ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂಬುದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ. 

ಧಾರವಾಡ (ಆ.06): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂಬುದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರದ ಮೋದಿ ಸರ್ಕಾರ ಉದ್ದಿಮೆದಾರರ ಹತ್ತಾರು ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡರು ಪದೇ ಪದೇ ಆರೋಪ ಮಾಡುತ್ತಿದ್ದಾರೆ. 

ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ?. ಸಾಲ ಮನ್ನಾದ ಬಗ್ಗೆ ಇಬ್ಬರೂ ಮುಖಂಡರು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ಸಾಬೀತು ಮಾಡದೇ ಹೋದಲ್ಲಿ ಅವರೂ ರಾಜಕೀಯದಿಂದ ಹಿಂದೆ ಸರಿಯಬೇಕು ಎಂದು ಬಹಿರಂಗವಾಗಿ ಸವಾಲು ಹಾಕಿದರು. ಯುಪಿಎ ಸರ್ಕಾರ ಆಡಳಿತದಲ್ಲಿ ಇರುವಾಗ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳ ಮೂಲಕ ಕಾಂಗ್ರೆಸ್‌ ಕಚೇರಿಯಿಂದ ದೂರವಾಣಿ ಕರೆ ಮಾಡಿ ತಮಗೆ ಬೇಕಾದವರಿಗೆ ಅತಿ ಹೆಚ್ಚು ಸಾಲ ಕೊಡಿಸಿದ್ದಾರೆ. ಆದರೆ, ಅವರು ಸಾಲದ ಹಣವನ್ನು ಹಿಂತಿರುಗಿಸಿಲ್ಲ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಾಲ ವಾಪಸ್‌ ಮಾಡಲಾಗದೆ ಕೆಲವರು ದೇಶ ಬಿಟ್ಟು ಓಡಿ ಹೋಗಿದ್ದಾರೆ.

ಕಾಂಗ್ರೆಸ್‌ ಸರ್ಕಾರದಿಂದ ಭ್ರಷ್ಟಾಚಾರ, ವರ್ಗಾವಣೆ ದಂಧೆ: ಪ್ರಲ್ಹಾದ್‌ ಜೋಶಿ

ಈ ವಂಚಕರ ಎಲ್ಲ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತಹ ಕಾನೂನನ್ನು ತರಲಾಗುವುದು. 40 ಸಾವಿರ ಕೋಟಿಯಷ್ಟುಸಾಲವನ್ನು ಈಗಾಗಲೇ ವಸೂಲಿ ಮಾಡಲಾಗಿದೆ. ಸಾಲ ನೀಡಲು ಪತ್ರ ನೀಡಿದವರು, ಫೋನ್‌ ಮಾಡಿದವರ ಹೆಸರು ಹೊರ ಬರುವುದು ಎಂದು ಹೆದರಿ ಕಾಂಗ್ರೆಸ್‌ನವರು ಓಡಿ ಹೋದ ವಂಚಕರಿಗೆ ದೇಶಕ್ಕೆ ಬರದಂತೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜಗತ್ತಿನಲ್ಲಿಯೇ ಅತಿ ಹೆಚ್ಚು ಮೂಲಭೂತ ಸೌಕರ್ಯಗಳಿಗಾಗಿ ವೆಚ್ಚ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ ಎಲ್ಲದಕ್ಕೂ ವಿರೋಧ ಮಾಡುತ್ತಿದೆ. ಸೆಂಟ್ರಲ್‌ ವಿಸ್ತಾ, ಹೊಸ ಪಾರ್ಲಿಮೆಂಟ್‌ಗೆ ವಿರೋಧ ಮಾಡುತ್ತಿದೆ. ಸುಳ್ಳು ಹೇಳುವ ಸ್ಪರ್ಧೆಗೆ ಕಾಂಗ್ರೆಸ್‌ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು.

ನಂದಘರ್‌ ಕೇಂದ್ರಗಳಾಗಿ ಪರಿವರ್ತನೆ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್‌ ಯೋಜನೆಯಡಿ 106 ಹಾಗೂ ಸಂಸತ್‌ ಪ್ರದೇಶ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ 9 ಅಂಗನವಾಡಿ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅವುಗಳನ್ನು ನಂದಘರ್‌ಗಳನ್ನಾಗಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ವೇದಾಂತ ಕಂಪನಿಯ ಸಿಎಸ್‌ಆರ್‌ ಯೋಜನೆಯಡಿ 5 ಹೊಸ ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಒಟ್ಟು 96 ಅಂಗನವಾಡಿ ಕೇಂದ್ರಗಳನ್ನು ಸುಸಜ್ಜಿತ ನಂದಘರ್‌ ಕೇಂದ್ರಗಳನ್ನಾಗಿ ನವೀಕರಿಸಿದೆ. ಎನ್‌ಎಂಡಿಸಿ ಸಿಎಸ್‌ಆರ್‌ ಅಡಿ 10 ಅಂಗನವಾಡಿ ಹಾಗೂ ಸಂಸತ್‌ ಪ್ರದೇಶ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ 9 ಅಂಗನವಾಡಿ ಕಟ್ಟಡಗಳನ್ನು ವಿವಿಧ ಸೌಲಭ್ಯಗಳೊಂದಿಗೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು: ನಳಿನ್‌ ಕುಮಾರ್‌ ಕಟೀಲ್‌

ಈ ನಂದಘರ್‌ನಲ್ಲಿ ಮಕ್ಕಳಿಗೆ ಆಸನಗಳ ವ್ಯವಸ್ಥೆ, ಸೌರಶಕ್ತಿ ಆಧಾರಿತ ವಿದ್ಯುತ್‌ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್‌ ಫಿಲ್ಟರ್‌ ವ್ಯವಸ್ಥೆ, ಸ್ವಚ್ಛ ಶೌಚಾಲಯ, ಸ್ಮಾರ್ಚ್‌ ಟಿವಿ ಮೂಲಕ ‘ಇ-ಕಲಿಕೆ’ ವ್ಯವಸ್ಥೆ, ಆಟಿಕೆ ಸಾಮಗ್ರಿಗಳು ಹೀಗೆ ವಿವಿಧ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್‌ ಆಧಾರಿತ ಕಲಿಕೆ ಕೈಗೊಳ್ಳಲಾಗುತ್ತಿದೆ. ರೈಮ್ಸ್‌ಗಳನ್ನು ವಿಡಿಯೋ ಮೂಲಕ ಕಂಪ್ಯೂಟರ್‌ನಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಆರಂಭಿಕ ಹಂತದಿಂದಲೇ ಮಕ್ಕಳಿಗೆ ಇ-ಕಲಿಕೆ ಪರಿಚಯ, ಜ್ಞಾನ ದೊರೆತಂತಾಗಲಿದೆ. ಮುಂದಿನ ಹಂತದಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಗೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳುತ್ತಾರೆ ಎಂಬ ಆಶಯದೊಂದಿಗೆ 96 ನಂದಘರ್‌ ಕಾರ್ಯಾರಂಭ ಮಾಡಲಾಗಿದೆ.