Rajya Sabha Election: ನಾವು ಯಾರನ್ನೂ ಹೈಜಾಕ್‌ ಮಾಡಿಲ್ಲ: ಡಿಕೆಶಿ

‘ನಾವು ಯಾರನ್ನೂ ಹೈಜಾಕ್‌ ಮಾಡಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ. ನಾವು ಹೈಜಾಕ್‌ ಮಾಡಬೇಕೆಂದಿದ್ದರೆ ಜೆಡಿಎಸ್‌ನ ಡಜನ್‌ ಶಾಸಕರು ಸಿದ್ಧವಿದ್ದರು. ಆದರೆ, ನಾವು ಅವರಿಗೆ ಏನು ಸಲಹೆ ನೀಡಿದ್ದೇವೆ ಎಂದು ಅವರನ್ನೇ ಕೇಳಲಿ.’

we need not hijack jds mlas says dk shivakumar over rajya sabha election gvd

ಬೆಂಗಳೂರು (ಜೂ.11): ‘ನಾವು ಯಾರನ್ನೂ ಹೈಜಾಕ್‌ ಮಾಡಿಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ. ನಾವು ಹೈಜಾಕ್‌ ಮಾಡಬೇಕೆಂದಿದ್ದರೆ ಜೆಡಿಎಸ್‌ನ ಡಜನ್‌ ಶಾಸಕರು ಸಿದ್ಧವಿದ್ದರು. ಆದರೆ, ನಾವು ಅವರಿಗೆ ಏನು ಸಲಹೆ ನೀಡಿದ್ದೇವೆ ಎಂದು ಅವರನ್ನೇ ಕೇಳಲಿ.’ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಶಾಸಕರನ್ನು ಹೈಜಾಕ್‌ ಮಾಡಿದ್ದಾರೆ ಎಂಬ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೀಡಿದ ತಿರುಗೇಟು ಇದು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್‌ ಶಾಸಕರನ್ನು ಹೈಜಾಕ್‌ ಮಾಡುವ ಅಗತ್ಯ ನಮಗೆ ಇಲ್ಲ. ಬೇರೆಯವರಿಗೆ ಮುಜುಗರ ಮಾಡುವುದು ನಮಗೆ ಬೇಕಿಲ್ಲ. ನಮ್ಮ ಪಕ್ಷದ 69 ಮಂದಿಗೆ ವಿಪ್‌ ನೀಡಿದ್ದೆವು. ಅವರೆಲ್ಲರೂ ನಮಗೇ ಹಾಕಿದ್ದಾರೆ. ಅದನ್ನು ನಾನು ಕಣ್ಣಲ್ಲಿ ನೋಡಿದ್ದೇನೆ. ನನಗೆ ಅಷ್ಟುಸಾಕು. ಬೇರೆಯವರ ವಿಚಾರ ನಾನು ಮಾತಾಡುವುದಿಲ್ಲ ಎಂದು ಹೇಳಿದರು.

ಅಂಬೆಡ್ಕರ್‌ರನ್ನು ಕಡೆಗಣಿಸಿ BJP ಸರಕಾರ ವಿಕೃತಿ ಮೆರೆದಿದೆ; DK Shivakumar

ಜೆಡಿಎಸ್‌ ಮುಖಂಡ ಎಚ್‌.ಡಿ. ರೇವಣ್ಣ ಮತಪತ್ರ ತೋರಿಸಿದ ಬಗ್ಗೆ ಪ್ರತಿಕ್ರಿಯಿಸಿ, ನಾನು ಒಂದು ಪಕ್ಷದ ಮತಗಟ್ಟೆ ಏಜೆಂಟ್‌ ಆಗಿ ಗೌಪ್ಯ ಮತದಾನ ಪ್ರಕ್ರಿಯೆ ಬಗ್ಗೆ ಮಾತಾಡುವ ಹಕ್ಕಿಲ್ಲ, ಅದು ಸರಿಯೂ ಅಲ್ಲ. ನಾನು ಕಣ್ಣಲ್ಲಿ ಕಂಡಿದ್ದು ಮಾತ್ರ ಹೇಳಬಹುದು. ಬೇರೆ ಪಕ್ಷದ ಯಾರೂ ನನಗೆ ಮತಪತ್ರ ತೋರಿಸಿಲ್ಲ. ರೇವಣ್ಣನವರ ವಿಚಾರಕ್ಕೆ ಎರಡೂ ಪಕ್ಷದವರೂ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಗೌಪ್ಯ ಮತದಾನದ ಬಗ್ಗೆ ನಾನು ಮಾತಾಡುವುದಿಲ್ಲ, ನನಗೆ ಹಕ್ಕೂ ಇಲ್ಲ ಎಂದರು.

ಶ್ರೀನಿವಾಸಗೌಡ ಅಡ್ಡ ಮತ ಗೊತ್ತಿಲ್ಲ: ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ನೀಡಿದ್ದಾರಂತಲ್ಲ ಎಂಬ ಪ್ರಶ್ನೆಗೆ, ‘ಬೇರೆಯವರ ವಿಚಾರ ನನಗೆ ಗೊತ್ತಿಲ್ಲ. ನನಗೆ ಬೇರೆ ಯಾರೂ ಮತಪತ್ರ ತೋರಿಸಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತಾಡುವುದಿಲ್ಲ. ಅವರಿಗೆ ಆತ್ಮಸಾಕ್ಷಿ ಮತ ನೀಡಿ ಎಂದು ಕೇಳಿದ್ದೆವು. ಅವರೇನು ಮಾಡಿದ್ದಾರೋ, ಬೇರೆಯವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ಹೇಗೆ ಮಾತನಾಡಲಿ’ ಎಂದು ಹೇಳಿದರು.

ಶ್ರೀನಿವಾಸಗೌಡರು ನಮ್ಮ ಉತ್ತಮ ಸ್ನೇಹಿತರು. ಬಹಳ ಬೇಕಾದವರು. ವಿಧಾನಸಭೆಯಲ್ಲಿ ನಾವು ಧರಣಿ ಮಾಡಿದಾಗ ನಮ್ಮ ಜತೆ ಸೇರಿ ಹೋರಾಟ ಮಾಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮಗೇ ಬಹಳ ಸಹಾಯ ಮಾಡಿದ್ದಾರೆ. ನಿನ್ನೆ ನನ್ನ ಮನೆಗೂ ಬಂದು ಭೇಟಿ ಮಾಡಿದ್ದರು. ಹಿಂದೆ ಆಫೀಸಿಗೂ ಬಂದಿದ್ದರು. ಆದರೆ ಮತದಾನದ ವಿಚಾರದಲ್ಲಿ ಅವರೇನು ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.

ಜೆಡಿಎಸ್‌ ಜತೆ ಖರ್ಗೆ ರಾಜ್ಯಸಭೆ ಸಂಧಾನ ಚರ್ಚೆ ನಡೆಸಿಲ್ಲ: ರಾಜ್ಯಸಭೆ ಎರಡನೇ ಅಭ್ಯರ್ಥಿ ವಿಚಾರವಾಗಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾರೊಂದಿಗೂ ಸಂಧಾನ ಮಾತುಕತೆ ಮಾಡಿಲ್ಲ. ಅನಗತ್ಯವಾಗಿ ಅವರನ್ನು ಈ ವಿಚಾರದಲ್ಲಿ ಎಳೆದು ತರಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಭ್ಯರ್ಥಿ ಸ್ಪರ್ಧೆ ಸಾಮೂಹಿಕ ನಿರ್ಧಾರವಾಗಿದೆ. ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಗುರಿ ಎಂದರು.

Karnataka Politics: ದೇವೇಗೌಡ ಬಿಟ್ಟ ದಾಳದಿಂದ ಸಿದ್ದು, ಡಿಕೆಶಿ ದಿಢೀರ್‌ ಒಗ್ಗಟ್ಟು!

ನಾವು ಆತ್ಮಸಾಕ್ಷಿ ಮತ ಹಾಗೂ ಜಾತ್ಯತೀತ ಭಾವನೆ ಹೊಂದಿರುವವರು ನಮಗೆ ಮತ ನೀಡಬೇಕು ಎಂದು ಕೇಳಿದ್ದೇವೆ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ ಹರಿಪ್ರಸಾದ್‌ ಹಾಗೂ ರಾಷ್ಟ್ರ ನಾಯಕರು ಸೇರಿ ಪಕ್ಷದಿಂದ 2ನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆವು. ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ಜತೆ ಸಂಧಾನ ಸಭೆ ನಡೆಸಿದ್ದಾರೆ ಎಂಬುದು ಸುಳ್ಳು. ಅವರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ.

ಪಕ್ಷ ಏನು ಹೇಳಿದೆಯೋ ಅದನ್ನು ನಾವೆಲ್ಲರೂ ಒಟ್ಟಾಗಿ ಪಾಲಿಸುತ್ತಿದ್ದೇವೆ. ಅವರನ್ನು ಅನಗತ್ಯವಾಗಿ ಈ ವಿಚಾರದಲ್ಲಿ ಎಳೆದು ತರಬಾರದು ಎಂದು ಸ್ಪಷ್ಟಪಡಿಸಿದರು. ನಮ್ಮ ಗೌರವ ನಾವು ಉಳಿಸಿಕೊಳ್ಳಬೇಕು. ಯಾರು ಏನೇನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಬಿತ್ತರಿಸಿವೆ. ಯಾರು ಯಾವ ಭಾಷೆ ಬಳಸಿದ್ದಾರೆ ಎಂಬುದನ್ನೂ ಜನ ನೋಡಿದ್ದಾರೆ. ನಾವು ಯಾರ ಹೆಸರನ್ನೂ ಹೇಳುವುದಿಲ್ಲ ಎಂದರು.

Latest Videos
Follow Us:
Download App:
  • android
  • ios