ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಒಂದು ವಾರ ಕಾದು ನೋಡಿ: ಪರಮೇಶ್ವರ್
ಭರವಸೆಗಳು ನಮ್ಮ ಪಕ್ಷದ ಸುಳ್ಳು ಭರವಸೆಗಳಲ್ಲ. ನುಡಿದಂತೆ ನಡೆಯಲು ಘೋಷಣೆ ಮಾಡಿದ್ದೇವೆ. ಮೊದಲ ಸಂಪುಟ ಸಭೆಯಲ್ಲಿಯೇ ಇವುಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಜೂನ್ 1ರಂದು ಸಚಿವ ಸಂಪುಟ ಸಭೆ ಇದೆ. ಕಾದು ನೋಡಿ: ಜಿ.ಪರಮೇಶ್ವರ್
ಮಾಗಡಿ/ರಾಮನಗರ(ಮೇ.31): ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿಗಳನ್ನು ನಾವು ಕೊಟ್ಟಿದ್ದೇವೆ. ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಕಮಿಟಿಗೆ ನಾನೇ ಅಧ್ಯಕ್ಷನಾಗಿದ್ದೆ. ದೇವರ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ. ಆ ಐದೂ ಭರವಸೆಗಳನ್ನು ಈಡೇರಿಸಿ ತೋರಿಸುತ್ತೇವೆ. ಕೇವಲ ಒಂದು ವಾರ ಕಾದು ನೋಡಿ ಸಾಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಮಾಗಡಿ ತಾಲೂಕಿನ ಹೆಬ್ಬಾಳಲು ಗ್ರಾಮದಲ್ಲಿರುವ ತಮ್ಮ ಮನೆ ದೇವರಾದ ಮುಳುಕಟ್ಟಮ್ಮ ದೇವಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ಪೂಜೆ ಸಲ್ಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆ ಭರವಸೆಗಳು ನಮ್ಮ ಪಕ್ಷದ ಸುಳ್ಳು ಭರವಸೆಗಳಲ್ಲ. ನುಡಿದಂತೆ ನಡೆಯಲು ಘೋಷಣೆ ಮಾಡಿದ್ದೇವೆ. ಮೊದಲ ಸಂಪುಟ ಸಭೆಯಲ್ಲಿಯೇ ಇವುಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಜೂನ್ 1ರಂದು ಸಚಿವ ಸಂಪುಟ ಸಭೆ ಇದೆ. ಕಾದು ನೋಡಿ. ಈ ಭರವಸೆಗಳನ್ನು ಈಡೇರಿಸಲು 40 ರಿಂದ 50 ಸಾವಿರ ಕೋಟಿ ರುಪಾಯಿ ಖರ್ಚಾಗಲಿದೆ. ಆ ಹಣವನ್ನು ಒದಗಿಸುವ ಬುದ್ಧಿವಂತಿಕೆ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.
Congress Guarantee: ಹಂತ ಹಂತವಾಗಿ ಗ್ಯಾರಂಟಿ ಜಾರಿ?
ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದ ಅವರು, ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿ ನಾವು ತಲೆತಗ್ಗಿಸುವಂತಹ ಕೆಲಸ ಮಾಡಿತು. ಈಗ ಅವರು ನಮಗೆ ಪಾಠ ಹೇಳಿಕೊಡುವುದು ಬೇಡ. ಈ ಹಿಂದೆ ಜೆಡಿಎಸ್ಗೂ ಅಧಿಕಾರ ನಡೆಸಲು ನಾಡಿನ ಜನ ಅವಕಾಶ ನೀಡಿದ್ದರು. ಕುಮಾರಸ್ವಾಮಿಯವರ ಕೈಗೆ ಅಧಿಕಾರ ನೀಡಿದಾಗ ಕೇವಲ 14 ತಿಂಗಳು ಆಡಳಿತ ನಡೆಸಿ, ನಮ್ಮ ಕೈಯಲ್ಲಿ ಆಗಲ್ಲಎಂದು ಬಿಟ್ಟು ಹೋದರು. ಅವರ ಕೆಟ್ಟಆಡಳಿತ ನೋಡಿ ಜನರು ಬುದ್ದಿ ಕಲಿಸಿದ್ದಾರೆ. ಈಗ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.