Congress Guarantee: ಹಂತ ಹಂತವಾಗಿ ಗ್ಯಾರಂಟಿ ಜಾರಿ?
ಐದೂ ಇಲಾಖೆಗಳ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ನೀಡಿರುವ ಅಭಿಪ್ರಾಯದ ಜೊತೆ ತಾಳೆಹಾಕಿರುವ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲ ಸಚಿವರ ಸಹಮತ ಪಡೆದು ಯೋಜನೆಗಳ ಜಾರಿಗೆ ಅಧಿಕೃತ ನಿರ್ಧಾರ ಕೈಗೊಳ್ಳಲಿದ್ದಾರೆ.
ಬೆಂಗಳೂರು(ಮೇ.31): ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಜೂ.1ರಂದು ನಡೆಯುವ ಎರಡನೇ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಕಸರತ್ತು ಮುಂದುವರೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಮ್ಮ ಸಂಪುಟದ ಎಲ್ಲ ಸಚಿವರೊಂದಿಗೂ ಚರ್ಚಿಸಲು ಪೂರ್ವಭಾವಿ ಸಭೆ ಕರೆದಿದ್ದಾರೆ. ಈ ವೇಳೆ ಹಂತ ಹಂತವಾಗಿ ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸೋಮವಾರ ಮತ್ತು ಮಂಗಳವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಗ್ಯಾರಂಟಿಗಳ ಜಾರಿ ವಿಚಾರವಾಗಿ ಪಡೆದಿರುವ ಮಾಹಿತಿ, ಹಣಕಾಸಿನ ಲೆಕ್ಕಾಚಾರ, ಉದ್ಭವಿಸಿರುವ ಕೆಲ ಗೊಂದಲ, ತೊಡಕುಗಳ ಬಗ್ಗೆ ಮುಖ್ಯಮಂತ್ರಿ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಲಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಬಂಧಿಸಿದ ಐದು ಇಲಾಖೆಗಳ ಸಚಿವರು ಕೂಡ ತಮ್ಮ ಇಲಾಖಾ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿ ಮುಖ್ಯಮಂತ್ರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಈ ಎಲ್ಲಾ ಸಲಹೆ ಸೂಚನೆಗಳನ್ನು ಪೂರ್ಣ ಸಂಪುಟದ ಮುಂದಿಟ್ಟು ಇತರೆ ಸಚಿವರುಗಳಿಂದಲೂ ಮುಖ್ಯಮಂತ್ರಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಗ್ಯಾರೆಂಟಿ ಯೋಜನೆ ಜಾರಿಗೆ ಸರ್ಕಸ್, ನಂಗೂ ಫ್ರೀ ನಿಂಗೂ ಫ್ರೀ ಹೇಳಿಕೆಯಿಂದ ಪೇಚಿಗೆ ಸಿಲುಕಿತಾ ಕಾಂಗ್ರೆಸ್?
ಐದೂ ಇಲಾಖೆಗಳ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ನೀಡಿರುವ ಅಭಿಪ್ರಾಯದ ಜೊತೆ ತಾಳೆಹಾಕಿರುವ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲ ಸಚಿವರ ಸಹಮತ ಪಡೆದು ಯೋಜನೆಗಳ ಜಾರಿಗೆ ಅಧಿಕೃತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಈ ಮಹತ್ವದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಎಷ್ಟುಅನುದಾನ ಬೇಕಾಗುತ್ತದೆ? ಇದರಿಂದ ಬೊಕ್ಕಸಕ್ಕಾಗುವ ಹೊರೆ ಎಷ್ಟು? ಬೃಹತ್ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಮೇಲಾಗುವ ಹಣಕಾಸಿನ ಪರಿಣಾಮಗಳೇನು? ಈ ಹೊರೆಯನ್ನು ಸರಿದೂಗಿಸಲು ಮುಂದಿನ ಜುಲೈನ ಬಜೆಟ್‌ನಲ್ಲಿ ಯಾವೆಲ್ಲಾ ಮೂಲಗಳಿಂದ ತೆರಿಗೆ ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ಹಂತ ಹಂತವಾಗಿ ಜಾರಿ?:
ಬಳಿಕವಷ್ಟೇ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಐದೂ ಯೋಜನೆಗಳನ್ನೂ ಅಧಿಕೃತವಾಗಿ ಜಾರಿಗೊಳಿಸುವುದೇ ಅಥವಾ ಮೊದಲು ಅಷ್ಟೇನೂ ಗೊಂದಲಗಳಾಗದ ಎರಡು-ಮೂರು ಗ್ಯಾರಂಟಿಗಳನ್ನು ಜಾರಿಗೊಳಿಸಿ, ತೊಡಕುಗಳು ಹೆಚ್ಚಿರುವ ಕೆಲ ಗ್ಯಾರಂಟಿಗಳ ಜಾರಿಗೆ ಇನ್ನಷ್ಟುಸಮಯ ತೆಗೆದುಕೊಳ್ಳುವುದೇ ಎಂಬ ಬಗ್ಗೆ ಒಂದು ಒಮ್ಮತದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಅತ್ತೆ ಒಪ್ಪಿದಲ್ಲಿ ಮಾತ್ರ ಸೊಸೆಗೆ ಕಾಂಗ್ರೆಸ್ ಗ್ಯಾರಂಟಿ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸೋಮವಾರ ಆರ್ಥಿಕ ಇಲಾಖೆಯೂ ಸೇರಿದಂತೆ ಗ್ಯಾರಂಟಿ ಯೋಜನೆಗಳ ಜಾರಿ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ವಿವರವಾದ ಮಾಹಿತಿ ಪಡೆದುಕೊಂಡಿದ್ದ ಮುಖ್ಯಮಂತ್ರಿ ಅವರು, ಮಂಗಳವಾರ ಕೂಡ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳ ಜಾರಿಗೆ ಉದ್ಭವಿಸಿರುವ ಕೆಲ ಸಮಸ್ಯೆ, ಸವಾಲುಗಳನ್ನು ನಿವಾರಿಸಲು ಷರತ್ತುಗಳನ್ನು ವಿಧಿಸುವುದು ಸೇರಿದಂತೆ ಇತರೆ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ಪಡೆದರು.
ಮೇ 20ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಡೆಸಿದ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಮತ್ತು ಶಕ್ತಿಯೋಜನೆ ಈ ಐದೂ ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿದ್ದ ಸಿದ್ದರಾಮಯ್ಯ ಅವರು ಮುಂದಿನ ಅಥವಾ ಎರಡನೇ ಸಚಿವ ಸಂಪುಟ ಸಭೆಯ ದಿನದಿಂದಲೇ ಐದೂ ಯೋಜನೆಗಳನ್ನು ಅಧಿಕೃತವಾಗಿ ಜಾರಿಗೆ ತರುವುದಾಗಿ ಘೋಷಿಸಿದ್ದರು. ಅದರಂತೆ ಗುರುವಾರ ನಡೆಯುವ ಪೂರ್ಣ ಪ್ರಮಾಣದ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ತೀರ್ಮಾನ ಕೈಗೊಂಡು ಅನುಷ್ಠಾನಗೊಳಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.