ಮುಂದಿನ 25 ವರ್ಷಗಳ ದೂರದೃಷ್ಟಿಯನ್ನು ಇರಿಸಿಕೊಂಡು ವಿದ್ಯಾರ್ಥಿಗಳು ಭಾರತಕ್ಕಾಗಿ ಬದುಕುವ ಸಂಕಲ್ಪ ಮಾಡಬೇಕು, ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಯುವ ಉತ್ಸವ ಮೂಲಕ ಭಾರತ ಜೋಡಿಸುವ ಕೆಲಸ ಆಗಬೇಕು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಮಂಗಳೂರು (ಜೂ.11) : ಮುಂದಿನ 25 ವರ್ಷಗಳ ದೂರದೃಷ್ಟಿಯನ್ನು ಇರಿಸಿಕೊಂಡು ವಿದ್ಯಾರ್ಥಿಗಳು ಭಾರತಕ್ಕಾಗಿ ಬದುಕುವ ಸಂಕಲ್ಪ ಮಾಡಬೇಕು, ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು. ಯುವ ಉತ್ಸವ ಮೂಲಕ ಭಾರತ ಜೋಡಿಸುವ ಕೆಲಸ ಆಗಬೇಕು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಮಂಗಳೂರು ಮಿನಿ ಪುರಭವನದಲ್ಲಿ ಶನಿವಾರ ನೆಹರೂ ಯುವ ಕೇಂದ್ರ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಂಗಳೂರು ವಿವಿ ಕಾಲೇಜು, ಎನ್‌ಎಸ್‌ಎಸ್‌ ಘಟಕ, ಡಾ.ದಯಾನಂದ ಪೈ, ಪಿ.ಸತೀಶ್‌ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲಾ ಯೂತ್‌ ಫೆಡರೇಷನ್‌ ಸಹಕಾರದಲ್ಲಿ ಏರ್ಪಡಿಸಿದ ‘ಯುವ ಉತ್ಸವ-2023’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಪಕ್ಷ ನಾಯಕನ ಆಯ್ಕೆ ವಿಚಾರ ಪಕ್ಷದ ಸಭೆಯಲ್ಲೇ ಚರ್ಚೆಯಾಗ್ಲಿ; ಕಟೀಲ್‌ ವಿರುದ್ಧ ತಿರುಗಿಬಿದ್ದ ಬಿಜೆಪಿ ಶಾಸಕರು!

ಕ್ರಿಸ್ತ ಪೂರ್ವ, ಕ್ರಿಸ್ತ ಶಕ, ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯಾನಂತರದ ಬಳಿಕ ಈಗ 2014ರ ಪೂರ್ವ ಹಾಗೂ 2014ರ ನಂತರದ ಭಾರತ ಎಂದು ಜಗತ್ತೇ ಕರೆಯುವಂತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುವ ಪೀಳಿಗೆ ಮೇಲೆ ವಿಶ್ವಾಸ ಇರಿಸಿದ್ದು, ಇದು ಅಮೃತ ಕಾಲದ ಭಾರತವಾಗಲಿದೆ. ಯುವ ಪೀಳಿಗೆಯೇ ದೇಶದ ಶಕ್ತಿ ಆಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ನೈಜ ಇತಿಹಾಸವನ್ನು ಶಾಲೆಗಳಲ್ಲಿ ತಿಳಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಈಗಿನ ಪೀಳಿಗೆಗೆ ನಿಜ ಇತಿಹಾಸ ಗೊತ್ತಿರುವುದಿಲ್ಲ. ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ದ.ಕ. ಜಿಲ್ಲೆಯಲ್ಲಿ 1834ರಲ್ಲಿ ನಡೆದಿದೆ. ಇಂತಹ ಅನೇಕ ವಿಚಾರಗಳು ಇಂದು ಶಿಕ್ಷಣದಲ್ಲಿ ಬರಬೇಕಾಗಿದೆ ಎಂದರು.

ಎನ್‌ವೈಕೆಎಸ್‌ ಬೆಂಗಳೂರಿನ ಪ್ರಾದೇಶಿಕ ಕೇಂದ್ರ ನಿರ್ದೇಶಕ ಎಂ.ಎನ್‌.ನಟರಾಜ್‌, ಜಿಲ್ಲಾ ಯುತ್‌ ಅಧಿಕಾರಿ ಯಶವಂತ್‌ ಯಾದವ್‌, ಮಾಜಿ ಅಧಿಕಾರಿ ಸಿಜೆಎಫ್‌ ಡಿಸೋಜಾ, ಜಿಲ್ಲಾ ಯೂತ್‌ ಫೆಡರೇಷನ್‌ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು, ಕಾರ್‌ಸ್ಟ್ರೀಟ್‌ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಜಯಕರ್‌ ಭಂಡಾರಿ ಇದ್ದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ: ಅಭಿಪ್ರಾಯ ಕೇಳಿದ ಅರುಣ್‌ಸಿಂಗ್‌

ಪ್ರೊ.ಸೇಸಪ್ಪ ಸ್ವಾಗತಿಸಿದರು. ಡಾ.ಆಶಾಲತಾ ವಂದಿಸಿದರು. ಪ್ರೊ.ನಂದಕಿಶೋರ್‌ ನಿರೂಪಿಸಿದರು.

ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಐದು ವಿಧದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಬಗ್ಗೆ ಪ್ರತಿಜ್ಞೆ ಕೈಗೊಳ್ಳಲಾಯಿತು.