Asianet Suvarna News Asianet Suvarna News

ಎಚ್‌ಡಿಕೆಗೂ ಗ್ಯಾರಂಟಿಗೂ ಏನ್‌ ಸಂಬಂಧ?: ಡಿಕೆಶಿ

‘ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ. ಅವರು ಯೋಜನೆಗಳ ಫಲಾನುಭವಿಯಲ್ಲ. ತಮ್ಮ ಪಂಚರತ್ನ ಜಾರಿಗೆ ಅವಕಾಶ ಸಿಗಲಿಲ್ಲ ಎಂಬ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದಾರೆ.

What is the relation between HDK and guarantee DK Shivakumar outraged at bengaluru rav
Author
First Published Nov 13, 2023, 4:52 AM IST

ಬೆಂಗಳೂರು (ನ.13): ‘ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ. ಅವರು ಯೋಜನೆಗಳ ಫಲಾನುಭವಿಯಲ್ಲ. ತಮ್ಮ ಪಂಚರತ್ನ ಜಾರಿಗೆ ಅವಕಾಶ ಸಿಗಲಿಲ್ಲ ಎಂಬ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ? ಅವರಿಗೆ ಆ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಅವರು ಯೋಜನೆಗಳ ಫಲಾನುಭವಿಯಲ್ಲ. ಯೋಜನೆಗಳ ಜಾರಿ ಬಗ್ಗೆ ಮಾಹಿತಿ ಬೇಕಿದ್ದರೆ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ ಎಂದರು.

ಕುಮಾರಸ್ವಾಮಿ ಅವರಿಗೆ ಬಡ ಜನತೆಯ ನೋವು ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಅವರೂ ಒಬ್ಬ ನಾಯಕರು, ಆರೋಪ ಮಾಡಲಿ ತೊಂದರೆಯಿಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾರಿಗೆ ಒಳ್ಳೆಯದಾಗಬೇಕಿತ್ತೊ ಅವರಿಗೆ ಅದು ತಲುಪಿ, ಸಂತೋಷವಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಬಡವರ ಪರ ಕಾರ್ಯಕ್ರಮಗಳ ಬಗ್ಗೆ ಚಿಂತನೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಪ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ಅವಕಾಶ ಆಗಲೇ ಇಲ್ಲ ಎಂಬ ಹತಾಶೆಯಲ್ಲಿದ್ದಾರೆ. ಚನ್ನಪಟ್ಟಣದ 25ಕ್ಕೂ ಹೆಚ್ಚು ಮತದಾರರ ಬಳಿ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಉಚಿತ ವಿದ್ಯುತ್, ಶಕ್ತಿ, ಅನ್ನ ಭಾಗ್ಯ, ಗೃಹಲಕ್ಷ್ಮೀ ಯೋಜನೆಗಳು ಅವರಿಗೆ ತಲುಪಿವೆಯೆ? ಇಲ್ಲವೇ ಎಂದು ಅವರೂ ಹೋಗಿ ಪರೀಕ್ಷೆ ಮಾಡಲಿ ಎಂದು ಸವಾಲು ಹಾಕಿದರು.

ಒಂದಷ್ಟು ತಾಂತ್ರಿಕ ದೋಷ ಹಾಗೂ ಇತರೆ ಕಾರಣಗಳಿಂದ ಶೇ.5ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಈಗ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಿ ತಲುಪಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ಕುಮಾರಸ್ವಾಮಿ ಕಮಿಷನ್‌ ಟಾರ್ಗೆಟ್ ಕೊಟ್ಟಿರಬೇಕು:

ಕರ್ನಾಟಕದ ಸಚಿವರಿಗೆ ಪಂಚರಾಜ್ಯ ಚುನಾವಣೆ ಸಲುವಾಗಿ ಕಮಿಷನ್ ಟಾರ್ಗೆಟ್ ಕೊಡಲಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ, ಅವರೇ ಕಮಿಷನ್ ಟಾರ್ಗೆಟ್ ಕೊಟ್ಟಿರಬೇಕು. ನಮ್ಮ ಸಚಿವರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಹೋಗಿ ಬರುತ್ತಿದ್ದಾರೆ. ಇದನ್ನು ನೋಡಿಕೊಂಡು ತಾಳ್ಮೆಯಿಂದ ಇರಲು ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ. ಅವರಿಗೂ ವಿಜಯೇಂದ್ರ ಇಬ್ಬರಿಗೂ ಒಳ್ಳೆಯದಾಗಲಿ ಎಂದು ಶಿವಕುಮಾರ್ ಹೇಳಿದರು.

ತೆಲಂಗಾಣದಲ್ಲಿ ಗೆಲ್ಲುತ್ತೇವೆ:

ತೆಲಂಗಾಣ ಚುನಾವಣೆ ಬಗ್ಗೆ ಮಾತನಾಡಿದ ಅವರು, ನಾನು ತೆಲಂಗಾಣದ 5 ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದೆ. ಆ ಐದೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಡಿ. 9 ರಂದು ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಸರ್ಕಾರ ರಚಿಸಲಿದ್ದು, ಕರ್ನಾಟಕದ ಮಾದರಿಯಂತೆ 6 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದರು.

Follow Us:
Download App:
  • android
  • ios