- ಕರ್ನಾಟಕದ ರಾಜಕಾರಣಿಗಳಿಗೆ ಪ್ರಹ್ಲಾದ್ ಜೋಶಿ ಆಪತ್ಬಾಂಧವ- ದಿಲ್ಲಿಯಲ್ಲಿ ಅನಂತಕುಮಾರ್‌ ನಿಭಾಯಿಸುತ್ತಿದ್ದ ಪಾತ್ರವನ್ನು ಪ್ರಹ್ಲಾದ್‌ ಜೋಶಿ ನಿರ್ವಹಿಸುತ್ತಿದ್ದಾರೆ.-  ಹೈಕಮಾಂಡ್‌ ನಾಯಕರಿಗೆ ಸ್ಥಳೀಯ ಸ್ಥಿತಿಗತಿ ಮನವರಿಕೆ ಮಾಡಿಕೊಡುತ್ತಾರೆ

ಬೆಂಗಳೂರು (ಆ. 06): ಏಕಾಏಕಿ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ದಿಲ್ಲಿಯಲ್ಲಿ ಒಬ್ಬ ಹೈಕಮಾಂಡ್‌ ನಾಯಕರಿಗೆ ಸ್ಥಳೀಯ ಸ್ಥಿತಿಗತಿ ಮನವರಿಕೆ ಮಾಡಿ ಮನವೊಲಿಸಬಲ್ಲ ನಾಯಕ ಬೇಕಿತ್ತು.

ಒಂದು ಕಡೆ ಆರ್‌ಎಸ್‌ಎಸ್‌, ದಿಲ್ಲಿ ನಾಯಕರ ಅಂಬೋಣಗಳು, ಯಡಿಯೂರಪ್ಪನವರ ಪಟ್ಟು, ಜಿಲ್ಲಾ ನಾಯಕರ ಮಹತ್ವಾಕಾಂಕ್ಷೆಯ ತಿಕ್ಕಾಟಗಳ ಜೊತೆ ಸ್ವಾಮೀಜಿಗಳ ಅಪೇಕ್ಷೆಯನ್ನು ಈಡೇರಿಸುವಂತೆ ಮಾಡಲು ಬೊಮ್ಮಾಯಿ ಸಾಹೇಬರಿಗೆ ದಿಲ್ಲಿಯಲ್ಲಿ ಒಬ್ಬ ನಾಯಕ ಬೇಕಿತ್ತು. ಜೋಶಿ ಅವರು ಮನವೊಲಿಕೆ ಮಾಡಿದ್ದರಿಂದಲೇ ಗೋವಿಂದ ಕಾರಜೋಳ, ಈಶ್ವರಪ್ಪ, ಸಿ.ಸಿ.ಪಾಟೀಲ್‌, ಸೋಮಣ್ಣ ಸ್ಥಾನ ಉಳಿಸಿಕೊಂಡರೆ, ಸುನೀಲ್‌ ಕುಮಾರ್‌ ಮತ್ತು ಬಿ.ಸಿ.ನಾಗೇಶ್‌ ಸೇರ್ಪಡೆ ಕೂಡ ಅವರಿಂದಲೇ ಸಾಧ್ಯ ಆಯಿತು ಎಂದು ಮೂಲಗಳು ಹೇಳುತ್ತಿವೆ.

ಆದರೆ ಕಾಗೇರಿ ಮತ್ತು ತಮ್ಮ ಆಪ್ತ ಅಭಯ ಪಾಟೀಲ್‌ರನ್ನು ಸಂಪುಟಕ್ಕೆ ಸೇರಿಸುವ ಪ್ರಹ್ಲಾದ್‌ ಜೋಶಿ ಪ್ರಯತ್ನ ಯಶಸ್ವಿ ಆಗಲಿಲ್ಲ. ಧಾರವಾಡ ಜಿಲ್ಲೆಯಲ್ಲಿ ಬೆಲ್ಲದರನ್ನು ಆಯ್ಕೆ ಮಾಡಬೇಕೋ ಅಥವಾ ಶಂಕರ ಪಾಟೀಲ್‌ ಮುನೇನಕೊಪ್ಪರ ಹೆಸರು ಹೇಳಬೇಕೋ ಎಂಬ ವಿಷಯದಲ್ಲಿ ಇಬ್ಬರೂ ಕ್ಷೇತ್ರದ ಶಾಸಕರು, ಯಾರೊಬ್ಬರ ಹೆಸರು ಹೇಳಿದರೂ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ ಎಂಬ ದ್ವಂದ್ವದಲ್ಲಿ ಜೋಶಿ ಇದ್ದಂತೆ ಕಾಣುತ್ತಿತ್ತು. ನಿಧಾನವಾಗಿ ಆದರೂ ಸರಿ ದಿಲ್ಲಿಯಲ್ಲಿ ಅನಂತಕುಮಾರ್‌ ನಿಭಾಯಿಸುತ್ತಿದ್ದ ಪಾತ್ರವನ್ನು ಪ್ರಹ್ಲಾದ್‌ ಜೋಶಿ ನಿರ್ವಹಿಸುತ್ತಿದ್ದಾರೆ.

ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

ಕೋಟಾಗೆ ಲಾಭ, ಸವದಿಗೆ ನಷ್ಟ

ಉಡುಪಿ ಜಿಲ್ಲೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯನ್ನು ತೆಗೆದುಕೊಳ್ಳಲೇಬೇಕು ಎಂದು ಆರ್‌ಎಸ್‌ಎಸ್‌ ನಾಯಕರು ಪಟ್ಟು ಹಿಡಿದಾಗ, ಬೇಡ ಸುನೀಲ್‌ ಕುಮಾರ್‌ ಅವರನ್ನು ಮಾತ್ರ ತೆಗೆದುಕೊಳ್ಳೋಣ. ಹಿಂದುಳಿದ ವರ್ಗದ ಯುವಕ ಜೊತೆಗೆ ಹಿಂದುತ್ವದ ಮುಖ ಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದರಂತೆ. ಬೊಮ್ಮಾಯಿಗೆ ಕೋಟಾರನ್ನು ಕೈಬಿಟ್ಟು ಬಹುಕಾಲದ ಮಿತ್ರ ಲಕ್ಷ್ಮಣ ಸವದಿಯನ್ನು ತೆಗೆದುಕೊಂಡು ಮಂತ್ರಿ ಮಾಡಿ ವಿಧಾನ ಪರಿಷತ್‌ ಸಭಾನಾಯಕರಾಗಿ ಮಾಡಬೇಕು ಎಂಬ ಮನಸ್ಸಿತ್ತಂತೆ.

ಆದರೆ ಆರ್‌ಎಸ್‌ಎಸ್‌ ಶಶಿಕಲಾ ಜೊಲ್ಲೆ ಮತ್ತು ಕೋಟಾ ಶ್ರೀನಿವಾಸ್‌ ಹೆಸರಿಗೆ ಪಟ್ಟು ಹಿಡಿದಿದ್ದರಿಂದ ಸವದಿಯನ್ನು ಮಂತ್ರಿ ಮಾಡುವುದು ಬೊಮ್ಮಾಯಿಗೆ ಸಾಧ್ಯ ಆಗಲಿಲ್ಲ. ಆರ್‌.ಅಶೋಕ್‌, ಕೋಟಾ ಪೂಜಾರಿಯನ್ನು ತೆಗೆದು ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡಿ ಬೆಂಗಳೂರಿನ ಇನ್ನೊಬ್ಬ ಪ್ರಭಾವಿ ಒಕ್ಕಲಿಗ ಡಾ.ಅಶ್ವತ್ಥನಾರಾಯಣರನ್ನು ಪಕ್ಕಕ್ಕಿಡುವ ಪ್ರಯತ್ನ ಮಾಡಿದರೂ ದಿಲ್ಲಿ ನಾಯಕರು ಪಟ್ಟು ಹಿಡಿದಿದ್ದರಿಂದ ಅದೂ ಸಾಧ್ಯ ಆಗಲಿಲ್ಲ.

ಸಿ.ಸಿ.ಪಾಟೀಲರನ್ನು ತೆಗೆದು ಕಲಬುರ್ಗಿಯಲ್ಲಿ ರೇವೂರ ಅಥವಾ ತೇಲ್ಕೂರಗೆ ಅವಕಾಶ ಕೊಡಬೇಕು ಎಂಬ ಒತ್ತಡ ಇತ್ತು. ಆದರೆ ಬೊಮ್ಮಾಯಿ ಮತ್ತು ಪ್ರಹ್ಲಾದ್‌ ಜೋಶಿ ಗದಗ ಜಿಲ್ಲೆಗೆ ಪ್ರಾತಿನಿಧ್ಯ ಕೊಡಲೇಬೇಕೆಂದು ಗಟ್ಟಿಯಾಗಿ ಹೇಳಿದ್ದರಿಂದ ಸಿ.ಸಿ.ಪಾಟೀಲ್‌ ಸ್ಥಾನ ಉಳಿಸಿಕೊಂಡರು.

ಮೋದಿ ಜೊತೆ 45 ನಿಮಿಷ

ಮುಖ್ಯಮಂತ್ರಿ ಆದ ಮೇಲೆ ಬೊಮ್ಮಾಯಿ ಮೊದಲ ಬಾರಿ ದಿಲ್ಲಿಗೆ ಹೋದಾಗ ಪ್ರಧಾನಿ 45 ನಿಮಿಷ ಕುಳಿತು ಸಲಹೆ ಸೂಚನೆ ನೀಡಿ ಗುಜರಾತ್‌ ಅನುಭವ ಹಂಚಿಕೊಂಡಿದ್ದಾರೆ. ಕೇಶುಭಾಯಿ ಜೊತೆಗಿನ ರಾಜಕೀಯ, ಆಡಳಿತದಲ್ಲಿ ಅನುಭವದ ಕೊರತೆ, ಸಹಾಯಕ್ಕೆ ಯಾರೂ ಇರಲಿಲ್ಲ ಎಂಬೆಲ್ಲಾ ವಿಷಯ ಹೇಳಿ, ‘ಬೊಮ್ಮಾಯಿಜೀ, ನೀವು ಈಗ ಅದೇ ಪರಿಸ್ಥಿತಿಯಲ್ಲಿ ಇದ್ದೀರ. ಆಡಳಿತ ಸುಧಾರಣೆ, ಭ್ರಷ್ಟಾಚಾರ ಕಡಿಮೆ ಮಾಡುವುದು, ಜನಪರ ಯೋಜನೆ ರೂಪಿಸುವುದು ಇಷ್ಟುಮಾಡಿ ಸಾಕು, ನಿಮಗೆ ಯಶಸ್ಸು ಸಿಗುತ್ತದೆ’ ಎಂದು ಹೇಳಿ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ದುಡ್ಡು ಸಹಾಯ, ದೇವೇಗೌಡ ಮತ್ತು ಸಿದ್ದರಾಮಯ್ಯ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬಿಎಸ್‌ವೈ ಗುಟುರು, ಹೈಕಮಾಂಡ್ ಸೈಲೆಂಟ್: ಬೆಲ್ಲದ್‌ಗೆ ಕೈ ತಪ್ಪಿತು ಸಚಿವ ಸ್ಥಾನ..!

ಕೊನೆಗೆ ಮಾತುಕತೆ ಮುಗಿಸುವಾಗ ಬೊಮ್ಮಾಯಿ ತುರ್ತು ಸಂದರ್ಭದಲ್ಲಿ ನಿಮಗೆ ಕಾಲ್‌ ಮಾಡಬಹುದೇ ಎಂದಾಗ, ‘ಭಯ್ಯಾ ಯಾವಾಗ ಬೇಕಾದರೂ ಕಾಲ್‌ ಮಾಡಿ’ ಎಂದು ಬೆನ್ನು ತಟ್ಟಿಕಳುಹಿಸಿದ್ದಾರೆ. ಯಡಿಯೂರಪ್ಪ ಅವರಿಗೂ ಬೊಮ್ಮಾಯಿಗೂ ಇರುವ ವ್ಯತ್ಯಾಸ ಇದು. ಯಡಿಯೂರಪ್ಪ ಭಾಷೆಯ ಕಾರಣದಿಂದ ಜೀವಮಾನ ಪೂರ್ತಿ ಪಾರ್ಟಿ ಕೆಲಸ ಮಾಡಿದರೂ ಅಟಲ್‌, ಅಡ್ವಾಣಿ, ಮೋದಿ ಮತ್ತು ಶಾ ಜೊತೆ ಕುಳಿತು ಗಂಟೆಗಟ್ಟಲೆ ಮಾತನಾಡಲು ಆಗುತ್ತಿರಲಿಲ್ಲ. ಆದರೆ ಬೊಮ್ಮಾಯಿಗೆ ಹಿಂದಿ, ಇಂಗ್ಲಿಷ್‌ ಬರುವುದರಿಂದ ಇದು ಸಾಧ್ಯ ಇದೆ.

ಲಿಂಬಾವಳಿಗೆ ಮಿಸ್‌ ಆಗಿದ್ಹೇಗೆ?

ಕಳೆದ ಬಾರಿ ಯಡಿಯೂರಪ್ಪನವರ ಮನವೊಲಿಸಿ ಆರ್‌ಎಸ್‌ಎಸ್‌ ನಾಯಕರು ಸರಿ ಅಂದಿದ್ದರಿಂದ ಸಂಪುಟಕ್ಕೆ ಸೇರ್ಪಡೆ ಆಗಿದ್ದ ಅರವಿಂದ ಲಿಂಬಾವಳಿ ಈ ಬಾರಿ ಕೊನೇ ಕ್ಷಣದಲ್ಲಿ ಹೊರಗೆ ಹೋಗಿದ್ದು ಯಾಕೆ ಎಂಬುದು ಸ್ವತಃ ಲಿಂಬಾವಳಿ ಹಾಗೂ ರಾಜ್ಯದ ಇತರೆ ನಾಯಕರಿಗೂ ಅಚ್ಚರಿ ಆಗಿದೆ.

ಲಿಂಬಾವಳಿಯವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಲಾಗುತ್ತದೆ ಎಂಬ ಮಾತಿದೆ. ಆದರೂ ಹೈಕಮಾಂಡ್‌ ಮೂಲಗಳು ಇದನ್ನು ಖಚಿತಪಡಿಸುತ್ತಿಲ್ಲ. ಲಿಂಬಾವಳಿ ಅವರನ್ನು ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕೆಲಸಕ್ಕೆ ಹಚ್ಚಲಾದ ನಂತರ ಅಮಿತ್‌ ಶಾ ಜೊತೆ ಲಿಂಬಾವಳಿ ಆತ್ಮೀಯರಾಗಿದ್ದಾರೆ ಎಂಬ ಸುದ್ದಿಗಳ ನಡುವೆ ಕೊನೇ ಕ್ಷಣದಲ್ಲಿ ಲಿಂಬಾವಳಿ ಏಕೆ ಡ್ರಾಪ್‌ ಆದರು ಎನ್ನುವುದು ಕುತೂಹಲಕಾರಿ. ಅಶೋಕ್‌ರಿಗೂ ಲಿಂಬಾವಳಿಗೂ ಅಷ್ಟಕಷ್ಟೆ. ಹೀಗಾಗಿ ಮುನಿರತ್ನಗೆ ಅವಕಾಶ ನೀಡಿದ್ದಕ್ಕೆ ಲಿಂಬಾವಳಿ ಹೆಸರು ತಪ್ಪಿತು ಎನ್ನುವ ಚರ್ಚೆ ಇದೆ. ಆದರೂ ದಿಲ್ಲಿ ನಾಯಕರೇ ಕೊನೆ ಕ್ಷಣದಲ್ಲಿ ಲಿಂಬಾವಳಿ ಹೆಸರು ತೆಗೆಸಿದರು ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ಹೇಳುತ್ತಿವೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ