Asianet Suvarna News Asianet Suvarna News

ಕೆಪಿಸಿಸಿಗೆ ಡಿಕೆಶಿ ಹೊಸ ಸಾರಥಿ: ಜೆಡಿಸ್, ಬಿಜೆಪಿಗೆ ಶುರುವಾಯ್ತಾ ಭೀತಿ?

ಟ್ರಬಲ್ ಶೂಟರ್ ಎಂದೇ ಬಿಂಬಿತರಾಗಿರುವ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಕೆಪಿಸಿಸಿ ಪಟ್ಟ ಕಟ್ಟಿದೆ. ಇದರಿಂದ ಕಾಂಗ್ರೆಸ್ ಗೆ ಏನು ಲಾಭ? ಬಿಜೆಪಿ ಹಾಗೂ ಜೆಡಿಎಸ್ ಗೆ ಲಾಭವೋ ನಷ್ಟವೋ? ಮೂರು ಪಕ್ಷಗಳ ಮೇಲಾಗುವ ಪರಿಣಾಮಗಳೇನು? ಈ ಕೆಳಗಿನಂತಿದೆ ಸಂಪೂರ್ಣ ವಿವರ

What are the Impacts On BJP JDS over DK Shivakumar  appointed  as KPCC President
Author
Bengaluru, First Published Mar 11, 2020, 9:41 PM IST

ಬೆಂಗಳೂರು, [ಮಾ.11]: ಕಾಂಗ್ರೆಸ್‌ಗೊಬ್ಬ ಸಾರಥಿ ನೇಮಕವಾಗಿದೆ. ಹೈಕಮಾಂಡ್ ಅಳೆದು ತೂಗಿ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನ ನೇಮಕ ಮಾಡಿದೆ. 

ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದು ಬಂದ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಗಾದಿ ಒಲಿದು ಬಂದಿದೆ.. ಡಿ.ಕೆ.ಶಿವಕುಮಾರ್ ನೇಮಕದಿಂದ ಕಾಂಗ್ರೆಸ್ ಸೇರಿದಂತೆ ರಾಜ್ಯದ ಪ್ರಮುಖ ಮೂರು ಪಕ್ಷಗಳ ಮೇಲಾಗುವ ಪರಿಣಾಮಗಳ ಕುರಿತು ಗಂಭೀರ ಚರ್ಚೆ ಶುರುವಾಗಿದೆ. 

ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ

ಕೆಪಿಸಿಸಿಗೆ ಹೊಸ ಸಾರಥಿ.. ಜೆಡಿಸ್, ಬಿಜೆಪಿಗೆ ಶುರುವಾಯ್ತಾ ಭೀತಿ?
ಕೆಪಿಸಿಸಿ ಅಧ್ಯಕ್ಷರಾಗಿ  ಡಿ.ಕೆ.ಶಿವಕುಮಾರ್ ನೇಮಕವಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಶುರುವಾಗಿದೆ.  ಪಕ್ಷವನ್ನು ಅಧಿಕಾರಕ್ಕೆ ತಂದು ನಿಲ್ಲಿಸಬಲ್ಲ ಸಮರ್ಥ ನಾಯಕತ್ವದ ಗುಣವಿರುವ ಡಿಕೆಶಿ, ಹಲವು ಸವಾಲುಗಳನ್ನ ದಾಟಿ ಯಶಸ್ವಿಯಾಗ್ತಾರ ಎಂಬ ಪ್ರಶ್ನೆ ಕೈ ಪಾಳೆಯದಲ್ಲಿ ಉದ್ಭವಿಸಿವೆ. ಡಿಕೆಶಿ ಎಂಟ್ರಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲೂ, ರಾಜಕೀಯ ಲೆಕ್ಕಾಚಾರ, ಪರಿಣಾಮಗಳ ಬಗ್ಗೆ ಚರ್ಚೆ ಜೋರಾಗಿದೆ.

ಡಿಕೆಶಿಗೆ ಪಟ್ಟ, ಕಾಂಗ್ರೆಸ್‌ಗೆ ಶಕ್ತಿ
ಕಾಂಗ್ರೆಸ್ ಗೆ ಡಿಕೆಶಿ ನೇಮಕಾತಿ ಶಕ್ತಿ ತಂದಿದೆ. ಸರ್ಕಾರದ ವಿರುದ್ಧ ಸದನದ ಒಳಗೂ ಮತ್ತು ಹೊರಗೂ ಹೋರಾಟ ಮಾಡಲು ಅನುಕೂಲವಾಗಲಿದೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸಲು ಪ್ರಬಲ ಶಕ್ತಿ ಸಿಕ್ಕಂತಾಗಿದ್ದು, ಜಾತಿ ಸಮೀಕರಣದ ಮೂಲಕ ಎಲ್ಲಾ ವರ್ಗಗಳತ್ತ ದೃಷ್ಟಿ ಹರಿಸುವ ಅವಕಾಶ ಲಭ್ಯವಾಗಿದೆ. 

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕ: ಆಶ್ಚರ್ಯಗೊಂಡ ಬಿಜೆಪಿ ನಾಯಕ

ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದ್ದು, ಮೈತ್ರಿ ಸರ್ಕಾರದ ವೇಳೆ ದೂರವಾಗಿದ್ದ ಕಾಂಗ್ರೆಸ್ ನಾಯಕರು ಒಗ್ಗೂಡಿಸುವ ಯತ್ನ ನಡೆಯಬಹುದು. ಕಳೆದ ಮೂರು ತಿಂಗಳಿಂದ ಕಳೆಗುಂದಿದ್ದ ಕಾಂಗ್ರೆಸ್ ಪಕ್ಷದಲ್ಲಿ ಚೇತರಿಕೆ ಕಂಡು ಬಂದಿದ್ದು, ಸಿದ್ಧರಾಮಯ್ಯ ಮತ್ತು ಡಿಕೆಶಿ ಒಂದಾಗಿ ಹೋದರೆ, ದೊಡ್ಡ ಮಟ್ಟದ ರಾಜಕೀಯ ಸಂಚಲನ ನಿಶ್ಚಿತ ಎನ್ನಲಾಗಿದೆ.

ಇನ್ನು ಜೆಡಿಎಸ್‌ಗೆ ಹಿನ್ನಡೆ ?
ಹಳೇ ಮೈಸೂರು ಭಾಗದ.ಅದರಲ್ಲೂ ಒಕ್ಕಲಿಗ ಸಮುದಾಯದ ಡಿಕೆಶಿಗೆ ಪಟ್ಟ ಕಟ್ಟಿರೋದು ಜೆಡಿಎಸ್‌ಗೆ ಒಂದು ಹಂತದಲ್ಲಿ ಹಿನ್ನೆಡೆ ಆಗಬಹುದು. ಡಿಕೆಶಿ ಬಂಧನದ ವೇಳೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಭಾಗಿಯಾಗಿದ್ದ ಒಕ್ಕಲಿಗ ಜನ ಸಮೂಹ, ಸ್ವಾಮೀಜಿಗಳ ದಂಡನ್ನು ಗಮನಿಸಿದ್ದವರಿಗೆ ಈ ಭಾಗದಲ್ಲಿ ಡಿಕೆಶಿ ಪ್ರಾಬಲ್ಯ ತುಂಬಾ ಚನ್ನಾಗಿ ಅರ್ಥವಾಗುತ್ತೆ.
* ಬಿಜೆಪಿಯತ್ತ ಮುಖ ಮಾಡಿದ್ದ ಜೆಡಿಎಸ್ ಶಾಸಕರು ಕಾಂಗ್ರೆಸ್ ಕಡೆಗೆ ಚಿತ್ತ
* ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನ ಸಂಘಟನೆ ಮೇಲೆ ಪರಿಣಾಮ
* ದೇವೆಗೌಡರು ಮತ್ತು ಕುಮಾರಸ್ವಾಮಿ ವಿರುದ್ಧವೇ ತೊಡೆ ತಟ್ಟಲಿರುವ ಡಿಕೆಶಿ
* ಪ್ರಬಲ ಒಕ್ಕಲಿಗ ಸಮುದಾಯದ ನಾಯಕನಾಗಿ ಹೊರಹೊಮ್ಮಲು ವೇದಿಕೆ
* ಜೆಡಿಎಸ್ ಮತಗಳು ಕಾಂಗ್ರೆಸ್ ನತ್ತ ಕ್ರೋಢೀಕರಣವಾಗುವ ಅಪಾಯ.

ಕೊನೆಗೂ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ: ಸಿದ್ದರಾಮಯ್ಯಗೆ ಮೇಲುಗೈ

ಡಿಕೆಶಿಗೆ ಪಟ್ಟಕಟ್ಟಿರುವುದುರಿಂದ ಬಿಜೆಪಿ ಮೇಲಾಗುವ ಪರಿಣಾಮಗಳೇನು?
* ಸರಕಾರದ ಕಾರ್ಯವೈಖರಿ ಟೀಕಿಸಬಲ್ಲ ಪ್ರಭಾವಿ ನಾಯಕ
* ಎಲ್ಲಾ ಸಚಿವರು ಮತ್ತು ಶಾಸಕರಿಗೆ ತಿರುಗೇಟು ನೀಡುವ ಶಕ್ತಿ
* ಯಾವುದೇ ಹಂತದ ಹೋರಾಟವನ್ನು ರೂಪಿಸಬಲ್ಲ ನಾಯಕ
* ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಬ್ರೇಕ್
* ಮೈತ್ರಿ ಸರಕಾರದ ಪತನಕ್ಕೆ ಕಾರಣರಾದವರಿಗೆ ತಿರುಗೇಟು ಸಾಧ್ಯತೆ
* ಸರಕಾರದ ವಿರುದ್ಧ ಹೋರಾಟಕ್ಕೆ ಸಿದ್ಧರಾಮಯ್ಯಗೆ ಪ್ರಬಲ ಸಾಥ್
* ಜಾತಿ ಸಮೀಕರಣದಲ್ಲೂ ಡಿಕೆಶಿ ಆಯ್ಕೆ ಬಿಜೆಪಿಗೆ ತೊಂದರೆ ಸಾಧ್ಯತೆ.

ಒಟ್ಟಿನಲ್ಲಿ ಡಿಕೆಶಿ, ಕೆಪಿಸಿಸಿ ಪಟ್ಟಕ್ಕೇರಿರುವುದರಿಂದ ಕೇವಲ ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ನಲ್ಲೂ ಬೇರೆಬೇರೆ ರೀತಿಯ ಸಂಚಲನ ಸೃಷ್ಟಿಸಿರುವುದಂತೂ ಸತ್ಯ.

Follow Us:
Download App:
  • android
  • ios