ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಬಿಜೆಪಿ ಬೂತ್ ಅಧ್ಯಕ್ಷನ ಮನೆಗೆ ವಿಜಯೇಂದ್ರ..!
ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶಿಧರ್ ಮನೆಗೆ ಭೇಟಿ ನೀಡುವ ಮೂಲಕ ರಾಜ್ಯಾಧ್ಯಕ್ಷರಾಗಿ ಸಂಘಟನೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವೇಳೆ ಶಶಿಧರ್‌ಗೆ ಸಿಹಿ ತಿನ್ನಿಸಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸುವ ಪ್ರಯತ್ನ ಮಾಡಿದರು. ಪಕ್ಷದ ಬೂತ್ ಮಟ್ಟದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು.

ಬೆಂಗಳೂರು(ನ.11): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ ಸಕ್ರಿಯರಾಗಿದ್ದು, ಶನಿವಾರ ಬೆಳಗ್ಗೆಯೇ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬೂತ್‌ಮಟ್ಟದ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಬಳಿಕ ಆರ್‌ಎಸ್‌ಎಸ್ ಕಚೇರಿಗೆ ತೆರಳಿ ಸಮಾಲೋಚನೆ ನಡೆಸಿದರು.
ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶಿಧರ್ ಮನೆಗೆ ಭೇಟಿ ನೀಡುವ ಮೂಲಕ ರಾಜ್ಯಾಧ್ಯಕ್ಷರಾಗಿ ಸಂಘಟನೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವೇಳೆ ಶಶಿಧರ್‌ಗೆ ಸಿಹಿ ತಿನ್ನಿಸಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸುವ ಪ್ರಯತ್ನ ಮಾಡಿದರು. ಪಕ್ಷದ ಬೂತ್ ಮಟ್ಟದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು.
ವಿಜಯೇಂದ್ರಗೆ ಸಿಕ್ಕಿರುವುದು ಅಧಿಕಾರ ಅಲ್ಲ, ಜವಾಬ್ದಾರಿ: ಸಿ.ಟಿ.ರವಿ
ಬಿಜೆಪಿಯಲ್ಲಿ ಬೂತ್ ಮಟ್ಟದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪಕ್ಷದ ಸಂಘಟನೆಯಲ್ಲಿ ಬೂತ್ ಮಟ್ಟ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬೂತ್ ಮಟ್ಟದ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಸಂದೇಶವನ್ನು ವಿಜಯೇಂದ್ರ ನೀಡಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ವಿಜಯೇಂದ್ರ, ಮೊದಲ ಹೆಜ್ಜೆ ಬೂತಿನೆಡೆಗೆ, ಗುರಿಯು ಒಂದೇ ಗೆಲುವಿನೆಡೆಗೆ ಎಂದು ಬರೆದುಕೊಂಡಿದ್ದಾರೆ. ಕಾರ್ಯಕರ್ತ ನಮ್ಮ ಶಕ್ತಿ, ಮತದಾರ ನಮ್ಮ ಬಂಧು. ಮತ್ತೆ ಬಿಜೆಪಿ - ಮತ್ತೊಮ್ಮೆಮೋದಿ. ಬೂತ್ ಗೆಲ್ಲಿಸಿ -ದೇಶ ಗೆಲ್ಲಿಸಿ. ಸಂಕಲ್ಪ ನಮ್ಮದು -ಆಶೀರ್ವಾದ ನಿಮ್ಮದು ಎಂದು ತಿಳಿಸಿದ್ದಾರೆ.
ಆರ್ ಎಸ್ ಎಸ್ ಕಚೇರಿಗೆ ಭೇಟಿ:
ಬೂತ್ ಮಟ್ಟದ ಅಧ್ಯಕ್ಷರ ಮನೆಗೆ ಭೇಟಿಯ ಬಳಿಕ ಚಾಮರಾಜಪೇಟೆಯಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಕೇಶವಕೃಪಾಗೂ ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ಸಂಘದ ಪ್ರಮುಖರ ಜೊತೆಗೆ ಮಾತುಕತೆ ನಡೆಸಿ, ಹಿರಿಯರ ಮಾರ್ಗದರ್ಶನ ಪಡೆದುಕೊಂಡರು.
ಸಂಘದ ಸಂಸ್ಕೃತಿಯಂತೆ ಭಾರತಮಾತೆ ಮತ್ತು ಸೀತಾ, ರಾಮ, ಲಕ್ಷ್ಮಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಸಂಘಟನಾತ್ಮಕ ಹೊಣೆಗಾರಿಕೆ ನಿಭಾಯಿಸುವ ಕುರಿತು ಮಾರ್ಗದರ್ಶನ ಪಡೆದುಕೊಂಡರು. ಪಕ್ಷದಿಂದ ಆಯ್ಕೆಯಾದ ನೂತನ ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಸಂಘದ ಕಚೇರಿಗೆ ಭೇಟಿ ನೀಡುವುದು ಸಂಪ್ರದಾಯ. ಅದರಂತೆ ವಿಜಯೇಂದ್ರ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.