ನೀತಿಗೆಟ್ಟ ರಾಜಕಾರಣಕ್ಕೆ ಜಗದೀಶ ಶೆಟ್ಟರ್ ಉದಾಹರಣೆ; ಬಿಜೆಪಿ ಮರುಸೇರ್ಪಡೆಯಾಗಿದ್ದಕ್ಕೆ ವೀರಶೈವ ಮುಖಂಡರು ಆಕ್ರೋಶ
ದಿನಕ್ಕೊಂದು ಪಕ್ಷ ಬದಲಿಸುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಧಾರವಾಡ ಜಿಲ್ಲೆಯ ನಿತೀಶ್ ಕುಮಾರ ಇದ್ದಂತೆ ನೀತಿಗೆಟ್ಟ ರಾಜಕಾರಣಕ್ಕೆ ಇವರೇ ಉತ್ತಮ ನಿದರ್ಶನ ಎಂದು ಬಿಜೆಪಿಗೆ ಮರುಸೇರ್ಪಡೆಗೊಂಡ ಜಗದೀಶ ಶೆಟ್ಟರ್ ವಿರುದ್ಧ ವೀರಶೈವ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ (ಜ.28): ದಿನಕ್ಕೊಂದು ಪಕ್ಷ ಬದಲಿಸುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಧಾರವಾಡ ಜಿಲ್ಲೆಯ ನಿತೀಶ್ ಕುಮಾರ ಇದ್ದಂತೆ ನೀತಿಗೆಟ್ಟ ರಾಜಕಾರಣಕ್ಕೆ ಇವರೇ ಉತ್ತಮ ನಿದರ್ಶನ ಎಂದು ಬಿಜೆಪಿಗೆ ಮರುಸೇರ್ಪಡೆಗೊಂಡ ಜಗದೀಶ ಶೆಟ್ಟರ್ ವಿರುದ್ಧ ವೀರಶೈವ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಲಿಂಗಾಯತ ಮುಖಂಡ ಮೋಹನ ಲಿಂಬಿಕಾಯಿ, ದಿನಕ್ಕೊಂದು ಪಕ್ಷಕ್ಕೆ ಹಾರ್ತಾರೆ ಇಂಥ ನೀತಿಗೆಟ್ಟ ರಾಜಕಾರಣಿಯನ್ನ ನೋಡಿಲ್ಲ. ಬಿಜೆಪಿ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ ಜಗದೀಶ ಶೆಟ್ಟರ್, ಆರು ತಿಂಗಳಲ್ಲೇ ಮತ್ತೆ ಬಿಜೆಪಿಗೆ ಯಾಕೆ ಹೋದ್ರು ಎಂಬುದು ನಿಗೂಢವಾಗಿದೆ. ಇದರಿಂದ ಯುವಕರಿಗೆ ಏನು ಸಂದೇಶ ಹೋಗುತ್ತೆ? ಶೆಟ್ಟರ್ ಬಿಜೆಪಿಗೆ ಹೋಗಿರುವುದು ವೀರಶೈವ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಜಗದೀಶ್ ಶೆಟ್ಟರ್ ಮರುಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಬೆನ್ನುಬಿದ್ದ ಬಿಜೆಪಿ!
ಬಿಹಾರದ ನಿತೀಶ್ ಕುಮಾರ ಇದ್ದಂತೆ:
ನಾವು ಬಿಹಾರಕ್ಕೆ ಹೋಗುವುದು ಬೇಡ. ಧಾರವಾಡದಲ್ಲೇ ನಿತೀಶ್ ಕುಮಾರ ಇದ್ದಾರೆ. ಜಗದೀಶ ಶೆಟ್ಟರ್ ಧಾರವಾಡದ ಮತ್ತೊಬ್ಬ ನಿತೀಶ್ ಕುಮಾರ ಇದ್ದಂತೆ. ಸ್ವಾರ್ಥಕ್ಕಾಗಿ ಇವತ್ತು ಇಲ್ಲಿ, ನಾಳೆ ಮತ್ತೊಂದು ಕಡೆ ಅನ್ನೋ ನೀತಿಗೆಟ್ಟ ರಾಜಕಾರಣಕ್ಕೆ ದೇಶದಲ್ಲಿ ಜಗದೀಶ್ ಶೆಟ್ಟರ್ ಉದಾಹರಣೆ. ನೀತಿಗೆಟ್ಟ ರಾಜಕಾರಣ ಮಾಡೋರ ಹಿಂದೆ ನಮ್ಮ ಸಮಾಜ ಇಲ್ಲ. ಸಮಾಜದ ನಂಬಿಕೆಯನ್ನ ಜಗದೀಶ್ ಶೆಟ್ಟರ್ ಕಳೆದುಕೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬಿಜೆಪಿಗೆ ಹೋದಾಗ ಹಿಗ್ಗಾ ಮುಗ್ಗಾ ಬೈದಿದ್ರು. ಬಿಜೆಪಿ ನಿರ್ನಾಮ ಮಾಡಬೇಕು ಎಂದಿದ್ರು. ಒಂದು ವಾರದ ಹಿಂದೆ ಕೂಡಾ ಬಿಜೆಪಿ ವಿರುದ್ದ ಮಾತಾಡಿದ್ರು. ಆದ್ರೆ ಇದೀಗ ಶೆಟ್ಟರ್ ಬಿಜೆಪಿಗೆ ಹೋಗಿ ಕಾಂಗ್ರೆಸ್ ನಿರ್ನಾಮ ಮಾಡಬೇಕು ಅಂತಾ ಮಾತಾಡ್ತಿದ್ದಾರೆ. ಮುಂಬರೋ ಲೋಕಸಭೆ ಟಿಕೆಟ್ ಲಿಂಗಾಯತರಿಗೆ ಕೊಡಬೇಕು. ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖಂಡರು ಜಗದೀಶ್ ಶೆಟ್ಟರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.