JDS ತೊರೆದು BJP ಸೇರಿದ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

Basavaraj Horatti Joins BJP: ಜೆಡಿಎಸ್‌ನ ಹಿರಿಯ ನಾಯಕ, ಏಳು ಬಾರಿ ಶಾಸಕ ಮತ್ತು ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಪಕ್ಷ ತೊರೆದು ಬಿಜೆಪಿಗೆ ಇಂದು ಸೇರ್ಪಡೆಯಾಗಿದ್ದಾರೆ

Vidhan Parishat chairman Basavaraj Horatti joins BJP

ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರ ನೇತೃತ್ವದಲ್ಲಿ ಇಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಭಾರತೀಯ ಜನತಾ ಪಕ್ಷ ಸೇರಿದ್ದಾರೆ. ಜೆಡಿಎಸ್‌ ಪಕ್ಷದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿಯವರು ಸರಳ ಮತ್ತು ಸಜ್ಜನ  ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ಪಕ್ಷಾತೀತವಾಗಿ ಅವರನ್ನು ರಾಜಕೀಯ ನಾಯಕರು ಗೌರವಿಸುತ್ತಾರೆ. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅವರು, ಜೆಡಿಎಸ್‌ ಪಕ್ಷದ ಮೇಲೆ ನನಗೆ ಅಪಾರ ಗೌರವವಿದೆ, ಆದರೆ ಮತದಾರರ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದ್ದೇನೆ ಎಂದರು. 

ಹೊರಟ್ಟಿ ಸೇರ್ಪಡೆಯಾದ ಬಳಿಕ ಸಂತಸ ವ್ಯಕ್ತಪಡಿಸಿದ ಸಚಿವ ಆರ್‌ ಅಶೋಕ್‌ (R Ashoka), ಹೊರಟ್ಟಿಯವರು ಹಿರಿಯ ಶಾಸಕರು. ತುಂಬಾ ಸರಳ ಮತ್ತು ಸಜ್ಜನ ರಾಜಕಾರಣಿ ಹೊರಟ್ಟಿಯವರ ಸೇರ್ಪಡೆಯಿಂದ ಬಿಜೆಪಿ ಪಕ್ಷದ ವರ್ಚಸ್ಸು ಇನ್ನಷ್ಟು ಹೆಚ್ಚಲಿದೆ ಎಂದಿದ್ದಾರೆ. ಇದು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. 

"

ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಅಖಾಡ ಈಗಾಗಲೇ ಗರಿಗೆದರಿದ್ದು, ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರೂ ಪಕ್ಷಗಳೂ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಒಂದೆಡೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಶಾಸಕರು ಮತ್ತೆ ಪಕ್ಷಕ್ಕೆ ವಾಪಸಾಗುವ ಸಾಧ್ಯತೆ ಕಾಣುತ್ತಿದೆ. ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಎಂಟಿಬಿ ನಾಗರಾಜ್‌, ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರಿ ತಪ್ಪು ಮಾಡಿದೆ ಎಂಬ ಹೇಳಿಕೆ ನೀಡಿದ್ದರು. ಅವರು ಚುನಾವಣೆ ವೇಳೆಗೆಲ್ಲಾ ಮತ್ತೆ ಕಾಂಗ್ರೆಸ್‌ಗೆ ಬರುತ್ತಾರ ಎಂಬ ಪ್ರಶ್ನೆ ಈ ಹೇಳಿಕೆಯಿಂದ ಉದ್ಭವವಾಗಿದೆ. ಅದೇ ರೀತಿ ಇನ್ನೊಂದೆಡೆ ಜೆಡಿಎಸ್‌ ನಾಯಕ ಹೊರಟ್ಟಿ ಬಿಜೆಪಿಗೆ ಸೇರಿದ್ದಾರೆ. ಚುನಾವಣೆಗೂ ಮುನ್ನ ಪಕ್ಷಾಂತರ ಪರ್ವದ ಅಲೆ ಜೋರಾಗಿ ಬೀಸಲಿದೆ ಎಂಬ ಅನುಮಾನ ಈ ಘಟನೆಗಳಿಂದ ಹೆಚ್ಚುತ್ತಿದೆ.

ಜೆಡಿಎಸ್‌ ಪಕ್ಷ ತೊರೆದಿರುವ ಹಿನ್ನೆಲೆಯಲ್ಲಿ ಮೇ 11ರಂದು ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಹೃಗ ಸಚಿವ ಅರಗ ಜ್ಞಾನೇಂದ್ರ, ಆರ್‌ ಅಶೋಕ್‌, ಕೋಟ ಶ್ರೀನಿವಾಸ್‌ ಪೂಜಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತಿತರರು ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios