50:50 ಕ್ಷೇತ್ರಗಳು ಅಮಿತ್ ಶಾ ಟಾರ್ಗೆಟ್: ಪರಿಣಾಮಕಾರಿ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಸೂಚನೆ
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಚುನಾವಣಾ ಪ್ರಮುಖರೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಬೆಂಗಳೂರು (ಏ.22): ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಚುನಾವಣಾ ಪ್ರಮುಖರೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಗೆಲ್ಲುವ ಪೂರ್ಣ ವಿಶ್ವಾಸವಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಸಮಬಲದ ಹೋರಾಟವಿರುವ ಅಂದರೆ, 50:50 ಪೈಪೋಟಿ ಇರುವಂಥ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿ ಪರಿಣಾಮಕಾರಿ ಪ್ರಚಾರ ನಡೆಸಬೇಕು ಎಂಬ ಸೂಚನೆಯನ್ನು ಅಮಿತ್ ಶಾ ನೀಡಿದ್ದಾರೆ.
ಶುಕ್ರವಾರ ರಾತ್ರಿ ನಗರದ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಅಮಿತ್ ಶಾ ಅವರು ಚುನಾವಣಾ ಸ್ಥಿತಿಗತಿಯ ಬಗ್ಗೆ ಹೊರ ರಾಜ್ಯದಿಂದ ಆಗಮಿಸಿ ಕೆಲಸ ಮಾಡುತ್ತಿರುವ ವಿಸ್ತಾರಕರಿಂದ ವಿಸ್ತೃತ ಮಾಹಿತಿ ಪಡೆದುಕೊಂಡರು. ರಾಜ್ಯದ ಯಾವ ಭಾಗದಲ್ಲಿ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ, ಯಾವ ಭಾಗದಲ್ಲಿ ಅನಾನುಕೂಲವಿದೆ? ಚುನಾವಣಾ ಪ್ರಚಾರದಲ್ಲಿ ಯಾವ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಬೇಕು? ಪ್ರತಿಪಕ್ಷಗಳ ಟೀಕೆಗಳಿಗೆ ಹೇಗೆ ಎದಿರೇಟು ನೀಡಬೇಕು? ಜಾತಿ ಸಮೀಕರಣವನ್ನು ಮುಂದಿಟ್ಟುಕೊಂಡು ಯಾವ ರೀತಿ ಪ್ರಚಾರ ಕೈಗೊಳ್ಳಬೇಕು?
ಡಿಕೆಶಿ ಯಾವ ಜಾತಿ ಮೀಸಲಾತಿ ಕಡಿಮೆ ಮಾಡ್ತಾರೆ?: ಜೆ.ಪಿ.ನಡ್ಡಾ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳ ಪೈಕಿ ಯಾವ್ಯಾವುದನ್ನು ಆದ್ಯತೆ ಮೇರೆಗೆ ಮತದಾರರ ಮುಂದೆ ಪ್ರಸ್ತಾಪಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಮಿತ್ ಶಾ ಅವರು ವಿಸ್ತಾರಕರ ಅಭಿಪ್ರಾಯ ಆಲಿಸಿದರು ಎನ್ನಲಾಗಿದೆ. ಬಳಿಕ ಆ ಅಭಿಪ್ರಾಯದ ಆಧಾರದ ಮೇಲೆ ಚುನಾವಣಾ ಪ್ರಚಾರವನ್ನು ಪರಿಣಾಮಕಾರಿಯಾಗಿ ನಡೆಸುವುದು ಹೇಗೆ ಎಂಬುದರ ಬಗ್ಗೆ ಇತರ ನಾಯಕರೊಂದಿಗೆ ಚರ್ಚೆ ನಡೆಸಿದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಾರದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು. ಅವರ ಪ್ರಚಾರದಿಂದ ಪಕ್ಷ ಹೆಚ್ಚು ಲಾಭವಾಗಬೇಕು.
ಗೆದ್ದೆ ಗೆಲ್ಲುವಂಥ ವಿಶ್ವಾಸವಿರುವ ಕ್ಷೇತ್ರಗಳನ್ನು ಬಿಟ್ಟು 50:50 ಪೈಪೋಟಿ ಇರುವ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಂಡು ಅಲ್ಲಿ ಪ್ರಚಾರ ಬಿರುಸುಗೊಳಿಸಬೇಕು. ಅಂಥ ಕ್ಷೇತ್ರಗಳಲ್ಲಿ ಮೋದಿ ಅವರ ಪ್ರಚಾರ ಕಾರ್ಯಕ್ರಮ ಆಯೋಜಿಸಬೇಕು ಎಂಬ ಸಲಹೆಯನ್ನೂ ಅಮಿತ್ ಶಾ ಅವರು ನೀಡಿದರು ಎಂದು ಮೂಲಗಳು ತಿಳಿಸಿವೆ. ಇನ್ನು ಮುಂದೆ ನಾನು ಸತತವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಚುನಾವಣೆಯ ಪ್ರತಿ ಬೆಳವಣಿಗೆಯನ್ನೂ ನಿಗಾ ವಹಿಸಿ ಗಮನಹರಿಸುತ್ತೇನೆ. ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟುಸ್ಥಾನಗಳನ್ನು ಪಕ್ಷ ಗಳಿಸಬೇಕು. ಆ ದಿಕ್ಕಿನಲ್ಲಿ ಎಲ್ಲ ನಾಯಕರೂ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ.
ಲಿಂಗಾಯತ ಡ್ಯಾಂ ಒಡೆವ ಭ್ರಮೆಯಲ್ಲಿ ಡಿಕೆಶಿ: ಸಿಎಂ ಬೊಮ್ಮಾಯಿ ಟಾಂಗ್
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾದ ಮನ್ಸುಖ್ ಮಾಂಡವಿಯ, ಅಣ್ಣಾ ಮಲೈ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡಿದ್ದರು. ಅವರರೊಂದಿಗೆ ವಿವಿಧ ರಾಜ್ಯಗಳಿಂದ ಆಗಮಿಸಿರುವ 52 ಮಂದಿ ವಿಸ್ತಾರಕರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.