ಜಾತಿ ಗಣತಿ ವರದಿ ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್‌ ಹೆಗ್ಡೆ ಅವರು ನೀಡುವ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

We will receive the caste census report Says CM Siddaramaiah gvd

ಬೆಂಗಳೂರು (ಅ.30): ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್‌ ಹೆಗ್ಡೆ ಅವರು ನೀಡುವ ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಭಾನುವಾರ ವಸಂತನಗರದ ಡಿ.ದೇವರಾಜ ಅರಸು ಭವನದಲ್ಲಿ ಕಾಳಿದಾಸ ಹೆಲ್ತ್‌ ಅಂಡ್‌ ಎಜುಕೇಷನ್‌ ಟ್ರಸ್ಟ್‌ ಮತ್ತು ಅಹಿಲ್ಯಾ ಫೌಂಡೇಷನ್‌ನಿಂದ ಆಯೋಜಿಸಿದ್ದ ಪ್ರೇರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲೇ ಮೊದಲು ಜಾತಿ ಗಣತಿ ಮಾಡಿದ್ದು ಹಿಂದಿನ ನಮ್ಮ ಸರ್ಕಾರ. ಪ್ರತಿ ಜಾತಿಯ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಗಣತಿ ಮಾಡಿಸಿದ್ದೆ. ಆದರೆ ನಂತರ ಬಂದ ಸರ್ಕಾರಗಳು ವರದಿಯನ್ನು ಸ್ವೀಕರಿಸಿರಲಿಲ್ಲ. ಈಗ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್‌ ಹೆಗ್ಡೆ ಅವರು ಜಾತಿ ಗಣತಿ ವರದಿ ನೀಡುತ್ತಾರೆ. ಸರ್ಕಾರ ಅದನ್ನು ಸ್ವೀಕರಿಸಲಿದೆ ಎಂದು ತಿಳಿಸಿದರು.

50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ

ಪ್ರತಿಭೆ ಯಾವುದೇ ಜಾತಿಗೆ ಸೀಮಿತವಲ್ಲ: ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಪ್ರತಿಭೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅವಕಾಶ ಲಭಿಸಿದರೆ, ಶಿಕ್ಷಣದ ಅನುಕೂಲ ಸಿಕ್ಕರೆ ಎಲ್ಲರೂ ಮೇಧಾವಿಗಳಾಗಿ ಅವರ ಪ್ರತಿಭೆ ಹೊರಬರುತ್ತದೆ. ಸ್ವಾಭಿಮಾನಿಯಾಗಲು, ಉತ್ತಮ ಪ್ರಜೆಯಾಗಲು ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಎಲ್ಲರೂ ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಪಡೆಯಲು ಸಹಕರಿಸಿ ಎಂದು ಕರೆ ನೀಡಿದರು.

ನಾನು ಬಿಎಸ್ಸಿ ಅಭ್ಯಾಸ ಮಾಡುವಾಗ ಹೋಟೆಲ್‌ನಿಂದ ಸಾಂಬಾರು ತಂದು ರೂಮಿನಲ್ಲಿ ಅನ್ನ ಮಾಡಿಕೊಂಡು ಊಟ ಮಾಡಬೇಕಿತ್ತು. ಇಂತಹ ಸ್ಥಿತಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿರುವುದರಿಂದ ಅವರಿಗೆ ಅನುಕೂಲವಾಗಲಿ ಎಂದು ವಿದ್ಯಾಸಿರಿ ಕಾರ್ಯಕ್ರಮ ಜಾರಿಗೆ ತಂದೆ. ನಮಗೆ ಸಹಕರಿಸಿದ ಸಮಾಜದ ಪರವಾಗಿ ನಾವು ಶ್ರಮಿಸಬೇಕು. ಶ್ರಮ ಮತ್ತು ಗುರಿ ಇಲ್ಲದೇ ಹೋದರೆ ಏನನ್ನೂ ಸಾಧಿಸಲು ಆಗುವುದಿಲ್ಲ ಹೇಳಿದರು.

ಚರಿತ್ರೆ ಅರ್ಥ ಮಾಡಿಕೊಳ್ಳಿ: ಬ್ರಿಟೀಷರು ಭಾರತಕ್ಕೆ ಬರುವ ಮೊದಲು ಶೂದ್ರ ಸಮುದಾಯಗಳಿಗೆ ಶಿಕ್ಷಣ, ವಿದ್ಯೆ ನಿಷೇಧಿಸಲಾಗಿತ್ತು‌. ಮುಂದುವರೆದ ಜಾತಿಗಳ ಹೆಣ್ಣು ಮಕ್ಕಳಿಗೂ ಮೊದಲು ವಿದ್ಯಾಭ್ಯಾಸ ಮಾಡಿಸುವಂತಿರಲಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್ ಅವರು ಶೂದ್ರ ಸಮುದಾಯ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಿದರು. ಈ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯ ಹುದ್ದೆಗಳು ಹೆಚ್ಚಾಗಿದ್ದು ವೈದ್ಯರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಖಾಲಿ ಹುದ್ದೆಗಿಂತ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಖಾಲಿ ಇರುವ ಗ್ರಾಮೀಣ ವೈದ್ಯ ಹುದ್ದೆಗಳನ್ನಷ್ಟೇ ಭರ್ತಿ ಮಾಡಲು ನಿರ್ಧರಿಸಿ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ತಂದಿತು ಎಂದು ಸ್ಪಷ್ಟಪಡಿಸಿದರು.

ಸಮುದಾಯದಿಂದ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎನ್ನುವುದು ಅವೈಜ್ಞಾನಿಕವಾಗಿದೆ. ವೈದ್ಯಕೀಯ ಕಾಲೇಜು ಮುನ್ನಡೆಸುವುದು ದುಬಾರಿಯಾಗುತ್ತದೆ. ಬಡವರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಿ ನೆರವಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ಯಾರಾ ಮೆಡಿಕಲ್ ಕಾಲೇಜುಗಳು, ಹಾಸ್ಟೆಲ್, ಐಟಿಐಗಳನ್ನು ಸಮಾಜದಿಂದ ಆರಂಭಿಸಿದರೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.

ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ: ನಿಕ್ಲೆಗ್ ನಮಸ್ಕಾರ, ಎಂಚ ಉಲ್ಲರ್ ಎಂದ ಸಿದ್ಧರಾಮಯ್ಯ

ಇದೇ ಸಂದರ್ಭದಲ್ಲಿ ಕುರುಬ ಸಮುದಾಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕನಕ ಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಾಳಿದಾಸ ಹೆಲ್ತ್‌ ಅಂಡ್‌ ಎಜುಕೇಷನ್‌ ಟ್ರಸ್ಟ್‌ ಮತ್ತು ಅಹಿಲ್ಯಾ ಫೌಂಡೇಷನ್‌ ಸಂಸ್ಥಾಪಕ ಟ್ರಸ್ಟಿಗಳಾದ ಡಾ.ಎಸ್‌.ಪರಮೇಶ್‌, ಡಾ.ವಿಜಯಲಕ್ಷ್ಮೀ ಪರಮೇಶ್‌, ಪಾಲಿಕೆ ಮಾಜಿ ಸದಸ್ಯ ಬಿ.ಎನ್.ನಿತೀಶ್ ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios