಧರ್ಮ ಸಮಭಾವ ಎಂದು ಗಟ್ಟಿಯಾಗಿ ನಿಲ್ಲದೇ ಅತಿಯಾದ ಮುಸ್ಲಿಂ ತುಷ್ಟೀಕರಣದ ಕಾರಣದಿಂದ ಕಾಂಗ್ರೆಸ್‌ ಇವತ್ತು ಹೊಸ ತಲೆಮಾರಿನವರಿಗೆ ಬೇಡ ಎನಿಸುತ್ತಿದೆ. ಸೆಕ್ಯುಲರಿಸಂ ಸಮಸ್ಯೆ ಅಲ್ಲ, ತುಷ್ಟೀಕರಣ ಸಮಸ್ಯೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ