ಯುವಶಕ್ತಿ ತುಂಬಲು ಕೆಲ ಶಾಸಕರಿಗೆ ಕೊಕ್‌, ಬೇರೆ ರಾಜ್ಯಗಳಷ್ಟು ಬದಲಾವಣೆಯನ್ನು ನಾವು ಇಲ್ಲಿ ಮಾಡಿಲ್ಲ, ಕಾಂಗ್ರೆಸ್‌ಗೆ ಹೋದದ್ದು ಶೆಟ್ಟರ್‌; ನಮ್ಮ ವೋಟ್‌ ಬ್ಯಾಂಕ್‌ ಅಲ್ಲ: ಬಿಜೆಪಿ ವರಿಷ್ಠ ಅಮಿತ್‌ ಶಾ 

ಬೆಂಗಳೂರು(ಏ.23): ಪಕ್ಷದಲ್ಲಿ ಯುವ ಶಕ್ತಿಗೆ ಅವಕಾಶ ನೀಡುವುದಕ್ಕಾಗಿ ಕೆಲವು ಶಾಸಕರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ಬಾರಿ ಬಹುಮತಕ್ಕೆ ಅಗತ್ಯ ಇರುವ ಸಂಖ್ಯೆಗಿಂತ 15ರಿಂದ 20 ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಜೆಪಿ ತೊರೆದು ಹೋಗಿ ಬೇರೆ ಪಕ್ಷಗಳಿಂದ ಸ್ಪರ್ಧಿಸಿದವರು ಈ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಉಳಿದ ರಾಜ್ಯಗಳಲ್ಲಿ ಮಾಡಿದಂತೆ ಕರ್ನಾಟಕದಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ನಾವು ಮಾಡಿಲ್ಲ. ಪಕ್ಷ ಪ್ರತಿ ಬಾರಿಯೂ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈಗ ಕೈಬಿಟ್ಟಿರುವವರಲ್ಲಿ ಯಾವುದೇ ದೋಷಗಳಿಲ್ಲ. ಅವರೆಲ್ಲರೂ ಗೌರವಯುತವಾದ ನಾಯಕರಾಗಿದ್ದಾರೆ. ಹೊಸ ರಕ್ತ ಮತ್ತು ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ ಕರ್ನಾಟಕದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಪಕ್ಷ ಎಂದೆಂದೂ ಬದಲಾವಣೆಯಲ್ಲಿ ನಂಬಿಕೆ ಹೊಂದಿದೆ. ಪಕ್ಷ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊಸ ತಲೆಮಾರಿಗೆ ಅವಕಾಶ ಕೊಡಬೇಕಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ’ ಎಂದು ಹೇಳಿದರು.

50:50 ಕ್ಷೇತ್ರಗಳು ಅಮಿತ್‌ ಶಾ ಟಾರ್ಗೆಟ್‌: ಪರಿಣಾಮಕಾರಿ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಸೂಚನೆ

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್‌ಗೆ ಸೇರಿರುವುದು ಕೇವಲ ಜಗದೀಶ್‌ ಶೆಟ್ಟರ್‌ ಮಾತ್ರ. ನಮ್ಮ ಪಕ್ಷದ ವೋಟ್‌ ಬ್ಯಾಂಕ್‌ ಆಗಲಿ, ಕಾರ್ಯಕರ್ತರಾಗಲೀ ಅಲ್ಲ. ಕೇವಲ ಜಗದೀಶ್‌ ಶೆಟ್ಟರ್‌ ಸೇರಿರುವುದರಿಂದ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಅವರು(ಕಾಂಗ್ರೆಸ್‌) ಭಾವಿಸುವುದಾದರೆ, ಸ್ವಂತ ಬಲದಿಂದಲೂ ಅವರು ಗೆದ್ದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

ಬಿಜೆಪಿ ತೊರೆದು ಬೇರೆ ಪಕ್ಷಕ್ಕೆ ವಲಸೆ ಹೋಗಿ ಸ್ಪರ್ಧೆ ಮಾಡಿದವರ ಪೈಕಿ ಹೆಚ್ಚಿನವರು ಚುನಾವಣೆ ಗೆದ್ದ ಇತಿಹಾಸ ಬಿಜೆಪಿಯಲ್ಲಿ ಇಲ್ಲ. ಕರ್ನಾಟಕದಲ್ಲೂ ಕೂಡ ಆ ಇತಿಹಾಸ ಪುನರಾವರ್ತನೆ ಆಗಲಿದೆ ನೋಡಿ ಎಂದು ತಿಳಿಸಿದರು.
ಟಿಕೆಟ್‌ ನಿರಾಕರಿಸಿದವರಿಗೆ ಪಕ್ಷದ ನಾಯಕರು ಮಾಹಿತಿ ಮೊದಲೇ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷದಂತೆ ನಡೆಸಿಕೊಂಡಿಲ್ಲ. ಹಿಂದೆ ರಾಜೀವ್‌ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ… ಅವರಿಗೆ ಕುರ್ಚಿಯಿಂದ ಕೆಳಗಿಳಿಯುವಂತೆ ಸೂಚಿಸಿದ್ದರು. ನಮ್ಮಲ್ಲಿ ಆ ರೀತಿ ಇಲ್ಲ ಎಂದು ಸಮರ್ಥಿಸಿಕೊಂಡರು.

ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸರಳ ಬಹುಮತಕ್ಕಿಂತ 15-20 ಸ್ಥಾನಗಳು ಹೆಚ್ಚಿಗೆ ಬರಲಿವೆ. ಇದನ್ನು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿದ್ದೇನೆ. ಬೇಕಾದರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಅಮಿತ್‌ ಶಾ ಪ್ರತಿಪಾದಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಬೇರೆ ಬೇರೆ ಅಲ್ಲ. ಅವು ಒಂದೇ. ಜೆಡಿಎಸ್‌ಗೆ ಮತ ಹಾಕುವುದು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿದಂತೆ ಅಷ್ಟೇ ಎಂದು ಅಭಿಪ್ರಾಯಪಟ್ಟರು.

ರಾಹುಲ್‌ ಬಲಿಪಶು ಅಲ್ಲ:

ರಾಹುಲ್‌ ಗಾಂಧಿ ಸಂಸದ ಸ್ಥಾನ ಕಳೆದುಕೊಂಡಿರುವ ಕುರಿತಾಗಿ ಆಡಳಿತ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್‌ ನಡೆಯನ್ನು ಟೀಕಿಸಿದ ಅವರು, ಹಿಂದುಳಿದ ಸಮುದಾಯಕ್ಕೆ ಅವಮಾನ ಮಾಡುವಂತೆ ರಾಹುಲ್‌ ಗಾಂಧಿ ಅವರಿಗೆ ನಾವು ಹೇಳಿರಲಿಲ್ಲ. ಅವರೇ ಅವಮಾನ ಮಾಡಿ ಇದೀಗ ಬಲಿಪಶು ಮಾಡಿದ್ದಾರೆ ಎಂಬಂತೆ ನಾಟಕ ಆಡುತ್ತಿದ್ದಾರೆ ಎಂದು ಹೇಳಿದರು.

News Hour: ಕರ್ನಾಟಕ ಕದನ ಕಣಕ್ಕೆ ಕೇಸರಿ ಕಲಿಗಳ ಎಂಟ್ರಿ!

ಅಮಿತ್‌ ಶಾ ಉವಾಚ

1. ಪಕ್ಷವು ಪ್ರತಿ ಬಾರಿ ಹಲವು ವಿಷಯ ಗಮನದಲ್ಲಿಟ್ಟು ನಿರ್ಧಾರಗಳನ್ನು ಕೈಗೊಳ್ಳುತ್ತದೆ
2. ಈಗ ಕೈಬಿಟ್ಟಿರುವವರಲ್ಲಿ ದೋಷವಿಲ್ಲ. ಅವರೆಲ್ಲರೂ ಗೌರವಯುತವಾದ ನಾಯಕರು
3. ಹೊಸ ರಕ್ತ, ಹೊಸ ತಲೆಮಾರನ್ನು ಪರಿಚಯಿಸಲು ಹೊಸಬರಿಗೆ ಅವಕಾಶ ನೀಡಲಾಗಿದೆ
4. ಇಂತಹ ಸಂದರ್ಭದಲ್ಲಿ ಕಠಿಣ ನಿರ್ಧಾರ ಅನಿವಾರ್ಯ. ಇದೊಂದು ಸಹಜ ಪ್ರಕ್ರಿಯೆ
5. ಬಿಜೆಪಿ ತೊರೆದವರು ಸೋಲ್ತಾರೆ. ನಾವು ಬಹುಮತಕ್ಕಿಂತ 20 ಸ್ಥಾನ ಹೆಚ್ಚು ಗೆಲ್ಲುತ್ತೇವೆ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.