ಜೆಡಿಎಸ್, ಕಾಂಗ್ರೆಸ್‌ನಿಂದ ರಾಜ್ಯ ಲೂಟಿ: ಕೇಂದ್ರ ಸಚಿವ ಅಮಿತ್ ಶಾ
ಜೆಡಿಎಸ್ ರಾಜ್ಯದಲ್ಲಿ ಕುಟುಂಬ ರಾಜಕಾರಣ ಮಾಡಿದರೆ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎರಡೂ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿವೆ. ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಹುಬ್ಬಳ್ಳಿ/ಬೆಳಗಾವಿ (ಜ.29): ಜೆಡಿಎಸ್ ರಾಜ್ಯದಲ್ಲಿ ಕುಟುಂಬ ರಾಜಕಾರಣ ಮಾಡಿದರೆ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎರಡೂ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿವೆ. ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಬೃಹತ್ ರೋಡ್ ಶೋ ಹಾಗೂ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಜನಸಂಕಲ್ಪ ಸಮಾವೇಶ ನಡೆಸಿದ ಶಾ, ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್, ತನ್ನ ಆಡಳಿತದ ಅವಧಿಯಲ್ಲಿ ಇಡೀ ರಾಜ್ಯದ ವ್ಯವಸ್ಥೆಯನ್ನು ಹಾಳು ಮಾಡಿದೆ. ಕಾಂಗ್ರೆಸ್, ಗಾಂಧಿ ಪರಿವಾರಕ್ಕೆ ಮಾತ್ರ ಸೀಮಿತವಾದರೆ, ಜೆಡಿಎಸ್ ಒಂದು ಕುಟುಂಬಕ್ಕೆ ಸೀಮಿತ ಪಕ್ಷವಾಗಿದೆ. ತಾತ, ತಂದೆ, ಮಗ, ಮೊಮ್ಮಗ, ಸೊಸೆಯ ಪಕ್ಷವಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ದೆಹಲಿ ನಾಯಕರು ಎಟಿಎಂ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ.
ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್
ಜಮ್ಮು-ಕಾಶ್ಮೀರದಲ್ಲಿ 370 ವಿಧಿಯನ್ನು ತೆಗೆದು ಹಾಕಿದ್ದು, ಪಿಎಫ್‌ಐ ಬ್ಯಾನ್ ಮಾಡಿದ್ದು ಬಿಜೆಪಿ ಸರ್ಕಾರ. ರಾಜ್ಯಕ್ಕೆ ಮೋದಿಯವರು ಮಹದಾಯಿ ನೀರು ಕೊಟ್ಟಿದ್ದಾರೆ. ಲಕ್ಷ, ಲಕ್ಷ ಮಹಿಳೆಯರಿಗೆ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಭಯೋತ್ಪಾದನೆ ನಿಗ್ರಹ ಮಾಡಿ ದೇಶಕ್ಕೆ ರಕ್ಷಣೆ ನೀಡಿದೆ ಎಂದರು. ಮುಂದಿನ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಪರಿವಾರವಾದಿ, ಭ್ರಷ್ಟಾಚಾರವಾದಿಗಳನ್ನು ದೂರ ಇಡಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ನೀಡಿ ಎಂದು ಮನವಿ ಮಾಡಿದರು.
ಕೋವಿಡ್‌ನಿಂದ ರಕ್ಷಣೆ: ನಮ್ಮ ಸರ್ಕಾರ ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೆ ಮಾರ್ಗ ಯೋಜನೆ ಮಾಡಿದೆ. ದೇಶದಲ್ಲಿನ ಬಡವರು, ದಲಿತರು, ಸ್ತ್ರೀಶಕ್ತಿಯನ್ನು ಉತ್ತೇಜಿಸುವ ಕೆಲಸ ಮಾಡಿದೆ. ದಲಿತ ಸಮುದಾಯದ ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗಿತ್ತು. ಈಗ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿಸಲಾಗಿದೆ. 3 ಲಕ್ಷ ಜನತೆಗೆ ಮನೆ, 10 ಕೋಟಿ ಜನತೆಗೆ ಶೌಚಾಲಯ, 13 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಿಸಲಾಗಿದೆ. ಕೋವಿಡ್ ಲಸಿಕೆಯನ್ನು 130 ಕೋಟಿ ಜನತೆಗೆ ಉಚಿತವಾಗಿ ನೀಡುವ ಮೂಲಕ ದೇಶವನ್ನು ಕೋವಿಡ್‌ನಿಂದ ರಕ್ಷಣೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿಯಿಂದ ಸರ್ಕಾರದ ಹಣ ವೃಥಾ ಪೋಲು: ಪ್ರಿಯಾಂಕ್ ಖರ್ಗೆ
ಸಿಎಂ ಅಭಿನಂದಿಸಿದ ಶಾ: ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದ ಅಮಿತ್ ಶಾ, ವೀರ ಸಾವರ್ಕರ್ ಅವರಿಗೆ ಸಹಾಯ ಮಾಡಿದ ಆಲೂರು ವೆಂಕಟರಾಯ ಅವರನ್ನು ಸ್ಮರಿಸಿದರು. ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಅನೇಕ ಕ್ರಾಂತಿವೀರರು ಯುದ್ಧದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ ಎಂದರು. ಭಾಷಣ ಆರಂಭಿಸುತ್ತಿದ್ದಂತೆಯೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನವಿಂದು. ಹಾಗಾಗಿ, ಎಲ್ಲರೂ ಚಪ್ಪಾಳೆ ಬಾರಿಸುವ ಮೂಲಕ ಶುಭಾಶಯ ಕೋರಬೇಕೆಂದ ಅವರು, ಸವದತ್ತಿ ಯಲ್ಲಮ್ಮದೇವಿ, ಕಿತ್ತೂರು ಚನ್ನಮ್ಮ, ಬಸವಣ್ಣ, ಕಲ್ಮಠ, ಸಿದ್ದಾರೂಢ ಮಠ, ಸಿದ್ದಯ್ಯ ಶ್ರೀಗಳಿಗೆ ನಮಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು.