ಅಪ್ಪನ ಹೆಸರಿಲ್ಲದಿದ್ದರೆ ಪ್ರಿಯಾಂಕ್ ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಅರ್ಹರಲ್ಲ ಎಂದ ಅವರು, ದಲಿತರ ಪರ ಹೋರಾಡದ ಮತ್ತು ಒಳ ಮೀಸಲಾತಿ ಬಗ್ಗೆ ಮಾತನಾಡದ ಖರ್ಗೆಯವರನ್ನು ಟೀಕಿಸಿದ್ದಾರೆ.
ಬೆಂಗಳೂರು: ಅಪ್ಪನ ಹೆಸರು ಜೊತೆಯಲ್ಲಿ ಇಲ್ಲದೇ ಇದ್ದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಅರ್ಹರಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಅವರಿಗೆ ಮಾಡಲು ಬೇರೇನೂ ಕೆಲಸವಿಲ್ಲ. ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಲ್ಲ. ಅಂಬೇಡ್ಕರ್ ಹೆಸರು ಹೇಳುತ್ತಾರೆಯೇ ಹೊರತು ದಲಿತತ್ವ ಅವರ ಕುಟುಂಬದಲ್ಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಅವರು ರಾಜಕಾರಣಿಯೇ ಅಲ್ಲ. ಅಪ್ಪನ ನೆರಳಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ. ಅವರ ತಳಬುಡ ಎಲ್ಲಾ ನನಗೆ ಗೊತ್ತಿದೆ ಎಂದರು.
ನಮ್ಮ ಅಪ್ಪ ರಾಜಕಾರಣಿ ಅಲ್ಲ. ಓದು ಬರಹ ತಿಳಿದವರಲ್ಲ
ಕೆಣಕಿದರೆ ಕೊಣಕುವುದಾಗಿ ಹಲವು ಬಾರಿ ಹೇಳಿರುವುದಾಗಿ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದರು. ನಮ್ಮ ಅಪ್ಪ ರಾಜಕಾರಣಿ ಅಲ್ಲ. ಓದು ಬರಹ ತಿಳಿದವರಲ್ಲ. ಹಳ್ಳಿಯಲ್ಲಿ ಹುಟ್ಟಿ ಇವತ್ತು ಸ್ವಯಾರ್ಜಿತವಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅವರದು ಪಿತ್ರಾರ್ಜಿತ ರಾಜಕಾರಣ. ನಾನು ಬಿಜೆಪಿಯುಲ್ಲಿ ಈ ಮಟ್ಟಕ್ಕೆ ಬೆಳೆದಿರುವುದನ್ನು ಸಹಿಸದೇ ಪ್ರಿಯಾಂಕ್ ಅವರು ಟೀಕೆ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಯಾವ ಶಾಸಕರಾದರೂ 5 ಲಕ್ಷ ತೆಗೆದುಕೊಳ್ತಾರಾ? ಚಂದ್ರು ಲಮಾಣಿ ಪರ ಶ್ರೀರಾಮುಲು ಬ್ಯಾಟಿಂಗ್
ಫೋಟೊಗೆ ಚಪ್ಪಲಿ ಏಟು
ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ಕೆಲಸ ಮಾಡಿಲ್ಲ. ಚಾಮರಾಜನಗರ, ಮೈಸೂರು. ರಾಯಚೂರು, ಕಲಬುರಗಿಯಲ್ಲಿ ಅವರ ಫೋಟೊಗೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದಾರೆ. ಈ ಸರ್ಕಾರ ದಲಿತರ 39 ಸಾವಿರ ಕೋಟಿ ರು. ನುಂಗಿದರೂ ಒಂದು ಮಾತನಾಡದೆ ಸಮರ್ಥಿಸಿಕೊಂಡರು. ಒಳ ಮೀಸಲಾತಿ ಬಗ್ಗೆ ಚಲಾರ ಎತ್ತಲಿಲ್ಲ. ಒಳಮೀಸಲಾತಿ ವಿಚಾರದಲ್ಲಿ ಜನಾಂಗಗಳ ಲೋಪ ಇಲ್ಲ. ಅದು ಸರ್ಕಾರದ ಲೋಪವಾಗಿದ್ದು, ಸರ್ಕಾರವೇ ಸರಿಪಡಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಇದನ್ನೂ ಓದಿ: ₹5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್‌ನಲ್ಲಿ ಲೋಕಾ ಖೆಡ್ಡಾಕ್ಕೆ!


