ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ 2ಬಿ ಅಡಿ ಇದ್ದ ಶೇ.4ರಷ್ಟು ಮೀಸಲಾತಿ ರದ್ದು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

ಗೋರ್ಟಾ/ರಾಯಚೂರು/ಬೆಂಗಳೂರು (ಮಾ.27): ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ 2ಬಿ ಅಡಿ ಇದ್ದ ಶೇ.4ರಷ್ಟು ಮೀಸಲಾತಿ ರದ್ದು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದ ಮೀಸಲು ಸಂವಿಧಾನ ಬಾಹಿರವಾಗಿತ್ತು. ಈ ಮೀಸಲಾತಿಯನ್ನು ರದ್ದು ಮಾಡಿ ಲಿಂಗಾಯತ, ಒಕ್ಕಲಿಗರಿಗೆ ಹಂಚಿಕೆ ಮಾಡುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸಲಾಗಿದೆ. ಇದು ಐತಿಹಾಸಿಕ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೀದರ್‌ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ಭಾನುವಾರ ಹುತಾತ್ಮರ ಸ್ಮಾರಕ, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಪ್ರತಿ​ಮೆ ಹಾಗೂ ಧ್ವಜಸ್ತಂಭ ಅನಾವರಣಗೊಳಿಸಿ, ರಾಯಚೂರು ಜಿಲ್ಲೆ ದೇವ​ದುರ್ಗ ತಾಲೂ​ಕಿನ ಗಬ್ಬೂರು ಗ್ರಾಮ​ದಲ್ಲಿ ಭಾನು​ವಾರ 4 ಸಾವಿರ ಕೋಟಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾ​ಟನೆ ಮತ್ತು ಶಂಕುಸ್ಥಾಪನೆ ಕಾರ್ಯ​ಕ್ರ​ಮ ಉದ್ಘಾ​ಟಿಸಿ, ಬೆಂಗಳೂರಿನ ವಿಧಾನಸೌಧ ಎದುರು ಬಸವಣ್ಣ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿ ಅವರು ಮಾತ​ನಾ​ಡಿ​ದರು.

ಟ್ರ್ಯಾಲಿ ಕುರ್ಚಿಯಲ್ಲಿ ದೇವೇಗೌಡ ರ್ಯಾಲಿ: ಜೆಡಿಎಸ್‌ಗೆ ಬಹುಮತ ಕೊಡಿಯೆಂದ ಮಾಜಿ ಪ್ರಧಾನಿ

ದೇಶದ ಸಂವಿಧಾನ ನೀಡಿರುವ ಮೀಸಲಾತಿ ಸೌಕರ್ಯವನ್ನು ಕೆಲ ಧರ್ಮಗಳಷ್ಟೇ ಈವರೆಗೆ ಬಳಸಿಕೊಳ್ಳುತ್ತಿದ್ದವು. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಿಗೆ ಅವಕಾಶವಿಲ್ಲ. ಕಾಂಗ್ರೆಸ್‌ನ ತುಷ್ಟೀಕರಣ, ಮತ ಬ್ಯಾಂಕ್‌ ಆಸೆಯಿಂದ ಅಲ್ಪಸಂಖ್ಯಾತರಿಗೆ 2ಬಿ ಅಡಿ ಮೀಸಲಾತಿ ನೀಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ 2 ಬಿ ಅಡಿ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ತಲಾ ಶೇ.2ರಷ್ಟುಲಿಂಗಾಯತರು, ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದು ಶ್ಲಾಘನೀಯ, ಸಮರ್ಥನೀಯ ಎಂದರು. ರಾಜ್ಯ ಬಿಜೆಪಿ ಸರ್ಕಾ​ರದ ಮುಖ್ಯ​ಮಂತ್ರಿ ಬೊಮ್ಮಾಯಿ ಮೀಸ​ಲಾತಿ ಹಂಚಿ​ಕೆ​ಯ ನಿರ್ಧಾ​ರ ಅತ್ಯು​ತ್ತ​ಮ​ವಾ​ಗಿ​ದೆ. ಇದರ ಜತೆಗೆ ಬೊಮ್ಮಾಯಿ ಸರ್ಕಾರ ಪರಿ​ಶಿಷ್ಟಜಾತಿ​ಗಳ ಬಹು​ದಿ​ನ​ಗಳ ಬೇಡಿ​ಕೆ​ಯಾದ ಒಳ​ ಮೀ​ಸ​ಲಾ​ತಿ​ಯನ್ನೂ ಕಲ್ಪಿ​ಸಿ​ಕೊ​ಟ್ಟಿ​ರುವುದು ಸ್ತುತ್ಯರ್ಹ ಎಂದರು.

ಸಾವಿ​ರಾರು ಸಂಖ್ಯೆ​ಯಲ್ಲಿ ಸೇರಿದ್ದ ಜನಸ್ತೋಮ: ಹುತಾತ್ಮರ ಸ್ಮಾರಕ ಅನಾವರಣ ಕಾರ್ಯಕ್ರಮ ಗೋರ್ಟಾ (ಬಿ) ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. ಕಳೆದ 2014ರಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ್ದ ಅಮಿತ್‌ ಶಾ ಅವರಿಂದಲೇ ಈಗ ಉದ್ಘಾಟನೆ ನಡೆ​ದಿ​ದ್ದು ಮತ್ತಷ್ಟು ಕಳೆ ಮೂಡಿಸಿತ್ತು. ನಿಜಾಮ್‌ ಆಡಳಿತದಲ್ಲಿನ ರಜಾಕಾರರ ಹಾವಳಿಗೆ ತತ್ತರಿಸಿ ಹೋಗಿದ್ದ ಗೋರ್ಟಾ (ಬಿ) ಗ್ರಾಮದ ಹೊರವಲಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ವೇದಿಕೆಗೆ ಅಮಿತ್‌ ಶಾ ಆಗಮಿಸುತ್ತಲೇ ಕಿಕ್ಕಿರಿದು ಸೇರಿದ್ದ ಜನಸ್ತೋಮದ ಜೈ ಘೋಷದ ಸದ್ದು ಮುಗಿಲು ಮುಟ್ಟಿತ್ತು.

ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್‌ ಸಂಚು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಸಂಸದ ಉಮೇಶ ಜಾಧವ್‌, ತೆಲಂಗಾಣಾ ಬಿಜೆಪಿ ರಾಜ್ಯಧ್ಯಕ್ಷ ಬಂಡಿ ಸಂಜಯ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಮಹೇಶ ಟೆಂಗನಿಕಾಯಿ, ಶಾಸಕರಾದ ಶರಣು ಸಲಗರ, ರಘುನಾಥ ಮಲ್ಕಾಪೂರೆ, ಶಶೀಲ್‌ ನಮೋಶಿ ಹಾಗೂ ಎಂಜಿ ಮೂಳೆ ಸೇರಿದಂತೆ ಮತ್ತಿತರರು ಇದ್ದರು.