ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಜೊತೆಗಿನ ಮಾತುಕತೆಗಳ ಸಂದರ್ಭದಲ್ಲಿ ಆರೋಪ ಮುಕ್ತರಾಗುವವರೆಗೂ ಶಶಿಕಲಾ ಜೊಲ್ಲೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ನನ್ನ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತದೆ. ಬೇಕಾದರೆ ಸ್ಥಾನ ಖಾಲಿ ಇಡೋಣ ಎಂದು ಬೊಮ್ಮಾಯಿ ಹೇಳಿದ್ದರು. 

Lone woman Minister in Karnataka Cabinet Shashikala Jolle hls

ಸಂಪುಟ ರಚನೆಗೆ ದಿಲ್ಲಿಗೆ ಹೋಗುವ ಮೊದಲು ಯಡಿಯೂರಪ್ಪನವರ ಮನೆಗೆ ಹೋಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ವರಿಷ್ಠರಿಗೆ ಏನು ಹೇಳಬೇಕು’ ಎಂದು ಕೇಳಿದಾಗ ‘ಎಲ್ಲಾ ವಲಸಿಗರೂ ಸಚಿವರಾಗಬೇಕು. ಜೊತೆಗೆ ರೇಣುಕಾಚಾರ್ಯ, ರಾಜು ಗೌಡ ಮತ್ತು ಎಸ್‌.ಆರ್‌.ವಿಶ್ವನಾಥ ಮಂತ್ರಿ ಮಾಡಲು ಹೇಳು’ ಎಂದಿದ್ದರಂತೆ.

ದಿಲ್ಲಿಗೆ ಹೋದ ದಿನವೇ ಅಮಿತ್‌ ಶಾರನ್ನು ಭೇಟಿಯಾಗಿ ಮುಖ್ಯಮಂತ್ರಿಗಳು ಈ ಪ್ರಸ್ತಾಪ ಮಾಡಿದ್ದರು. ನಂತರ ನಡ್ಡಾ ಜೊತೆ ಚರ್ಚಿಸಿದ ಪಟ್ಟಿಯಲ್ಲಿ ರೇಣುಕಾಚಾರ್ಯ ಹೆಸರು ಇರಲಿಲ್ಲ. ಆದರೆ ರಾಜು ಗೌಡ ಮತ್ತು ಎಸ್‌.ಆರ್‌.ವಿಶ್ವನಾಥ ಹೆಸರು ಇತ್ತು. ಆದರೆ ಅರವಿಂದ ಬೆಲ್ಲದ ಹೆಸರು ಬೇಡ ಎಂದು ಯಡಿಯೂರಪ್ಪ ಪಟ್ಟು ಹಿಡಿದು ಅಮಿತ್‌ ಶಾಗೆ ಫೋನ್‌ ಮಾಡಿ ಹೇಳಿದಾಗ ಪರ-ವಿರೋಧ ಮಾತಾಡಿದ್ದ ಯಾರೂ ಬೇಡ ಎಂದು ಹೈಕಮಾಂಡ್‌ ನಿರ್ಧಾರ ತೆಗೆದುಕೊಂಡಿತು. ಆಗ ರಾಜು ಗೌಡರ ಹೆಸರು ಸಹಜವಾಗಿ ಹಾರಿತು.

ರೆಡ್ಡಿಗಳಲ್ಲಿ ಎಸ್‌.ಆರ್‌.ವಿಶ್ವನಾಥ್‌ ಮಂತ್ರಿ ಮಾಡಿದರೆ ಸತೀಶ್‌ ರೆಡ್ಡಿ ಬೇಸರ ಆಗುತ್ತಾರೆ ಮತ್ತು ಪ್ರಹ್ಲಾದ್‌ ಜೋಶಿ ಒತ್ತಡ ಹೇರಿದ್ದರಿಂದ ಸಿಎಂ ಬೊಮ್ಮಾಯಿ ಅವರು ಸೋಮಣ್ಣರನ್ನು ಉಳಿಸಿಕೊಳ್ಳುವ ತೀರ್ಮಾನ ಮಾಡಿದ್ದರಿಂದ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಆರ್‌ಎಸ್‌ಎಸ್‌ ಆಯ್ಕೆ ಆಗಿದ್ದ ಹಾಲಪ್ಪ ಆಚಾರ್‌ ಹೆಸರು ಒಳಗೆ ಬಂತು. ಹೀಗಾಗಿ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ದಲಿತರ ಪ್ರಾತಿನಿಧ್ಯ ಬೇಕೆಂದು ಪ್ರಭು ಚೌಹಾಣರ ಮಂತ್ರಿಸ್ಥಾನ ಉಳಿದುಕೊಂಡಿತು. ಏನೇ ಇರಲಿ ಯಡಿಯೂರಪ್ಪನವರು ಹೇಳಿದವರೆಲ್ಲಾ ಮಂತ್ರಿ ಆಗಲಿಲ್ಲ. ಆದರೆ ಯಡಿಯೂರಪ್ಪ ವಿರೋಧ ಮಾಡಿದ ಒಬ್ಬರೂ ಮಂತ್ರಿ ಆಗಿಲ್ಲ ಅನ್ನೋದೂ ಕಡಿಮೆ ಸಂಗತಿ ಅಲ್ಲ.

ಒಲ್ಲೆ ಒಲ್ಲೆ ಅಂದರೂ ಬಿಡದ ಜೊಲ್ಲೆ

ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿ ಆಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಇದ್ದ ಕೆಲ ಆರೋಪಗಳಿಂದಾಗಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಯಾರಿರಲಿಲ್ಲ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಜೊತೆಗಿನ ಮಾತುಕತೆಗಳ ಸಂದರ್ಭದಲ್ಲಿ ಆರೋಪ ಮುಕ್ತರಾಗುವವರೆಗೂ ಶಶಿಕಲಾ ಜೊಲ್ಲೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ನನ್ನ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತದೆ. ಬೇಕಾದರೆ ಸ್ಥಾನ ಖಾಲಿ ಇಡೋಣ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕೊನೆಗೆ ಪೂರ್ಣಿಮಾ ಶ್ರೀನಿವಾಸ್‌ ಮತ್ತು ಶಶಿಕಲಾ ಜೊಲ್ಲೆ ಹೆಸರು ತೆಗೆದುಕೊಂಡ ಜೆ.ಪಿ.ನಡ್ಡಾ ನೀವು ಬೆಂಗಳೂರಿಗೆ ಹೋಗಿ, ನಾವು ಫೈನಲ್‌ ಮಾಡಿ ಹೇಳುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳು ಬೆಂಗಳೂರಿಗೆ ಬಂದು ಇಳಿದ ಮೇಲೆ ಜೊಲ್ಲೆ ಹೆಸರನ್ನು ರಾಜಭವನಕ್ಕೆ ಕಳುಹಿಸಿ ಎಂದು ದಿಲ್ಲಿಯಿಂದ ತಿಳಿಸಲಾಗಿದೆ. ಮುಖ್ಯಮಂತ್ರಿಗಳ ಆಪ್ತ ಮೂಲಗಳು ಹೇಳುವ ಪ್ರಕಾರ ಒಂದು ಮೊಟ್ಟೆಯ ಪ್ರಕರಣದಿಂದ ಅನಗತ್ಯ ಮುಜುಗರಕ್ಕೆ ಈಡಾಗುವುದು ಬೇಡ ಎಂದು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ, ನಳಿನ್‌ ಕುಮಾರ್‌ ಕಟೀಲ್‌ ಎಲ್ಲರಿಗೂ ಅನ್ನಿಸಿತ್ತು.

ಹೀಗಾಗಿ ಮತ್ತೊಬ್ಬ ಮಹಿಳಾ ಶಾಸಕಿಯ ಹೆಸರು ತನ್ನಿ ಎಂದು ಹೇಳಿದಾಗ ರೂಪಾಲಿ ನಾಯಕ್‌ ಮತ್ತು ಪೂರ್ಣಿಮಾ ಶ್ರೀನಿವಾಸ್‌ ಹೆಸರು ಕೂಡ ಹೋಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಜೊಲ್ಲೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಆಯಿತು. ಅಂದಹಾಗೆ 15 ದಿನಗಳ ಕಾಲ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದ ಜೊಲ್ಲೆ ದಂಪತಿಗಳು,‘ಮೊಟ್ಟೆವಿಷಯದಲ್ಲಿ ನಮ್ಮನ್ನು ಸಿಗಿಸಲಾಗಿದೆ. ಮೊಟ್ಟೆಖರೀದಿಗೆ ಇನ್ನೂ ಟೆಂಡರ್‌ ಕರೆದಿಲ್ಲ. ಹೀಗಾಗಿ ಯಾವುದೇ ವ್ಯವಹಾರ ನಡೆದಿಲ್ಲ’ ಎಂದು ಮನವೊಲಿಸಿ ಯಶಸ್ವಿ ಆಗಿದ್ದಾರೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

 

Latest Videos
Follow Us:
Download App:
  • android
  • ios