Asianet Suvarna News Asianet Suvarna News

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅತ್ಯಾಪ್ತರ ಹಠಾತ್‌ ರಾಜೀನಾಮೆಗೆ ಕಾರಣ ಏನು?

ತೃಣಮೂಲ ಕಾಂಗ್ರೆಸ್‌ ನಾಯಕರ ಸಿಟ್ಟು ಇರುವುದು ಮಮತಾ ಮೇಲಲ್ಲ. ಇವೆರಲ್ಲರೂ ಮಮತಾ ನಾಯಕತ್ವವನ್ನು ಒಪ್ಪಿಕೊಂಡೇ ಇದ್ದವರು. ಆದರೆ ಮಮತಾರ ಪಕ್ಷವನ್ನು ಈಗ ಮುನ್ನಡೆಸುತ್ತಿರುವುದು ಅವರ ಅಳಿಯ ಅಭಿಷೇಕ್‌ ಬ್ಯಾನರ್ಜಿ. ಆತನದೇ ಈಗ ಸಮಸ್ಯೆ.

West Bengal politics and Mamata banarjee dear and Near one Resignation hls
Author
Bengaluru, First Published Dec 26, 2020, 9:16 AM IST

ಸಮುದ್ರದಲ್ಲಿ ಹಡಗು ಮುಳುಗುತ್ತಿದೆ ಎಂದು ಮೊದಲು ಅರ್ಥವಾಗುವುದೇ ಇಲಿಗಳು ಹೊರಗೆ ಬಿದ್ದಾಗ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಾಲ್ಕು ತಿಂಗಳು ಇರುವಾಗಲೇ ಒಬ್ಬೊಬ್ಬರಾಗಿ ಘಟಾನುಘಟಿ ನಾಯಕರು ತೃಣಮೂಲದಿಂದ ಹೊಸ ಹಡಗು ಹತ್ತುತ್ತಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಒಂದು ಕಾಲದ ಮಮತಾ ಅತ್ಯಾಪ್ತ ನಾಯಕರಾದ ಮುಕುಲ್‌ ರಾಯ್‌, ಸುವೇಂದು ಅಧಿಕಾರಿ, ಮಿಹಿರ್‌ ಗೋಸ್ವಾಮಿ, ಜಿತೇಂದ್ರ ತಿವಾರಿ ಇವರೆಲ್ಲರೂ ಬಿಜೆಪಿಗೆ ಬಂದಿದ್ದು, ಸದ್ಯಕ್ಕಂತೂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ.

ಮಮತಾರ ಭದ್ರ ಕೋಟೆಗಳಂತೆ ಇದ್ದ ಜಂಗಲ್‌ ಮಹಲ್‌ ಕೂಚ್‌ ಬಿಹಾರದ ಉತ್ತರ ಬಂಗಾಳದ ಕ್ಷೇತ್ರಗಳಲ್ಲಿ ಅಚಾನಕ್‌ ಆಗಿ ತೃಣಮೂಲದ ತಳಮಟ್ಟದ ಕಾರ್ಯಕರ್ತರು ಬಿಜೆಪಿಗೆ ಗುಳೆ ಹೋಗುತ್ತಿದ್ದು, ಯಾಕೋ ಚುನಾವಣೆ ನಡೆಯುವ 4 ತಿಂಗಳು ಮೊದಲೇ ಮಮತಾ ಬ್ಯಾನರ್ಜಿ ಮತ್ತವರ ತೃಣಮೂಲ ತುಂಬಾ ದುರ್ಬಲವಾಗಿ ಕಾಣುತ್ತಿದೆ.

ಪ್ರತಿಭಟನಾ ನಿರತ ರೈತರೊಂದಿಗೆ ಮಾತನಾಡಿ ಮಮತಾ ಹೇಳಿದ್ದು ಒಂದೇ ಮಾತು!

ಆದರೆ ಒಂದು ಗಮನಿಸಬೇಕಾದ ಸಂಗತಿ ಎಂದರೆ ಮಮತಾರ ಜನಪ್ರಿಯತೆ ಕಡಿಮೆ ಆಗಿಲ್ಲ. ಆದರೆ ಹಗರಣಗಳು, ಅತಿಯಾದ ಮುಸ್ಲಿಂ ತುಷ್ಟೀಕರಣ, ಕುಂಠಿತ ಅಭಿವೃದ್ಧಿ ಕಾರಣದಿಂದ ಮಮತಾ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲವೇ ಇಲ್ಲ. ಮುಂದಿನ ಮೂರು ತಿಂಗಳು ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮಮತಾ ಏಕಾಂಗಿಯಾಗಿ ಅಧಿಕಾರಕ್ಕೆ ಮರಳುವುದು ಕಷ್ಟ.

ಮಮತಾ ಬ್ಯಾನರ್ಜಿ ಸಮಸ್ಯೆ ಏನು?

34 ವರ್ಷದ ಎಡ ಪಕ್ಷಗಳ ಆಡಳಿತದ ವಿರುದ್ಧ ಪಶ್ಚಿಮ ಬಂಗಾಳದ ಜನ ಮಮತಾರನ್ನು ಒಪ್ಪಿಕೊಂಡಿದ್ದು ಅಭಿವೃದ್ಧಿಗಳ ಭರವಸೆಯ ಕಾರಣದಿಂದ. ಆದರೆ 10 ವರ್ಷಗಳ ನಂತರವೂ ಪಶ್ಚಿಮ ಬಂಗಾಳದಲ್ಲಿ ಕಣ್ಣಿಗೆ ಕಾಣುವ ಅಭಿವೃದ್ಧಿ ಕೆಲಸ ನಡೆದಿಲ್ಲ. ಕೊಲ್ಕತ್ತಾ ಸೇರಿದಂತೆ ಬಹುತೇಕ ನಗರಗಳು ಓಬೀರಾಯನ ಕಾಲದ ನಗರಗಳಂತೆ ಕಾಣುತ್ತವೆ. ಮಾ ಮಾಟಿ ಮಾನುಷ್‌ ಎಂದು ಅಧಿ​ಕಾರಕ್ಕೆ ಬಂದ ಮಮತಾ ಹೊಸ ಹೊಸ ಕಾರ್ಖಾನೆ ತಂದು ಉದ್ಯೋಗ ಸೃಷ್ಟಿಗೂ ಮುಂದಾಗಲಿಲ್ಲ. ತಾನು ಹವಾಯಿ ಚಪ್ಪಲಿ ಹಾಕಿ ಸುತ್ತಾಡುವುದು ಬೇರೆ. ರಾಜನಾದವನು ಸಾಮಾನ್ಯ ಜನರ ಬದುಕಿನ ಮಟ್ಟಸುಧಾರಿಸಬೇಕು. ಆದರೆ ಮಮತಾಗೆ ಹತ್ತು ವರ್ಷದಲ್ಲಿ ಇದನ್ನು ಮಾಡಲು ಸಾಧ್ಯ ಆಗಲಿಲ್ಲ. ಹೀಗಾಗಿ ಆಡಳಿತ ವಿರೋ​ಧಿ ಅಲೆ ಸ್ಪಷ್ಟವಾಗಿ ಕಾಣುತ್ತಿದೆ.

ಅಳಿಯನ ವಿರುದ್ಧ ಎಲ್ಲರೂ

ತೃಣಮೂಲ ಕಾಂಗ್ರೆಸ್‌ ನಾಯಕರ ಸಿಟ್ಟು ಇರುವುದು ಮಮತಾ ಮೇಲಲ್ಲ. ಮಮತಾ ನಾಯಕತ್ವವನ್ನು ಒಪ್ಪಿಕೊಂಡೇ ಇದ್ದವರು ಎಲ್ಲರೂ. ಆದರೆ ಮಮತಾರ ಪಕ್ಷವನ್ನು ನಡೆಸುತ್ತಿರುವ ಅಳಿಯ ಅಭಿಷೇಕ್‌ ಬ್ಯಾನರ್ಜಿಯದ್ದೇ ಮೂಲ ಸಮಸ್ಯೆ. ಮೊದಲು ಪಕ್ಷದಲ್ಲಿ ಪವರ್‌ಫುಲ್‌ ನಂಬರ್‌ 2 ಆಗಿದ್ದ ಮುಕುಲ್‌ ರಾಯ್‌ ಹೊರಗಡೆ ಹೋಗಿದ್ದು ಅಭಿಷೇಕ್‌ ಬ್ಯಾನರ್ಜಿ ಅವರ ಹಸ್ತಕ್ಷೇಪದಿಂದ. ಈಗ ನಂಬರ್‌ 2 ಆಗಿದ್ದ ಸುವೇಂದು ಅಧಿ​ಕಾರಿ ಕೂಡ ಹೊರಗಡೆ ಹೋಗುತ್ತಿರುವುದು ಅಳಿಯನ ಕಾಟದಿಂದಲೇ. ಅಭಿಷೇಕ್‌ ಬ್ಯಾನರ್ಜಿ ಜೊತೆ ಚೆನ್ನಾಗಿ ಇರುವವರು ಇಲ್ಲಿಯೇ ಇದ್ದಾರೆ.

ಆತನ ಜೊತೆ ಸಂಬಂಧ ಕೆಡಿಸಿಕೊಂಡವರು ಬಂಡಾಯ ಹೂಡಿ ಗುಳೆ ಹೋಗುತ್ತಿದ್ದಾರೆ. ಬಿಜೆಪಿ ಮತ್ತು ಎಡ ಪಕ್ಷಗಳಂತೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ಆಧಾರಿತ ಪಕ್ಷ ಅಲ್ಲ. ಅದು ಪಕ್ಕಾ ಜಿಲ್ಲಾ ನಾಯಕರ ಆಧಾರಿತ ಪಕ್ಷ. ಹೀಗಾಗಿ ಒಬ್ಬ ನಾಯಕ ಹೋದರೆ ಆತನ ಹಿಂದೆ ಬೆಂಬಲಿಗರೂ ಹೋಗುತ್ತಿದ್ದಾರೆ.

ಬಂಗಾಳದಲ್ಲಿ 200 ಸ್ಥಾನ ಗೆದ್ದರೆ ಟ್ವಿಟರ್ ತ್ಯಜಿಸುತ್ತೇನೆ; ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಸವಾಲು!

ಬಿಜೆಪಿಗಿರುವ ಅವಕಾಶ ಎಷ್ಟು?

ಒಂದು ಕಾಲದಲ್ಲಿ ಗುಡ್ಡಗಾಡು ಡಾರ್ಜಿಲಿಂಗ್‌ ಬಿಟ್ಟರೆ ಎಲ್ಲಿಯೂ ಗೆಲ್ಲಲು ಸಾಧ್ಯ ಆಗದೇ ಇದ್ದ ಬಿಜೆಪಿಗೆ ಒಮ್ಮೆಲೇ ನಾಯಕರ ಮತ್ತು ಅವರ ಬೆಂಬಲಿಗರ ದಂಡು ಹರಿದು ಬರುತ್ತಿದೆ. ಆದರೆ ಬಿಜೆಪಿ ಸಮಸ್ಯೆ ಎಂದರೆ ಇವರನ್ನು ತೆಗೆದುಕೊಂಡು ಹೋಗಬಲ್ಲ ಗಟ್ಟಿನಾಯಕತ್ವ ಇಲ್ಲ. ಹೀಗಾಗಿ ಮೋದಿ ಜಪವೇ ಅನಿವಾರ್ಯ. ಈಗ ಕಾಣುತ್ತಿರುವ ಮಮತಾ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ​ ಅಲೆಯನ್ನು ಬಿಜೆಪಿ ಮತಗಳಾಗಿ ಪರಿವರ್ತಿಸುವುದೇ ದೊಡ್ಡ ಸವಾಲು. ಇದಕ್ಕಾಗಿಯೇ ಬಿಜೆಪಿ 16000 ಬೂತ್‌ಗಳಲ್ಲಿ ಕಾರ್ಯಕರ್ತರನ್ನು ಜೋಡಿಸುತ್ತಿದೆ. ಒಟ್ಟಾರೆ ಅರ್ಥ ಏನು ಅಂದರೆ, ಮಮತಾ ವಿರುದ್ಧದ ಗಾಳಿ ಕಾಣುತ್ತಿದೆ; ಆದರೆ ಅದನ್ನು ತನ್ನ ಕಡೆ ತಿರುಗಿಸಿಕೊಳ್ಳುವುದು ಬಿಜೆಪಿಗೆ ಸವಾಲು.

ಪ್ರಶಾಂತ್‌ ಕಿಶೋರ್‌ ಬೇಡ ಬೇಡ

2014ರ ನಂತರ ನಡೆದ ಚುನಾವಣೆಗಳಲ್ಲಿ ಮೋದಿ ವಿರುದ್ಧ ಇರುವ ಎಲ್ಲರೂ ಹುಡುಕುವ ಸಲಹೆಗಾರನ ಹೆಸರು ಪ್ರಶಾಂತ್‌ ಕಿಶೋರ್‌. ಚುನಾವಣೆಗೆ 4 ತಿಂಗಳು ಇರುವಾಗ ಮಮತಾ ದೀದಿ ಕೂಡ ಪ್ರಶಾಂತ್‌ ಕಿಶೋರ್‌ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದು, ಸರ್ಕಾರ ಮತ್ತು ಪಕ್ಷ ಎರಡನ್ನೂ ಪಿ.ಕೆ.ಯೇ ನಿಭಾಯಿಸುತ್ತಿದ್ದಾರೆ. ಆದರೆ ಇದರಿಂದ ಮಮತಾ ನಿಷ್ಠರಲ್ಲಿಯೇ ಭಾರೀ ಅಸಮಾಧಾನವಿದೆ. ಇದಕ್ಕೆ ಮುಖ್ಯ ಕಾರಣ ಪಿ.ಕೆ. ಹಾಲಿ ಶಾಸಕರ ಟಿಕೆಟ್‌ ಬದಲಾಯಿಸಿ ಹೊಸ ಮುಖಗಳಿಗೆ ಅವಕಾಶ ಕೊಡಿ ಎಂದು ನೀಡಿರುವ ಸಲಹೆ. ಇದರಿಂದ ಈಗ ಕಾಣುತ್ತಿರುವ ಆಡಳಿತ ವಿರೋಧಿ ಅಲೆ ಕರಗಿಹೋಗುತ್ತದೆ ಎಂಬುದು ಪಿ.ಕೆ.ಯ ರಣತಂತ್ರ. ಆದರೆ ಇದರಿಂದ ಬಿಜೆಪಿಗೆ ಕುಳಿತಲ್ಲಿಂದಲೇ ಚುನಾವಣಾ ಯಂತ್ರ ತಂತ್ರ ದೊರಕುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.

ಕಾಂಗ್ರೆಸ್‌ನ ಅಭೂತಪೂರ್ವ ಶಿಥಿಲತೆ

ಮೋದಿ ಕಾಲದಲ್ಲಿ ಹಿಂದುತ್ವದ ಸಂಘಟನೆಯೇ ಇರದ ತೆಲಂಗಾಣ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಬಿಜೆಪಿ ಉತ್ಥಾನದಲ್ಲಿದ್ದರೆ, ಆ ರಾಜ್ಯಗಳಲ್ಲಿ ಒಂದು ಅಥವಾ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಮಾತ್ರ ಶಿಥಿಲತೆಯ ಹಾದಿಯಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ವಿರುದ್ಧ ಪ್ರಬಲವಾಗಿದ್ದ ಕಾಂಗ್ರೆಸ್‌ ನಾಮಾವಶೇಷದ ಹಾದಿಯಲ್ಲಿದ್ದು, ಕೇವಲ ಮಾಲ್ಡಾ, ಮುರ್ಶಿದಾಬಾದ್‌ನಲ್ಲಿ ಮಾತ್ರ ಸ್ವಲ್ಪ ಜೀವಂತವಾಗಿದೆ. ಎಡ ಪಕ್ಷಗಳ ಕಾರ್ಯಕರ್ತರು ಮಮತಾರನ್ನು ಎದುರಿಸಲು ಬಿಜೆಪಿಯ ಒಳ ಹೊಕ್ಕಿದ್ದು, ಎಡ ಪಕ್ಷಗಳು, ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೂ ಏನೂ ಉಪಯೋಗವಾಗುತ್ತಿಲ್ಲ. ಇನ್ನು ಒರಿಸ್ಸಾದಲ್ಲಿ ಬಿಜು ವಿರುದ್ಧದ ಕಾಂಗ್ರೆಸ್‌ ಜಾಗವನ್ನು ಬಿಜೆಪಿ ತೆಗೆದುಕೊಂಡಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್‌ ಹೇಳ ಹೆಸರಿಲ್ಲದ ಸ್ಥಿತಿಗೆ ತಲುಪಿದೆ. ಹೊಸ ರಾಜ್ಯಗಳಲ್ಲಿ ಬಿಜೆಪಿ ವ್ಯಾಪಿಸುತ್ತಿರುವ ಪರಿ ನೋಡಿದರೆ ಬಿಜೆಪಿಗೆ ರಾಷ್ಟ್ರೀಯ ರಾಜಕಾರಣದಲ್ಲಿ ಒಂದು ಸ್ಥಿರತೆ ಬರಬಹುದು.

ಬಿಜೆಪಿ ಗೆಲ್ಲಿಸಲು ಸಂಘ ಸನ್ನದ್ಧ

ಎಡ ಪಕ್ಷಗಳ ಭದ್ರ ಕೋಟೆಗಳಾಗಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ಅಧಿ​ಕಾರ ಹಿಡಿಯಬೇಕೆಂಬುದು ಆರ್‌ಎಸ್‌ಎಸ್‌ನ ಬಹು ದಿನಗಳ ಕನಸು. ಕೇರಳದಲ್ಲಿ ಸಂಘದ ಕೆಲಸ ಜೋರಾಗಿಯೇ ಇದ್ದರೂ ರಾಜಕೀಯ ಅವಕಾಶ ಸಿಕ್ಕಿದ್ದು ಕಡಿಮೆ. ಇನ್ನು ಬಂಗಾಳದಲ್ಲಿ ಸಂಘದ ಚಟುವಟಿಕೆ ಆದಿವಾಸಿ ಕ್ಷೇತ್ರದಲ್ಲಿ ಇದ್ದರೂ ಪೊಲಿಟಿಕಲ್‌ ಅವಕಾಶ ಕಡಿಮೆ ಇತ್ತು. ಆದರೆ ನಿಧಾನವಾಗಿ ಹಿಂದೂ ಮುಸ್ಲಿಂ ಧ್ರುವೀಕರಣ ಕಾರಣದಿಂದ ಒಳಗೆ ಹೊಕ್ಕು ಪ್ರಬಲವಾದ ಬಿಜೆಪಿಗೆ ಈಗ ಮಮತಾ ವಿರುದ್ಧದ ಆಡಳಿತ ವಿರೋಧಿ​ ಅಲೆಯ ಲಾಭವೂ ಸಿಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂಥ ರಾಜ್ಯಗಳಲ್ಲಿ ಬಿಜೆಪಿಗೆ ಸಂಘದ ಜಾಲವೇ ದೊಡ್ಡ ಶಕ್ತಿ. ಇದರಿಂದಾಗಿ ಸದ್ಯಕ್ಕಂತೂ ಬಿಜೆಪಿಗೆ ಹೊಸಬರನ್ನು ಅರಗಿಸಿಕೊಳ್ಳುವ ಶಕ್ತಿಯಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios