- ಸಿಎಂ ಆಗಲು ಹೊರಟಿದ್ದ ಬೆಲ್ಲದ್‌ಗೆ ಸಚಿವ ಸ್ಥಾನವೂ ಸಿಗಲಿಲ್ಲ!- ಬಿಎಸ್‌ವೈ ಎದುರು ಹಾಕಿಕೊಂಡಿದ್ದೇ ಮುಳುವಾಯ್ತಾ..?- ಬಿಎಸ್‌ವೈ ಮಾತಿಗೆ ಅಸ್ತು ಎಂದ ಹೈ ಕಮಾಂಡ್

ಬೆಂಗಳೂರು (ಆ. 06): 3 ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಅಮಿತ್‌ ಶಾ ಊಟಕ್ಕೆ ಆರ್‌ಎಸ್‌ಎಸ್‌ ನಾಯಕರನ್ನು ಕರೆದಿದ್ದರಂತೆ. ಯಡಿಯೂರಪ್ಪಗೆ ಸರಿಸಮನಾದ ಲಿಂಗಾಯತ ನಾಯಕರು ಯಾರಿದ್ದಾರೆ ಎಂದು ಕೇಳಿದಾಗ ಆರ್‌ಎಸ್‌ಎಸ್‌ ನಾಯಕರು, ‘ಅಂತಹ ನಾಯಕರನ್ನು ತಯಾರು ಮಾಡಬೇಕಾಗುತ್ತದೆ’ ಎಂದು ಹೇಳಿ ಅರವಿಂದ ಬೆಲ್ಲದ ತರಹದ ಮೂರು ನಾಲ್ಕು ಜನ ಇದ್ದಾರೆ; ಅವರಿಗೆ ಅವಕಾಶ ಸಿಗಬೇಕು ಎಂದು ಹೇಳಿದ್ದರಂತೆ.

ಅಷ್ಟು ಹೇಳಿದ್ದೇ ತಡ ಅರವಿಂದ ಬೆಲ್ಲದ, ಯಡಿಯೂರಪ್ಪ ವಿರುದ್ಧ ಗುಟುರು ಹಾಕಲು ಆರಂಭಿಸಿದ್ದಾರೆ. ಅಲ್ಲಿಯವರೆಗೆ ಪ್ರಹ್ಲಾದ ಜೋಶಿಯವರ ಹಿಂದೆ ಓಡಾಡುತ್ತಿದ್ದ ಬೆಲ್ಲದ ಏಕ್‌ದಂ ವೇಗ ಪಡೆದುಕೊಂಡು ಯಡಿಯೂರಪ್ಪ ವಿರುದ್ಧ ಜಿಂದಾಲ್‌ ಸೇರಿದಂತೆ ಅನೇಕ ವಿಷಯದಲ್ಲಿ ಮಾತಾಡತೊಡಗಿದರು. ಅಲ್ಲಿಯವರೆಗೆ ಬೆಲ್ಲದಗೆ ಆರ್‌ಎಸ್‌ಎಸ್‌ ಬೆಂಬಲ ಇತ್ತು. ಆದರೆ ಯಾವಾಗ ನಾನೇ ಮುಖ್ಯಮಂತ್ರಿ ಎಂದು ಯೋಗೇಶ್ವರ್‌ ಜೊತೆ ಓಡಾಡಲು ಆರಂಭಿಸಿದರೋ ಆಗ ಆರ್‌ಎಸ್‌ಎಸ್‌ ಮತ್ತು ದಿಲ್ಲಿ ನಾಯಕರಿಗೆ ಮುಜುಗರ ಆಗತೊಡಗಿತು.

ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒಲ್ಲೆ ಎಂದರೂ ಸ್ಥಾನ ಪಡೆದಿದ್ಹೇಗೆ ಶಶಿಕಲಾ ಜೊಲ್ಲೆ?

ಮುಖ್ಯಮಂತ್ರಿ ಆಗಬೇಕೆಂದು ಹೊರಟಿದ್ದ ಬೆಲ್ಲದ ಹೆಸರನ್ನು ಹೇಳಲು ಒಬ್ಬ ಶಾಸಕ ಕೂಡ ತಯಾರಿರಲಿಲ್ಲ. ಕೊನೆಗೆ ಮಂತ್ರಿ ಮಾಡಲು ಅಡ್ಡಿ ಬಂದಿದ್ದೇ ಧಾರವಾಡ ಜಿಲ್ಲೆಯ ಇತರ ಶಾಸಕರ ವಿರೋಧ. ಕೊನೆಗೆ ಬೆಲ್ಲದರನ್ನು ತಗೊಂಡ್ರೆ ಹುಷಾರ್‌ ಎಂದು ಯಡಿಯೂರಪ್ಪ ಹಾಕಿದ ಗುಟುರಿಗೆ ಬೆಲ್ಲದ ಹೆಸರು ಹಾರಿಹೋಯಿತು. ರಾಷ್ಟ್ರೀಯ ಪಕ್ಷಗಳಲ್ಲಿ ಯಾವ ರೀತಿ ಎಷ್ಟು ಬುಸುಗುಡಬೇಕು ಎಂದು ಮೊದಲೇ ಅಂದಾಜು ಇರಬೇಕು. ನೀವು ದಿಲ್ಲಿ ಬೆಂಬಲ ಇದೆ ಎಂದು ಜಾಸ್ತಿ ಮಾತಾಡಿದರೆ ಅಕ್ಕಪಕ್ಕದವರು ನಿಮ್ಮ ಮೇಲೆ ಕಲ್ಲು ಎಸೆಯುತ್ತಾರೆ. ಅತಿಯಾದ ವೇಗ ರಾಜಕೀಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದಕ್ಕೆ ಬೆಲ್ಲದ ಒಂದು ಉದಾಹರಣೆ ಅಷ್ಟೆ.