ಕಾಂಗ್ರೆಸ್ ರಾಹುಲ್ ಗಾಂಧಿ ನಾಯಕತ್ವದಲ್ಲೇ ಕೊನೆಗಾಣಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಎಟಿಎಂ ಆಗಿಸಿಕೊಂಡಿದ್ದಾರೆ. ಇಲ್ಲಿನ ಹಣ ತೆಗೆದುಕೊಂಡು ಹೋಗಿ ದೆಹಲಿಯಲ್ಲಿ ಸುರಿಯಲಿದ್ದು, ಅಂಥವರಿಗೆ ಅಧಿಕಾರ ನೀಡಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಗೋರ್ಟಾ/ರಾಯಚೂರು (ಮಾ.27): ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಎಟಿಎಂ ಆಗಿಸಿಕೊಂಡಿದ್ದಾರೆ. ಇಲ್ಲಿನ ಹಣ ತೆಗೆದುಕೊಂಡು ಹೋಗಿ ದೆಹಲಿಯಲ್ಲಿ ಸುರಿಯಲಿದ್ದು, ಅಂಥವರಿಗೆ ಅಧಿಕಾರ ನೀಡಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಹುತಾತ್ಮರ ಸ್ಮಾರಕ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಹಾಗೂ ಧ್ವಜಸ್ತಂಭ ಅನಾವರಣಗೊಳಿಸಿ ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ 4 ಸಾವಿರ ಕೋಟಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾದರು.
ಕಾಂಗ್ರೆಸ್‌ನಿಂದ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ 104 ಸ್ಥಾನಗಳನ್ನು ಗಳಿಸಿದ್ದರೂ ಕೇವಲ 40 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಕುದುರೆ ಏರಿ ಸರ್ಕಾರ ರಚನೆ ಮಾಡಿಕೊಂಡು ಅಕ್ರಮ, ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಮುಂದೆ ರಾಜ್ಯದಲ್ಲಿ ಅಂಥ ಪರಿಸ್ಥಿತಿ ತರಬೇಡಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಲೂಟಿ ಮಾಡುವುದನ್ನು ಬಿಟ್ಟರೆ ಬೇರೆನೂ ಮಾಡುವುದಿಲ್ಲ. ರಾಜ್ಯವನ್ನು ಸಂಪೂರ್ಣ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮನವಿ ಮಾಡಿದರು.
ಹಳೆ ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಿ: ಅಮಿತ್ ಶಾ
ದೇಶದ ಜನ ಮೋದಿ ನೇತೃತ್ವದಲ್ಲಿ ಪ್ರಗತಿ ಪಥದತ್ತ ಸಾಗುವ ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ರಾಹುಲ್ ಗಾಂಧಿ ನಾಯಕತ್ವದಲ್ಲೇ ಕೊನೆಗಾಣಲಿದೆ. ಈಶಾನ್ಯ ರಾಜ್ಯಗಳಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದೇ ಇದಕ್ಕೆ ಸಾಕ್ಷಿ ಎಂದರು. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕಾರಣ ಮಾಡಿದ್ದಲ್ಲದೆ, ಈ ಭಾಗದ ಅಭಿವೃದ್ಧಿಗೆ .3 ಸಾವಿರ ಕೋಟಿ ನೀಡಿದ್ದಾರೆ. ಇದೀಗ ಬೊಮ್ಮಾಯಿ .5 ಸಾವಿರ ಕೋಟಿ ಘೋಷಣೆ ಮಾಡಿದ್ದು, ಇಲ್ಲಿನವರ ಕುರಿತ ಕಾಳಜಿಯ ಪ್ರತೀಕ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತದ ಸರ್ಕಾರ ರಚಿಸುವ ಶಕ್ತಿಯನ್ನು ಮತದಾರ ನೀಡಬೇಕು. ಆಗ ರಾಜ್ಯದಲ್ಲಿ ಮತ್ತಷ್ಟುಅಭಿವೃದ್ಧಿ ಪರ್ವವನ್ನು ಕಾಣುತ್ತೀರಿ ಎಂದು ತಿಳಿಸಿದರು.
ಮುಸ್ಲಿಮರ ಮೀಸಲು ಲಿಂಗಾಯತ, ಒಕ್ಕಲಿಗರಿಗೆ ಹಂಚಿ ನ್ಯಾಯ: ಅಮಿತ್ ಶಾ
ಗೋರ್ಟಾ ಲಕ್ಷ್ಮಿ ದೇಗುಲಕ್ಕೆ ಶಾ ಭೇಟಿ: ಗೋರ್ಟಾ ಗ್ರಾಮದ ಲಕ್ಷ್ಮಿ ದೇವಸ್ಥಾನದ ಮುಂದೆಯೇ ನಿಜಾಮ ಬೆಂಬಲಿತ ರಜಾಕಾರರು ಹೈದರಾಬಾದ್ ವಿಮೋಚನಾ ಹೋರಾಟಗಾರರ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹುತಾತ್ಮರ ಸ್ಮಾರಕ ಉದ್ಘಾಟನೆಗೆ ಆಗಮಿಸಿದ್ದ ಅಮಿತ್ ಶಾ ಅವರು ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಕೆಲ ಹೊತ್ತು ಅಲ್ಲಿನ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.