ಹಳೆ ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಿ: ಅಮಿತ್‌ ಶಾ

ಪಕ್ಷದ ಸಂಘಟನೆ ತುಸು ದುರ್ಬಲವಾಗಿರುವ ಹಳೆ ಮೈಸೂರು ಭಾಗ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯ ನಾಯಕರಿಗೆ ನೀಡಿದ್ದಾರೆ. 

Old Mysuru and Kalyana Karnataka Won More Seats Says Amit Shah gvd

ಬೆಂಗಳೂರು (ಮಾ.27): ಪಕ್ಷದ ಸಂಘಟನೆ ತುಸು ದುರ್ಬಲವಾಗಿರುವ ಹಳೆ ಮೈಸೂರು ಭಾಗ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯ ನಾಯಕರಿಗೆ ನೀಡಿದ್ದಾರೆ. ಭಾನುವಾರ ರಾತ್ರಿ ನಗರದ ಪಂಚತಾರಾ ಹೋಟೆಲ್‌ವೊಂದರಲ್ಲಿ ಸುದೀರ್ಘವಾಗಿ ನಡೆದ ಪಕ್ಷದ ಕೋರ್‌ ಕಮಿಟಿ ಮತ್ತು ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲಿ ರಾಜ್ಯ ಘಟಕದ ಎಲ್ಲ ಹಿರಿಯ ನಾಯಕರೂ ಉಪಸ್ಥಿತರಿದ್ದುದರಿಂದ ಅಮಿತ್‌ ಶಾ ಅವರು ಚುನಾವಣಾ ರಣತಂತ್ರ ಕುರಿತು ಸಮಾಲೋಚನೆ ನಡೆಸಿದರು. 

ಹಲವು ಸೂಚನೆ ಹಾಗೂ ಸಲಹೆಗಳನ್ನು ನೀಡಿದರು ಎನ್ನಲಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈಗಾಗಲೇ ತಮ್ಮ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಬಿಡುಗಡೆಗೊಳಿಸಿದ್ದರೂ ಅದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ನಾವು ನಮ್ಮ ಅಭ್ಯರ್ಥಿಗಳ ಘೋಷಣೆಯನ್ನು ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಬಳಿಕವೇ ಮಾಡೋಣ. ಆದರೆ, ಅದಕ್ಕೂ ಮೊದಲು ಪಕ್ಷದ ಹಿನ್ನಡೆಗೆ ಕಾರಣವಾಗಬಹುದಾದ ಅಂಶಗಳ ಬಗ್ಗೆ ಗಮನಹರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಅಮಿತ್‌ ಶಾ ವ್ಯಕ್ತಪಡಿಸಿದ್ದಾರೆ. 

ಮುಸ್ಲಿಮರ ಮೀಸಲು ಲಿಂಗಾಯತ, ಒಕ್ಕಲಿಗರಿಗೆ ಹಂಚಿ ನ್ಯಾಯ: ಅಮಿತ್‌ ಶಾ

ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಲು ಬೇಕಾಗುವಷ್ಟು ಸ್ಥಾನಗಳನ್ನು ಗಳಿಸಬೇಕಾದಲ್ಲಿ ಹಳೆ ಮೈಸೂರು ಭಾಗ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು. ಇಲ್ಲದಿದ್ದರೆ ಮತ್ತೆ ಅತಂತ್ರದತ್ತ ಬಂದು ನಿಲ್ಲಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆ ಎರಡು ಭಾಗಗಳಿಂದ ನಮ್ಮ ಪಕ್ಷದ ಪ್ರಬಲ ಅಭ್ಯರ್ಥಿಗಳು ಇಲ್ಲದ ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಥರನ್ನು ಕಣಕ್ಕಿಳಿಸಬೇಕು. ಅನ್ಯ ಪಕ್ಷದ ಮುಖಂಡರನ್ನು ಸೆಳೆದು ಕಣಕ್ಕಿಳಿಸಬೇಕು. ಜತೆಗೆ ನಮ್ಮ ಪಕ್ಷದ ಮುಖಂಡರು ಅನ್ಯ ಪಕ್ಷಗಳ ಪಾಲಾಗುವುದನ್ನು ನಿಗಾ ವಹಿಸಿ ತಡೆಯಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಸಹ ಉಸ್ತುವಾರಿ ಮನ್ಸುಖ್‌ ಮಾಂಡವಿಯ, ಅಣ್ಣಾಮಲೈ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಅಮಿತ್‌ ಶಾ ಕಾರಿಗೆ ಬೈಕಲ್ಲಿ ಅಡ್ಡ ಬಂದ ಯುವಕರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜ್ಯ ಭೇಟಿ ಹೆಚ್ಚಾಗಿದೆ. ಈ ನಡುವೆ ಅವರು ಭೇಟಿ ನೀಡಿದ ಕಡೆ ಭದ್ರತಾ ಲೋಪಗಳು ಮರುಕಳಿಸುತ್ತಿವೆ. ಭಾನುವಾರ ರಾತ್ರಿ ಅಮಿತ್‌ ಶಾ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳುವಾಗ ಭದ್ರತಾ ಲೋಪವಾಗಿದೆ. ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತ್‌ ಶಾ ರಾತ್ರಿ 10.45ರ ಸುಮಾರಿಗೆ ದೆಹಲಿಗೆ ವಾಪಸ್‌ ತೆರಳುತ್ತಿದ್ದರು. 

ಟ್ರ್ಯಾಲಿ ಕುರ್ಚಿಯಲ್ಲಿ ದೇವೇಗೌಡ ರ್ಯಾಲಿ: ಜೆಡಿಎಸ್‌ಗೆ ಬಹುಮತ ಕೊಡಿಯೆಂದ ಮಾಜಿ ಪ್ರಧಾನಿ

ಹೀಗಾಗಿ ರಾಜಭವನ ರಸ್ತೆಯಿಂದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಮಣಿಪಾಲ್‌ ಸೆಂಟರ್‌ ಎದುರು ಏಕಾಏಕಿ ನಾಲ್ವರು ಯುವಕರು ಬೈಕ್‌ನಲ್ಲಿ ಅಮಿತ್‌ ಶಾ ವಾಹನಕೆಕ್ಕೆ ಅಡ್ಡ ಬಂದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ, ಎಳೆಯಲು ಯತ್ನಿಸಿದ್ದಾರೆ. ಬಳಿಕ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಯಲ್ಲಿ ರೋಡ್‌ ಶೋ ಮಾಡುವಾಗ ಯುವಕನೊಬ್ಬ ಏಕಾಏಕಿ ಪ್ರಧಾನಿ ಅವರ ಕಾರು ಬಳಿ ತೆರಳಲು ಓಡಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios