ಸೋಮಣ್ಣ ಬಿಜೆಪಿ ಬಿಡಲ್ಲ, ಅವರ ಜತೆ ಮಾತಾಡುವೆ: ಯಡಿಯೂರಪ್ಪ
ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷ ಬಿಡುತ್ತಾರೆ ಅನ್ನೋದ್ರಲ್ಲಿ ಸತ್ಯಾಂಶ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಚಿಕ್ಕೋಡಿ (ಮಾ.09): ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷ ಬಿಡುತ್ತಾರೆ ಅನ್ನೋದ್ರಲ್ಲಿ ಸತ್ಯಾಂಶ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬುಧವಾರ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಮಾತನಾಡಿ, ಸೋಮಣ್ಣ ಅವರು ಪಕ್ಷ ಬಿಡುತ್ತಾರೆ ಅನ್ನೋದ್ರಲ್ಲಿ ಸತ್ಯಾಂಶ ಇಲ್ಲ. ಬೆಂಗಳೂರಿಗೆ ಹೋದ ಮೇಲೆ ಸೋಮಣ್ಣ ಅವರನ್ನು ಕರೆದು ಮಾತಾಡುತ್ತೇನೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ ಎಂದರು.
ಸೋಮಣ್ಣ ಅವರು ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಕುಮಾರ್ ಅವರು ಎಲ್ಲರನ್ನೂ ಕರೆದು ಮಾತನಾಡುವ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ, ಅವರ ಮಾತಿಗೆ ನಮ್ಮ ನಾಯಕರು ಬಲಿಯಾಗುವುದಿಲ್ಲ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಮಕ್ಕಳೇ ಆಲ್ ದಿ ಬೆಸ್ಟ್
ಪಕ್ಷಕ್ಕೆ ಬಂದಿರುವ ಹದಿನೇಳು ಮಂದಿ ಶಾಸಕರಲ್ಲಿ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಅಧಿಕಾರಕ್ಕೆ ಬರುವ ಪಕ್ಷ ಬಿಟ್ಟು ಯಾಕೆ ಹೋಗ್ತಾರೆ? ಆವತ್ತಿನಿಂದ ಇವತ್ತಿನವರೆಗೂ ಪಕ್ಷ ಕಟ್ಟಲು ಬೆನ್ನೆಲುಬಾಗಿ ಅವರು ಸಹಕಾರ ನೀಡಿದ್ದಾರೆ. ಆ ತರ ಯಾರೊಬ್ಬರೂ ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಕಾಂಗ್ರೆಸ್‌ನಿಂದ ಬರುವವರಿಗೆ ಸ್ವಾಗತ. ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ ಎಂದರು.
ಹಾಲಿ ಐದಾರು ಶಾಸಕರಿಗೆ ಟಿಕೇಟ್ ಸಿಗಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಐದಾರು ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ವಾತಾವರಣ ಇದೆ ಅಂತಾ ಹೇಳಿದ್ದೇನೆ. ಅಂತಿಮವಾಗಿ ಏನೇ ತೀರ್ಮಾನ ಮಾಡೋದಾದ್ರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ರೀತಿ ಆಗಬಹುದು ಎಂದು ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು. ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆಗೆ, ನಾನು ಆ ರೀತಿ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಬಿಜೆಪಿ ಪಕ್ಷದಲ್ಲಿ ತಮಗೆ ಗೌರವ ಸಿಗುತ್ತಿಲ್ಲವೆಂದು ಸಚಿವ ಸೋಮಣ್ಣ ಮುನಿಸು: ಕಾಂಗ್ರೆಸ್‌ನತ್ತ ವಾಲಿದ ಗುಸುಗುಸು
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯಲ್ಲಿ ಮುಂದುವರೆದಿದ್ದು, ಬುಧವಾರ ಚಿಕ್ಕೋಡಿ, ರಾಯಬಾಗ ಮತ್ತು ನಿಪ್ಪಾಣಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಹಾಗೂ ಭರ್ಜರಿ ರೋಡ್ ಶೋ ನಡೆಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ, ರೋಡ ಶೋ ನಡೆಯಿತು. ಹೆಲಿಕಾಪ್ಟರ್ ಮೂಲಕ ಅಂಕಲಿ ಗ್ರಾಮಕ್ಕೆ ಆಗಮಿಸಿದ ಯಡಿಯೂರಪ್ಪ ಅವರು ಚಿಕ್ಕೋಡಿ ತಾಲೂಕಿನ ಮಾಂಜರಿಯಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿದರು. ಬಳಿಕ ರಾಯಬಾಗ, ನಿಪ್ಪಾಣಿಯಲ್ಲಿ ರೋಡ್ ಶೋ ನಡೆಸಿದರು.