Asianet Suvarna News Asianet Suvarna News

Assembly election: ಕಾಗೇರಿ ವಿರುದ್ಧ ಕಾಂಗ್ರೆಸ್ಸಲ್ಲಿ ಹೊಸಬಾಳೆ ಹೆಸರು ಮುಂಚೂಣಿಗೆ

ಶಿರಸಿ ಕ್ಷೇತ್ರದಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಯ ಬಗ್ಗೆ ಗಮನ ಹರಿಸುತ್ತಿದ್ದು, ಸದ್ಯ ವೆಂಕಟೇಶ ಹೆಗಡೆ ಹೊಸಬಾಳೆ ಹೆಸರು ಮುನ್ನೆಲೆಗೆ ಬಂದಿದೆ.

venkatesh hosabales contest against Kageri in assembly election at sirsi rav
Author
First Published Dec 30, 2022, 11:33 AM IST

ಕಾರವಾರ (ಡಿ.30) : ಶಿರಸಿ ಕ್ಷೇತ್ರದಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಯ ಬಗ್ಗೆ ಗಮನ ಹರಿಸುತ್ತಿದ್ದು, ಸದ್ಯ ವೆಂಕಟೇಶ ಹೆಗಡೆ ಹೊಸಬಾಳೆ ಹೆಸರು ಮುನ್ನೆಲೆಗೆ ಬಂದಿದೆ.

ವಿಶ್ವೇಶ್ವರ ಹೆಗಡೆ (vishweshwar hegde kageri) ಹವ್ಯಕ ಬ್ರಾಹ್ಮಣ(Havyaka Brahmin) ಸಮಾಜದವರಾಗಿದ್ದು, ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಹವ್ಯಕ ಬ್ರಾಹ್ಮಣ ಸಮಾಜದ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟಲ್ಲಿ ಕಾಗೇರಿ ಅವರನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಭಟ್ಕಳ(bhatkal)ದಲ್ಲಿ ಮಂಕಾಳ ವೈದ್ಯ, ಕಾರವಾರ(Karwar)ದಲ್ಲಿ ಸತೀಶ ಸೈಲ…, ಹಳಿಯಾಳದಲ್ಲಿ ಆರ್‌.ವಿ. ದೇಶಪಾಂಡೆ ಅವರಿಗೆ ಟಿಕೆಟ್‌ ಬಹುತೇಕ ಖಚಿತವಾಗಿದೆ. ಯಲ್ಲಾಪುರದಲ್ಲಿ ವಿ.ಎಸ್‌. ಪಾಟೀಲ್‌ ಹಾಗೂ ಶ್ರೀನಿವಾಸ ಭಟ್‌ ಇಬ್ಬರ ಹೆಸರು ಕೇಳಿಬರುತ್ತಿದೆ. ಕುಮಟಾದಲ್ಲಿ ಶಾರದಾ ಶೆಟ್ಟಿಮತ್ತು ಕೆಲವರ ನಡುವೆ ಪೈಪೋಟಿ ಇದೆ.

Belagavi Winter Session: ‘ಶೇ.40 ಕಮಿಷನ್‌’ ಚರ್ಚೆಗೆ ಸಭಾಧ್ಯಕ್ಷ ಕಾಗೇರಿ ಅನುಮತಿ

ನಾಲ್ಕು ಬಾರಿ ಸೋಲು:

ಶಿರಸಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಎದುರಿಸುವಲ್ಲಿ ಕಾಂಗ್ರೆಸ್‌ ಹೈರಾಣಾಗಿದೆ. ಕಾಗೇರಿ ಎದುರು ಸ್ಪರ್ಧಿಸಿದ ಭೀಮಣ್ಣ ನಾಯ್ಕ, ಎ.ರವೀಂದ್ರ, ದೀಪಕ ಹೊನ್ನಾವರ ಇವರೆಲ್ಲ ಸಫಲರಾಗಲಿಲ್ಲ. ಅದರಲ್ಲೂ ಭೀಮಣ್ಣ ನಾಯ್ಕ ಶಿರಸಿ ಕ್ಷೇತ್ರದಲ್ಲಿ ಎರಡು ಬಾರಿ, ಯಲ್ಲಾಪುರದಲ್ಲಿ ಒಮ್ಮೆ ಹಾಗೂ ವಿಧಾನಪರಿಷತ್‌ ಚುನಾವಣೆ ಹೀಗೆ ನಾಲ್ಕು ಬಾರಿ ಸೋಲನ್ನು ಅನುಭವಿಸಿದ್ದಾರೆ.

ಪ್ರತಿಕೂಲ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಸ್ಪರ್ಧಿಸಿದ್ದೂ ಇದಕ್ಕೆ ಕಾರಣವಿರಬಹುದು. ಮೇಲಿಂದ ಮೇಲೆ ಸೋತ ಅಭ್ಯರ್ಥಿಗೆ ಮತ್ತೆ ಮಣೆ ಹಾಕಬಾರದು ಎಂಬ ಮಾತುಗಳೂ ಕೇಳಿಬಂದಿವೆ. ಶಿರಸಿ ಕ್ಷೇತ್ರದಲ್ಲಿ ಹವ್ಯಕರ ಮತಗಳು ಹೆಚ್ಚಿವೆ. ಅದನ್ನು ಹೊರತುಪಡಿಸಿದರೆ ಈಡಿಗರ ಮತಗಳು ಅಧಿಕ. 2004ರಲ್ಲಿ ಶಾಂತಾರಾಮ ಹೆಗಡೆ ಅವರನ್ನು ಹೊರತು ಪಡಿಸಿದರೆ ಮತ್ತೆ ಬ್ರಾಹ್ಮಣರಿಗೆ ಟಿಕೆಟ್‌ ನೀಡಿಲ್ಲ. ಬ್ರಾಹ್ಮಣರ ಮತಗಳೇ ಹೆಚ್ಚಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್‌ ನೀಡಿದಲ್ಲಿ ಕಾಗೇರಿ ಅವರನ್ನು ಸೋಲಿಸಬಹುದು ಎಂಬ ಅಭಿಪ್ರಾಯ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಜಿಪಂ ಸದಸ್ಯ:

ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಅನುಭವ ಹೊಂದಿರುವ ವೆಂಕಟೇಶ ಹೆಗಡೆ ಹೊಸಬಾಳೆ ಕಾಂಗ್ರೆಸ್‌ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಸಹಕಾರಿ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತ ಜನತೆಗೆ ಹತ್ತಿರವಾಗಿದ್ದಾರೆ.

ಹಿಂದೆ ಜೆಡಿಎಸ್‌ನಲ್ಲಿದ್ದ ಹೊಸಬಾಳೆ ಪಕ್ಷಕ್ಕೆ ಅಡಿಪಾಯವೇ ಇಲ್ಲದಿದ್ದರೂ 2004ರಲ್ಲಿ ಅಂದಿನ ಅಂಕೋಲಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಕೇವಲ ಒಂದು ತಿಂಗಳಲ್ಲಿ ಪಕ್ಷ ಸಂಘಟಿಸಿ ಗಮನಾರ್ಹ ಪ್ರಮಾಣದ ಮತಗಳನ್ನು ಪಡೆದಿದ್ದರು.

ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಭೀಮಣ್ಣ ನಾಯ್ಕ, ಜಿ. ಎನ್‌.ಹೆಗಡೆ, ಶ್ರೀಪಾದ ಹೆಗಡೆ ಕಡವೆ, ವಸಂತ ನಾಯ್ಕ, ವಿ.ಎನ್‌. ನಾಯ್ಕ, ಸತೀಶ್‌ ನಾಯ್ಕ ಸಹ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈಗ ವೆಂಕಟೇಶ ಹೆಗಡೆ ಹೊಸಬಾಳೆ ಹೆಸರು ಮುಂಚೂಣಿಗೆ ಬಂದಿದೆ. ಈ ಹಿಂದೆ ನವನಿರ್ಮಾಣ ವೇದಿಕೆ, ಲೋಕಶಕ್ತಿ, ಜನತಾ ದಳದಲ್ಲೂ ಯುವ ಘಟಕದ ಅಧ್ಯಕ್ಷರಾಗಿ ಚುರುಕಾಗಿ ಪಕ್ಷ ಸಂಘಟಿಸಿದ ಉದಾಹರಣೆ ಇದೆ. ಟಿಕೆಟ್‌ ಸಿಕ್ಕಲ್ಲಿ ಶಿರಸಿ ಕ್ಷೇತ್ರದ ಚುನಾವಣಾ ಕಣ ಇನ್ನಷ್ಟುರೋಚಕವಾಗಲಿದೆ.

ಕರುನಾಡ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಸಹಜವಾಗಿ ನಾನು ಆಕಾಂಕ್ಷಿ ಹೌದು. ಹಾಗಂತ ಪಕ್ಷ ಯಾವುದೇ ನಿರ್ಣಯ ಕೈಗೊಂಡರೂ ಬದ್ಧನಾಗಿರುತ್ತೇನೆ. ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಬೇಕು.

ವೆಂಕಟೇಶ ಹೆಗಡೆ ಹೊಸಬಾಳೆ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

Follow Us:
Download App:
  • android
  • ios