ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ, ಪಟಾಕಿ ಸಿಡಿಸುವುದರಿಂದ ಕಾಯಿಲೆಗಳು ಗುಣವಾಗುತ್ತವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಗಳಿಂದ ಪರಿಸರ, ಮಕ್ಕಳು, ಹಿರಿಯ ನಾಗರಿಕರು, ಮಕ್ಕಳಿಗೆ ತೊಂದರೆಯಾಗುತ್ತದೆ. ಪಟಾಕಿ ಸಿಡಿಸದೆ ದೀಪ ಬೆಳಗಿಸುವ ಮೂಲಕ ಹಬ್ಬ ಆಚರಿಸಲು ವೈದ್ಯರು ಹೇಳುತ್ತಾರೆ. ಆದರೆ ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷ(ಬಿಜೆಪಿ) ಶಾಸಕಿ ಪಾಪಿಯ ಅದಿಕಾರಿ(BJP MLA Papiya adhikari), 'ಪಟಾಕಿಗಳಿಂದ ಕೆಲವು ಕಾಯಿಲೆಗಳು ಗುಣವಾಗುತ್ತವೆ' ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ವಿವಾದವಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಪಾಪಿಯ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಹೇಳಿಕೆಯನ್ನ ಹಿಂದಕ್ಕೆ ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಈ ಬಗ್ಗೆ ರಾಜಧಾನಿ ಕೋಲ್ಕತ್ತಾದಲ್ಲಿ ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ನಮ್ಮ ಪೂರ್ವಜನರ ಕಾಲದಿಂದ ಈ ಸಂಪ್ರದಾಯದ ಬಗ್ಗೆ ಒಂದು ಮಾತಿದೆ. ಮೂಲಭೂತವಾಗಿ ಪಟಾಕಿ ಸಿಡಿಸುವುದು ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೂಡಿದೆ. ದೀಪಾವಳಿ ಎಂದರೆ ದೀಪಗಳ ಹಬ್ಬ, ದೀಪಗಳನ್ನ ಬೆಳಗಿಸುವ ಹಬ್ಬ. ಹಿಂದೆ ಯಜ್ಞಗಳನ್ನು ಮಾಡುವ ಮೂಲಕ ಮತ್ತು ದೀಪಗಳನ್ನು ಬೆಳಗಿಸುವ ಮೂಲಕ ದುಷ್ಟಶಕ್ತಿಗಳನ್ನು ನಿರ್ಮೂಲನೆ ಮಾಡಲಾಗುತ್ತಿತ್ತು. ಆದರೆ ಇಂದು ನಾವು ಯಜ್ಞಗಳನ್ನ ಮಾಡುವ ಕಾಲದಲ್ಲಿಲ್ಲ, ಪಟಾಕಿಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಅಂದಿಗೆ ಇಂದಿಗೆ ಹೋಲಿಸಿದರೆ ವಿಜ್ಞಾನವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಹೀಗಾಗಿ ನನ್ನ ಹೇಳಿಕೆ ಇಂದಿಗೆ ಸೂಕ್ತವಲ್ಲ ಎಂದೆನಿಸುತ್ತದೆ ಎಂದು ಬಿಜೆಪಿ ನಾಯಕಿ ಸ್ಪಷ್ಟಪಡಿಸಿದ್ದಾರೆ.
ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ
ಪಟಾಕಿಗಳಿಂದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಜಾರಾಗಿದ್ದರೆ, ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿರುವ ಶಾಸಕಿ ಪಾಪಿಯಾ ಅಧಿಕಾರಿ, ನಾನು ಹಾಗೆ ಹೇಳಿಕೆ ನೀಡಿರುವ ಉದ್ದೇಶವೆಂದರೆ ಹಿಂದೆ ನಮ್ಮ ಪೂರ್ವಜನರು ಸಾಮಾಜಿಕ ದುಷ್ಕೃತ್ಯಗಳನ್ನು ನಿರ್ಮೂಲನೆ ಮಾಡಲು ಬಳಸುತ್ತಿದ್ದರು. ಇಂದಿಗೂ ಅವುಗಳನ್ನು ನಿರ್ಮೂಲನೆ ಮಾಡಲು ಬಳಸಬಹುದು ಎಂದು ಅವರು ಹೇಳಿದರು.
ಪಾಪಿಯ ಅಧಿಕಾರಿ ನೀಡಿದ ವಿವಾದಾತ್ಮಕ ಹೇಳಿಕೆ ಏನು?
ಪಶ್ಚಿಮ ಬಂಗಾಳದ ಟಾಲಿಗಂಜ್ನ ಬಿಜೆಪಿ ಶಾಕಿಯಾಗಿರುವ ಪಾಪಿಯ ಅಧಿಕಾರಿ ಅವರು ತಮ್ಮ ಕ್ಷೇತ್ರದಲ್ಲಿ ನಡೆದ ಕಾಳಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿ ಈ ವಿವಾದಾತ್ಮಕ ಹೇಳಿಕೆ ನೀಡಿದರು. ಅವರ ಭಾಷಣ ಆರಂಭವಾಗುತ್ತಿದ್ದಂತಯೇ ಸ್ಥಳದಲ್ಲಿ ಪಟಾಕಿ ಸಿಡಿಸಲಾಯಿತು ಕೂಡ.
'ನಮ್ಮ ಮುಖ್ಯಮಂತ್ರಿಗಳು ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುತ್ತೇವೆ ಎಂದು ಹೇಳಿದ್ದಾರೆ. ಪಟಾಕಿ ಇಲ್ಲದೆ ಕಾಳಿ ಪೂಜೆ ಹೇಗೆ ಪೂರ್ಣಗೊಳ್ಳುತ್ತದೆ? ನಾವು ಖಂಡಿತವಾಗಿ ಪಟಾಕಿ ಸಿಡಿಸುತ್ತೇವೆ. ಆದ್ರೂ ನಾವು ಪೊಲೀಸ್ ಇಲಾಖೆ ಮಾರ್ಗಸೂಚಿಗಳು ಪಾಲಿಸುತ್ತೇವೆ. ಮಾರ್ಗಸೂಚಿಯಂತೆಯೇ ಹಸಿರು ಪಟಾಕಿ ಸಿಡಿಸುತ್ತೇವೆ. ಪಟಾಕಿ ಸಿಡಿಸುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ' ಎಂದು ಇದೇ ವೇಳೆ ಹೇಳಿದರು. ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.














