ಕುಟುಂಬ ರಾಜಕಾರಣ ಬಗ್ಗೆ ಮೋದಿ ಹೇಳಿದ್ದೇನಾಯ್ತು?: ಕಾಂಗ್ರೆಸ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು ಓಲೈಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ ಎಂಬ ಮಾತು ಏನಾಯಿತು? ಬಿ.ವೈ. ವಿಜಯೇಂದ್ರ ನೇಮಕದ ಮೂಲಕ ಮೋದಿ ಅವರು ತಮ್ಮ ಮಾತಿನ ಮೇಲೆ ತಾವೇ ನಿಲ್ಲುವುದಿಲ್ಲ ಎಂದು ಸಾಬೀತು ಮಾಡಿದಂತಾಯಿತಲ್ಲವೇ?’ ಎಂದು ಕಿಡಿಕಾರಿದ ಕಾಂಗ್ರೆಸ್ ನಾಯಕರು

ಬೆಂಗಳೂರು(ನ.11): ‘ಕೇಂದ್ರ ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡುವ ನಾಟಕ ಆಡಿದೆ. ಜತೆಗೆ ಬಿ.ಎಲ್. ಸಂತೋಷ್ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ’ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ.
ಅಲ್ಲದೆ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು ಓಲೈಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ ಎಂಬ ಮಾತು ಏನಾಯಿತು? ಬಿ.ವೈ. ವಿಜಯೇಂದ್ರ ನೇಮಕದ ಮೂಲಕ ಮೋದಿ ಅವರು ತಮ್ಮ ಮಾತಿನ ಮೇಲೆ ತಾವೇ ನಿಲ್ಲುವುದಿಲ್ಲ ಎಂದು ಸಾಬೀತು ಮಾಡಿದಂತಾಯಿತಲ್ಲವೇ?’ ಎಂದು ಕಿಡಿಕಾರಿದ್ದಾರೆ.
ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಬಿಜೆಪಿ ಬೂತ್ ಅಧ್ಯಕ್ಷನ ಮನೆಗೆ ವಿಜಯೇಂದ್ರ..!
ನಗರದಲ್ಲಿ ಶನಿವಾರ ಪ್ರತ್ಯೇಕವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ತೋರಿದ ಧೋರಣೆಯನ್ನು ವ್ಯಂಗ್ಯ ಮಾಡಿದರು.
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ ಯಡಿಯೂರಪ್ಪ ಅವರನ್ನ ಬಳಸಿಕೊಳ್ಳಲು ವಿಜಯೇಂದ್ರ ನೇಮಕವೊಂದು ನಾಟಕ. ಬಿಜೆಪಿಗೆ ಯಡಿಯೂರಪ್ಪ ಅಥವಾ ವಿಜಯೇಂದ್ರ ಅವರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶವಿಲ್ಲ. ಲೋಕಸಭೆ ಚುನಾವಣೆ ಗೆಲ್ಲಲು ಈ ನಾಟಕ ಮಾಡಿದ್ದಾರೆ. ಲಿಂಗಾಯತರು ದಡ್ಡರಿಲ್ಲ, ಎರಡು ಬಾರಿ ಅಧಿಕಾರದಿಂದ ಕೆಳಗಿಳಿಸಿರುವುದನ್ನು ಮರೆತಿಲ್ಲ ಎಂದು ಹೇಳಿದರು.
ಬಿ.ಎಲ್. ಸಂತೋಷ್‌ಗೆ ಸ್ಪಷ್ಟ ಸಂದೇಶ:
ಪ್ರಿಯಾಂಕ್ ಖರ್ಗೆ ಮಾತನಾಡಿ, ವಿಜಯೇಂದ್ರ ನೇಮಕದ ಮೂಲಕ ಮೂಲಕ ಹೈಕಮಾಂಡ್ ಬಿ.ಎಲ್. ಸಂತೋಷ್ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ಕಳುಹಿಸಿದೆ. ತನ್ಮೂಲಕ ಯಡಿಯೂರಪ್ಪ ವಿರೋಧಿಗಳ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಮತ್ತೊಂದೆಡೆ, ಮೋದಿ ಅವರು ಕೆಂಪು ಕೋಟೆ ಮೇಲೆ ನಿಂತು ಭ್ರಷ್ಟಾಚಾರ, ಓಲೈಕೆ ರಾಜಕಾರಣ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಉಪದೇಶ ಮಾಡುತ್ತಿದ್ದರು. ಇದೀಗ ಯಾವ ನೈತಿಕತೆ ಮೇಲೆ ವಿಜಯೇಂದ್ರ ಅವರನ್ನು ನೇಮಿಸಿದ್ದಾರೆ. ಭ್ರಷ್ಟಾಚಾರ ತಡೆಯಬೇಕು ಎಂದು ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದರು. ಅವೆಲ್ಲಾ ನೆನಪಿಲ್ಲವೇ ಎಂದು ಪ್ರಶ್ನಿಸಿದರು.
ಕೆ.ಎಸ್. ಈಶ್ವರಪ್ಪ ನನಗೆ ಬಚ್ಚಾ ಎನ್ನುತ್ತಿದ್ದರು. ಈಗ ನೀವು ವಿಜಯೇಂದ್ರ ಬಳಿ ಹೋಗಿ ಮಂಡಿಯೂರಿ ಕೂರಿತ್ತೀರಾ? ಎಂದು ಲೇವಡಿ ಮಾಡಿದರು.
ರಣತಂತ್ರ ರೂಪಿಸುತ್ತೇವೆ:
ಡಾ.ಜಿ. ಪರಮೇಶ್ವರ್ ಮಾತನಾಡಿ, ಬಿ.ವೈ.ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಸರ್ಕಾರಕ್ಕೆ ಜನಪರ ಸಲಹೆಗಳನ್ನು ನೀಡಿದರೆ ಸ್ವಾಗತಿಸುತ್ತೇವೆ. ಅನಗತ್ಯ ಆರೋಪಗಳನ್ನು ಮಾಡಿದರೆ ನಾವೂ ತಕ್ಕ ಉತ್ತರ ನೀಡುತ್ತೇವೆ. ಮುಂದಿನ ಬೆಳವಣಿಗೆ ಗಮನಿಸಿ ನಮ್ಮ ರಣತಂತ್ರ ರೂಪಿಸುತ್ತೇವೆನೆಂದು ಹೇಳಿದರು.
ಈ ನಿರ್ಧಾರ ಲಿಂಗಾಯತರ ಮೇಲೆ ಪ್ರಭಾವ ಬೀರಲ್ಲವೇ? ಎಂಬ ಪ್ರಶ್ನೆಗೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರೇ ಬಿಜೆಪಿ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಿದರೂ ಕಾಂಗ್ರೆಸ್ 136 ಸ್ಥಾನ ಗಳಿಸಿದೆ. ಲಿಂಗಾಯತರು ದೂರ ಹೋಗಿರುವುದನ್ನು ಅರ್ಥೈಸಿಯೇ ಈಗ ಲೋಕಸಭೆ ಲಾಭಕ್ಕಾಗಿ ವಿಜಯೇಂದ್ರ ನೇಮಕ ಮಾಡಿದ್ದಾರೆ ಎಂದರು.
ನವೆಂಬರ್ 15ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪದಗ್ರಹಣ!
ವಿಶೇಷವಾಗಿ ವಿಜಯೇಂದ್ರಗಿಂತ ಅವರ ತಂದೆಯನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಓಡಾಡಿ ಲೋಕಸಭೆ ಗೆಲ್ಲಿಸುತ್ತಾರೆ ಎಂದುಕೊಂಡಿದ್ದಾರೆ. ಆದರೆ ಇದ್ಯಾವುದೂ ನಡೆಯುವುದಿಲ್ಲ.
ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಸ್ಥಾನ?:
ನಾವು ಪ್ರತಿಪಕ್ಷ ನಾಯಕರನ್ನು ನೇಮಕ ಮಾಡಿ ಎಂದು ಆಗ್ರಹಿಸಿದ್ದೆವು. ಅವರ ನೇತೃತ್ವದಲ್ಲಿ ಬರ ಅಧ್ಯಯನಕ್ಕೆ ಹೊರಡಿ ಎಂದು ಹೇಳಿದ್ದೆವು. ಆರ್. ಅಶೋಕ್, ಯತ್ನಾಳ್, ಸುನಿಲ್ ಕುಮಾರ್, ಅಶ್ವತ್ಥನಾರಾಯಣ್ ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ಆದರೆ ಕುಮಾರಸ್ವಾಮಿ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಲು ಈವರೆಗೆ ಖಾಲಿ ಬಿಟ್ಟಿರಬಹುದು ಎಂದು ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದರು.